November 26, 2026

ಶಿರಾಲಿ ಮೂಲದ ಡಾ. ಸಚಿನ್ ಸದಾಶಿವ ಭಟ್ಟ ಅವರಿಗೆ ಪ್ರತಿಷ್ಠಿತ ‘ಎಲಿವೇಟ್-2026’ ಪ್ರಶಸ್ತಿ

ಮನೋವೈದ್ಯಕೀಯ ವಿಜ್ಞಾನ ಕ್ಷೇತ್ರದ ನ್ಯೂರೋಸ್ಟಿಮುಲೇಶನ್ ಸಂಶೋಧನೆಗೆ ರಾಜ್ಯ ಸರ್ಕಾರದ ಗೌರವ; ವೈದ್ಯಕೀಯ ಎಲೆಕ್ಟ್ರಾನಿಕ್ಸ್ ಮತ್ತು ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ

ಭಟ್ಕಳ (ಉತ್ತರ ಕನ್ನಡ): ತಾಲೂಕಿನ ಶಿರಾಲಿ ಮೂಲದ ಸಂಶೋಧಕ ಹಾಗೂ ಉದ್ಯಮಿ ಡಾ. ಸಚಿನ್ ಸದಾಶಿವ ಭಟ್ಟ ಅವರು ಕರ್ನಾಟಕ ಸರ್ಕಾರದ ವತಿಯಿಂದ ನವೋದ್ಯಮಗಳಿಗೆ (ಸ್ಟಾರ್ಟ್‌ಅಪ್) ನೀಡಲಾಗುವ ಅತ್ಯುನ್ನತ ಗೌರವವಾದ ಪ್ರತಿಷ್ಠಿತ ‘ಎಲಿವೇಟ್-2026’ (ELEVATE 2026) ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮನೋವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ಡಾ. ಸಚಿನ್ ಭಟ್ಟ ಅವರು ನಡೆಸಿರುವ ವಿನೂತನ ‘ನ್ಯೂರೋಸ್ಟಿಮುಲೇಶನ್’ (Neurostimulation) ಸಂಶೋಧನೆಗಾಗಿ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ. ವಿಶೇಷವೆಂದರೆ, ಇವರು ಈ ಹಿಂದೆಯೂ ಅತಿಕೆಂಪು (ಇನ್‌ಫ್ರಾರೆಡ್) ಕಿರಣಗಳನ್ನು ಬಳಸಿಕೊಂಡು ಮಣ್ಣಿನ ಪೋಷಕಾಂಶಗಳನ್ನು ನಿಖರವಾಗಿ ಅಳೆಯುವ ತಾಂತ್ರಿಕ ಮಾದರಿಯನ್ನು ಅಭಿವೃದ್ಧಿಪಡಿಸಿದ್ದಕ್ಕಾಗಿ ಸರ್ಕಾರದ ಪ್ರಶಸ್ತಿಗೆ ಪಾತ್ರರಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ವೈದ್ಯಕೀಯ ಎಲೆಕ್ಟ್ರಾನಿಕ್ಸ್ ಮತ್ತು ಕೃತಕ ಬುದ್ಧಿಮತ್ತೆಯಲ್ಲಿ ಸಂಶೋಧನೆ: ಡಾ. ಸಚಿನ್ ಭಟ್ಟ ಅವರು ಕುಮಟಾದಲ್ಲಿ ತಮ್ಮ ಪತ್ನಿ ಪ್ರೊ. ಅಲಕಾ ಅನಂತ ಅವರೊಂದಿಗೆ ಸೇರಿ ‘ಅಲರ್’ (Alar) ಎಂಬ ಹೆಸರಿನ ನವೋದ್ಯಮವನ್ನು ಮುನ್ನಡೆಸುತ್ತಿದ್ದು, ವೈದ್ಯಕೀಯ ಎಲೆಕ್ಟ್ರಾನಿಕ್ಸ್ ಹಾಗೂ ಕೃತಕ ಬುದ್ಧಿಮತ್ತೆ (AI) ಕ್ಷೇತ್ರಗಳಲ್ಲಿ ನಿರಂತರ ಸಂಶೋಧನೆ ನಡೆಸುತ್ತಿದ್ದಾರೆ.

ಜೊತೆಗೆ, ಉಡುಪಿಯ ಸೋದೆ ವಾದಿರಾಜ ಫೌಂಡೇಶನ್‌ನ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿರುವ ಇವರು, ಗ್ರಾಮೀಣ ಭಾಗದ ಯುವಜನರಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದಾರೆ. ಶಿರಾಲಿಯ ದಿ. ಸದಾಶಿವ ಪರಂ ಭಟ್ಟ ಹಾಗೂ ಶೈಲಜಾ ದಂಪತಿಯ ಪುತ್ರರಾಗಿರುವ ಡಾ. ಸಚಿನ್ ಅವರ ಈ ಸಾಧನೆಗೆ ಜಿಲ್ಲೆಯಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.

About The Author

error: Content is protected !!