November 26, 2026

ದೋಹಾ: ‘ಕರ್ನಾಟಕ ರಾಜ್ಯೋತ್ಸವ ಕಪ್-2026 (ಸೀಸನ್-2)’ ಚಾಂಪಿಯನ್ ಪಟ್ಟ ಅಲಂಕರಿಸಿದ ಮರ್ಬು ತಂಡ

ರೋಚಕ ಫೈನಲ್‌ನಲ್ಲಿ ಹನಾನ್ ಸಿಸಿ ತಂಡಕ್ಕೆ ಸೋಲು; ಸಮಾರೋಪ ಸಮಾರಂಭದಲ್ಲಿ ಅರ್ಜುನ ಪ್ರಶಸ್ತಿ ವಿಜೇತೆ ಅನ್ನು ರಾಣಿ ಭಾಗಿ

ದೋಹಾ (ಕತಾರ್): ಭಾರತೀಯ ರಾಯಭಾರಿ ಕಚೇರಿಯ ಅಧೀನದ ಭಾರತೀಯ ಸಾಂಸ್ಕೃತಿಕ ಕೇಂದ್ರದ (ICC) ಸಹಯೋಗಿ ಸಂಸ್ಥೆಯಾದ ಕರ್ನಾಟಕ ಸಂಘ ಕತಾರ್ (KSQ) ಹಾಗೂ ಕರ್ನಾಟಕ ರಾಯಲ್ಸ್ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ‘ಕರ್ನಾಟಕ ರಾಜ್ಯೋತ್ಸವ ಕಪ್ (KRC) 2026 – ಸೀಸನ್ 2’ ಕ್ರಿಕೆಟ್ ಪಂದ್ಯಾವಳಿಯ ರೋಚಕ ಫೈನಲ್ ಪಂದ್ಯದಲ್ಲಿ ಹನಾನ್ ಸಿಸಿ (Hanan CC) ತಂಡವನ್ನು ಮಣಿಸಿದ ಮರ್ಬು (Marbu) ತಂಡವು ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.

ನವೆಂಬರ್ 17ರಿಂದ 21ರವರೆಗೆ ಬರ್ವಾ ವಿಲೇಜ್‌ನ ಕ್ರೀಕ್ ಸ್ಪೋರ್ಟ್ಸ್ (KREEQ Sports) ಮೈದಾನದಲ್ಲಿ ಐದು ದಿನಗಳ ಕಾಲ ನಡೆದ ಈ ಕ್ರಿಕೆಟ್ ಹಬ್ಬದಲ್ಲಿ ಒಟ್ಟು ಎಂಟು ತಂಡಗಳು ಪಾಲ್ಗೊಂಡು ಕ್ರೀಡಾಸ್ಫೂರ್ತಿ ಮೆರೆದವು.

ಅರ್ಜುನ ಪ್ರಶಸ್ತಿ ವಿಜೇತೆ ಅನ್ನು ರಾಣಿ ಭಾಗಿ: ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅರ್ಜುನ ಪ್ರಶಸ್ತಿ ವಿಜೇತೆ, ಅಂತಾರಾಷ್ಟ್ರೀಯ ಜಾವೆಲಿನ್ ಥ್ರೋ ಪಟು ಹಾಗೂ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಅನ್ನು ರಾಣಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿಜೇತರಿಗೆ ಪ್ರಶಸ್ತಿ ವಿತರಿಸಿದರು. ಭಾರತದಿಂದ ವಿಶೇಷವಾಗಿ ಆಗಮಿಸಿದ್ದ ಖ್ಯಾತ ನಿರೂಪಕಿ ಶಮೀರಾ ಬೆಳುವಾಯಿ ಕಾರ್ಯಕ್ರಮವನ್ನು ಆಕರ್ಷಕವಾಗಿ ನಿರೂಪಿಸಿ ಸಂಭ್ರಮಕ್ಕೆ ಮೆರುಗು ನೀಡಿದರು.

ರೋಚಕ ಹಣಾಹಣಿ ಮತ್ತು ಪ್ರದರ್ಶನ ಪಂದ್ಯಗಳು: ‘ಎ’ ಗುಂಪಿನಲ್ಲಿ (ಅಲಯನ್ಸ್ ಕತಾರ್, ಎಸಿಸಿ, ಹನಾನ್ ಸಿಸಿ, ಯುನೈಟೆಡ್ ಚಾಲೆಂಜರ್ಸ್) ಮತ್ತು ‘ಬಿ’ ಗುಂಪಿನಲ್ಲಿ (ಮರ್ಬು, ಬಿಟಿ ಗ್ಯಾಂಗ್, ಮಹಾರಾಷ್ಟ್ರ ಸ್ಟ್ರೈಕರ್ಸ್, ಲಗಾನ್ ಸಿಸಿ) ನಡೆದ ಜಿದ್ದಾಜಿದ್ದಿನ ಲೀಗ್ ಪಂದ್ಯಗಳ ಬಳಿಕ ಅಗ್ರ ನಾಲ್ಕು ತಂಡಗಳು ನಾಕೌಟ್ ಹಂತಕ್ಕೆ ಪ್ರವೇಶಿಸಿದವು. ಮೊದಲ ಸೆಮಿಫೈನಲ್‌ನಲ್ಲಿ ಬಿಟಿ ಗ್ಯಾಂಗ್ ವಿರುದ್ಧ ಹನಾನ್ ಸಿಸಿ ಜಯ ಸಾಧಿಸಿದರೆ, ಎರಡನೇ ಸೆಮಿಫೈನಲ್‌ನಲ್ಲಿ ಅಲಯನ್ಸ್ ಕತಾರ್ ತಂಡವನ್ನು ಮಣಿಸಿದ ಮರ್ಬು ತಂಡ ಫೈನಲ್‌ಗೆ ಲಗ್ಗೆಯಿಟ್ಟಿತು. ಅಂತಿಮ ಹಣಾಹಣಿಯಲ್ಲಿ ಮರ್ಬು ತಂಡವು ಸರ್ವಾಂಗೀಣ ಪ್ರದರ್ಶನ ನೀಡಿ ಪ್ರತಿಷ್ಠಿತ ಸೀಸನ್-2 ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.

ಪ್ರಮುಖ ಲೀಗ್ ಪಂದ್ಯಗಳ ಜೊತೆಗೆ ಬೆಸ್ಟ್ ಆಫ್ ಕರ್ನಾಟಕ vs ರೆಸ್ಟ್ ಆಫ್ ಇಂಡಿಯಾ, ಕೆಎ-ಲೇಡೀಸ್ vs ಒಎಸ್-ಲೇಡೀಸ್, ಭಾರತೀಯ ರಾಯಭಾರಿ ಕಚೇರಿ vs ಐಸಿಬಿಎಫ್/ಐಸಿಸಿ ಹಾಗೂ ಕೆಆರ್‌ಸಿ ಸಂಘಟನಾ ಸಮಿತಿ vs ಕರ್ನಾಟಕ ಸಹೋದರ ಸಂಘಟನೆಗಳ ಸದಸ್ಯರ ನಡುವೆ ನಾಲ್ಕು ವಿಶೇಷ ಪ್ರದರ್ಶನ ಪಂದ್ಯಗಳು ನಡೆದವು. ಮಹಿಳಾ ಪ್ರದರ್ಶನ ಪಂದ್ಯಕ್ಕೆ ಕತಾರ್ ರಾಷ್ಟ್ರೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಆಯೇಷಾ ವಿಶೇಷ ಅತಿಥಿಯಾಗಿ ಆಗಮಿಸಿ ಆಟಗಾರ್ತಿಯರನ್ನು ಹುರಿದುಂಬಿಸಿದರು.

ವೈಯಕ್ತಿಕ ಪ್ರಶಸ್ತಿ ವಿಜೇತರ ವಿವರ:

  • ಫೈನಲ್ ಪಂದ್ಯಶ್ರೇಷ್ಠ: ಜಾವದ್ (ಮರ್ಬು)
  • ಉತ್ತಮ ಬ್ಯಾಟ್ಸ್‌ಮನ್: ಸುಲ್ಫಾನ್ (ಮರ್ಬು)
  • ಉತ್ತಮ ಬೌಲರ್: ಬಿಪಿನ್ ಕುಮಾರ್ (ಮರ್ಬು)
  • ಉತ್ತಮ ಕ್ಷೇತ್ರರಕ್ಷಕ: ಜಾವದ್ (ಮರ್ಬು)
  • ಉತ್ತಮ ವಿಕೆಟ್ ಕೀಪರ್: ನಾಸರ್ ಮಂಜೇಶ್ವರ (ಅಲಯನ್ಸ್ ಕತಾರ್)

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಂಘ ಕತಾರ್ ಅಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ವಿಜೇತ ಮರ್ಬು ತಂಡ, ರನ್ನರ್-ಅಪ್ ಹನಾನ್ ಸಿಸಿ ಹಾಗೂ ಭಾಗವಹಿಸಿದ ಎಲ್ಲಾ ತಂಡಗಳನ್ನು ಅಭಿನಂದಿಸಿದರು. ಕೆಎಸ್‌ಕ್ಯೂ ಸಲಹೆಗಾರ ಮತ್ತು ಪಂದ್ಯಾವಳಿಯ ನಿರ್ದೇಶಕ ಡಾ. ಸಂಜಯ್ ಕುದರಿ ಅವರ ಮಾರ್ಗದರ್ಶನ ಹಾಗೂ ಸಂಘಟಕರ ಅವಿರತ ಶ್ರಮದಿಂದ ಸೀಸನ್-2 ಅಭೂತಪೂರ್ವ ಯಶಸ್ಸು ಕಂಡಿದೆ ಎಂದು ಅವರು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಕೆಎಸ್‌ಕ್ಯೂ ಸಲಹಾ ಸಮಿತಿ ಸದಸ್ಯರು, ಅಪೆಕ್ಸ್ ಬಾಡಿ ಪ್ರತಿನಿಧಿಗಳು ಮತ್ತು ಸಹೋದರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

error: Content is protected !!