November 26, 2026

ಶ್ರೀ ರಾಮಚಂದ್ರಾಪುರ ಮಠದ ‘ಗೋ ಸಮ್ಮಾನ ರಥ ಯಾತ್ರೆ’ಗೆ ಭವ್ಯ ಸ್ವಾಗತ

ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಮಂಗಳಾರತಿ; ದೇಶೀಯ ಗೋ ತಳಿಗೆ ರಾಷ್ಟ್ರೀಯ ಗೌರವ ನೀಡಲು ಆಗ್ರಹಿಸಿ ಸಹಿ ಸಂಗ್ರಹ ಅಭಿಯಾನ

ಭಟ್ಕಳ (ಉತ್ತರ ಕನ್ನಡ): ಶ್ರೀ ರಾಮಚಂದ್ರಾಪುರ ಮಠದ ವತಿಯಿಂದ ಹಮ್ಮಿಕೊಳ್ಳಲಾಗಿರುವ ‘ಗೋ ಸಮ್ಮಾನ ರಥ ಯಾತ್ರೆ’ಗೆ ತಾಲೂಕಿನಾದ್ಯಂತ ಭಕ್ತಿ ಹಾಗೂ ಶ್ರದ್ಧೆಯಿಂದ ಭವ್ಯ ಸ್ವಾಗತ ಕೋರಿ ಬರಮಾಡಿಕೊಳ್ಳಲಾಯಿತು.

ಮುರುಡೇಶ್ವರದ ಓಲಗ ಮಂಟಪದ ಬಳಿ ಭಟ್ಕಳ ಹವ್ಯಕ ವಲಯದ ಪ್ರಮುಖರು ಹಾಗೂ ಸಾರ್ವಜನಿಕರು ರಥವನ್ನು ಸ್ವಾಗತಿಸಿ, ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಶಿರಾಲಿಯ ನಾಗಮಾಸ್ತಿ ದೇವಸ್ಥಾನಕ್ಕೆ ಆಗಮಿಸಿದ ರಥವನ್ನು ದೇವಸ್ಥಾನ ಸಮಿತಿಯವರು ಬರಮಾಡಿಕೊಂಡಿದ್ದು, ಅರ್ಚಕ ವಿನಾಯಕ ಭಟ್ಟ ಮಂಗಳಾರತಿ ನೆರವೇರಿಸಿದರು.

ಗೋವಿನ ರಕ್ಷಣೆಯಿಂದ ಸನಾತನ ಧರ್ಮ ರಕ್ಷಣೆ: ನಂತರ ಮಣ್ಕುಳಿಯ ಶ್ರೀ ಹನುಮಂತ ಮತ್ತು ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ರಥಕ್ಕೆ ಭವ್ಯ ಸ್ವಾಗತ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುಭಾಷ ಎಂ. ಶೆಟ್ಟಿ, “ನಮ್ಮ ಸನಾತನ ಧರ್ಮದ ಉಳಿವಿಗಾಗಿ ಗೋವಿನ ರಕ್ಷಣೆಯಾಗಬೇಕು. ಭಾರತೀಯ ಗೋವಿಗೆ ರಾಷ್ಟ್ರೀಯ ಸಮ್ಮಾನ ದೊರೆಯಬೇಕು. ಗೋ ಸಮ್ಮಾನ ಯಾತ್ರೆಯ ಮೂಲಕ ನಡೆಯುತ್ತಿರುವ ಜನಜಾಗೃತಿ ಹಾಗೂ ಡಿಸೆಂಬರ್ 17ರಂದು ಬೆಂಗಳೂರಿನಲ್ಲಿ ನಡೆಯಲಿರುವ ಬೃಹತ್ ಗೋ ಸಮ್ಮಾನ ಕಾರ್ಯಕ್ರಮ ಸಂಪೂರ್ಣ ಯಶಸ್ವಿಯಾಗಲಿ” ಎಂದು ಹಾರೈಸಿದರು.

ಮುಂದುವರಿದು ಚೆನ್ನಪಟ್ಟಣ ಹನುಮಂತ ದೇವಸ್ಥಾನ ಹಾಗೂ ಕಿತ್ರೆ ದೇವಿಮನೆಗೆ ತೆರಳಿದ ರಥಕ್ಕೆ ಆಯಾ ದೇವಸ್ಥಾನಗಳ ಅರ್ಚಕರು ಮತ್ತು ಸಮಿತಿಯವರು ಪೂಜೆ ಸಲ್ಲಿಸಿದರು. ಅಂತಿಮವಾಗಿ ಮುರುಡೇಶ್ವರದಲ್ಲಿ ವಿಧಿವತ್ತಾಗಿ ಗೋ ಪೂಜೆ ನೆರವೇರಿಸುವ ಮೂಲಕ ಯಾತ್ರೆಯು ಮುಂದಿನ ಪಯಣ ಬೆಳೆಸಿತು.

ಸಹಿ ಸಂಗ್ರಹ ಅಭಿಯಾನ: ಭಾರತೀಯ ದೇಶೀಯ ಗೋ ತಳಿಗಳಿಗೆ ರಾಷ್ಟ್ರೀಯ ಗೌರವವನ್ನು ಘೋಷಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿ ಇದೇ ವೇಳೆ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಹೊನ್ನಾವರ ಮಂಡಳದ ಅಧ್ಯಕ್ಷ ಪಿ.ಎನ್. ಭಟ್ಟ, ಮಣ್ಕುಳಿ ಹನುಮಂತ ದೇವಸ್ಥಾನ ಸಮಿತಿ ಪ್ರಮುಖರು, ಗೋಪಾಲಕೃಷ್ಣ ದೇವಸ್ಥಾನದ ಅಧ್ಯಕ್ಷ ನಾರಾಯಣ ಶೆಟ್ಟಿ, ಉದಯ ಶೆಟ್ಟಿ, ಕಿತ್ರೆ ದೇವಿಮನೆ ಅಧ್ಯಕ್ಷ ವಿನಾಯಕ ಭಟ್ಟ, ಭವತಾರಿಣಿ ಪರಿಷತ್ ಅಧ್ಯಕ್ಷ ವಿಘ್ನೇಶ್ವರ ಉಪಾಧ್ಯಾಯ, ವಿನಯ ಉಪಾಧ್ಯಾಯ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ, ಪ್ರಮೋದ ಜೋಷಿ, ರಾಮನಾಥ ಬಳೇಗಾರ, ಬಾಲಕೃಷ್ಣ ಶಾಸ್ತ್ರಿ, ಗುರಿಕಾರ ಮಂಜುನಾಥ ಭಟ್ಟ ಕಾರಗದ್ದೆ, ಈರಾ ನಾಯ್ಕ ಹಾಗೂ ಸುರೇಂದ್ರ ಭಟ್ಕಳ ಸೇರಿದಂತೆ ಹಲವು ಗಣ್ಯರು ಮತ್ತು ಗೋಪ್ರೇಮಿಗಳು ಉಪಸ್ಥಿತರಿದ್ದರು.

About The Author

error: Content is protected !!