March 2, 2026

ಬಹುಮುಖ ಪ್ರತಿಭೆ, ಶಿಕ್ಷಕ ಪಿ.ಆರ್.ನಾಯ್ಕ ಅವರಿಗೆಒಲಿದು ಬಂದ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

ಹೊನ್ನಾವರ: ಮಕ್ಕಳ ಗುಣಾತ್ಮಕ ಕಲಿಕೆಗೆ ಹಲವು ನಾವಿನ್ಯಯುತ ಚಟುವಟಿಕೆ ರೂಪಿಸಿ ನಾಡಿನ ಗಮನ ಸೆಳೆದ ಶಿಕ್ಷಕ ಪಿ.ಆರ್.ನಾಯ್ಕ ಅವರಿಗೆ ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಒಲಿದು ಬಂದಿದೆ. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಳೆದ 32 ವರ್ಷಗಳ ಕಾಲ ಸೇವೆಯಲ್ಲಿರುವ ಪಿ.ಆರ್.ನಾಯ್ಕ ಅವರು ಪ್ರಸ್ತುತ ಹೊನ್ನಾವರ ನಂ2. ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ನಲಿ-ಕಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಆಯೋಜಿಸಿದ ವಿದ್ಯಾ ಪ್ರವೇಶ ಕಲಿಕೆಗೆ ವಿಶೇಷ ಕಾರ್ಯ ಯೋಜನೆ ರೂಪಿಸಿ ಕಲಿಕೆಯಲ್ಲಿ ಪಾಠ ನಾಟಕ ಅಳವಡಿಸಿದ ಶಿಕ್ಷಕ ಎನ್ನುವ ಹೆಗ್ಗಳಿಕೆ ಇವರಿದ್ದಾಗಿದೆ. ಟೆಂಟ್‌ನಲ್ಲಿ ವಾಸ ಮಾಡುವ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ಹಾಡು, ನೃತ್ಯ, ನಾಟಕದ ಮೂಲಕ ಶಿಕ್ಷಣದಲ್ಲಿ ರಂಗಕಲೆ' ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದ್ದಾರೆ. ಮಕ್ಕಳಲ್ಲಿ ಸಾಹಿತ್ಯಾ ಶಕ್ತಿ ಮೂಡಿಸಲುಮಕ್ಕಳ ಸಾಹಿತ್ಯ ಕಮ್ಮಟ’ ಏರ್ಪಡಿಸಿ ಕಥೆ-ಕಾವ್ಯ ಕಟ್ಟುವ ಕುರಿತು ಹಿರಿಯ ಸಾಹಿತಿಗಳಿಂದ ಮಾರ್ಗದರ್ಶನ ಮಾಡಿದ್ದಾರೆ. ಶಾಲೆಯಿಂದ ಹೊರಗುಳಿದ ಮಕ್ಕಳ ಮನೆಗೆ ತಂಡ ರಚಿಸಿ ಪಾಲಕರ ಮನವೊಲಿಸಿ ಮಕ್ಕಳನ್ನು ಪುನಃ ಶಾಲೆಗೆ ತರಲು `ಚಿಣ್ಣರ ಚಿತ್ತಾರ’ ಕಾರ್ಯಕ್ರಮ ಆಯೋಜಿಸಿದ್ದಾರೆ.

ವಿಶೇಷ ಅಗತ್ಯವುಳ್ಳ ಮಕ್ಕಳ ಕುರಿತಾಗಿ ತಣ್ಣೀರು' ನಾಟಕ ರಚಿಸಿ ಹೊನ್ನಾವರ, ಭಟ್ಕಳ ತಾಲೂಕಿನಲ್ಲಿ ಪ್ರದರ್ಶಿಸಿ ಪಾಲಕರಲ್ಲಿ ಜಾಗೃತಿ ಮೂಡಿಸಿದ್ದಾರೆ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ರೂಢಿಸಲುಶಾಲೆಗಳತ್ತ ಸಾಹಿತಿಗಳು’ ಎಂಬ ಶಿರೋನಾಮದಡಿಯಲ್ಲಿ ಅನೇಕ ಸಾಹಿತಿಗಳನ್ನು ಶಾಲೆಗೆ ಕರೆಸಿ ಉಪನ್ಯಾಸ, ಕಾರ್ಯಾಗಾರ, ಕಥೆ-ಕಾವ್ಯ ಕಟ್ಟುವ ಪ್ರಾತ್ಯಕ್ಷಿಕೆ ನಡೆಸಿ ಮಕ್ಕಳ ಸಾಹಿತ್ಯಾ ಶಕ್ತಿಗೆ ಪ್ರೇರೇಪಿಸಿದ್ದಾರೆ. ಮಕ್ಕಳ ಗುಣಮಟ್ಟದ ಕಲಿಕೆಗೆ ಮೊದಲ ಪ್ರಾಶಸ್ತ್ಯ ನೀಡಿ ಅವರಲ್ಲಿರುವ ಸುಪ್ತ ಪ್ರತಿಭೆಗೆ ಅವಕಾಶ ಕಲ್ಪಿಸುವ ಚಿಣ್ಣರ ಚಿತ್ತಾರ, ಶಿಕ್ಷಣದಲ್ಲಿ ರಂಗಕಲೆ, ಬೇಸಿಗೆ ಶಿಬಿರ, ಪರಿಸರದ ಸುತ್ತ ಒಂದು ಸುತ್ತು, ಶರಾವತಿಯಲ್ಲೊಂದು ಜೀವ ವೈವಿಧ್ಯ ಪರಿಚಯ ಪಯಣ, ಕೂಲಿಯಿಂದ ಶಾಲೆಗೆ, ಬಾ ಬಾಲೆ ಶಾಲೆಗೆ, ಸಾಹಿತಿಗಳ ಚಿತ್ತ ಶಾಲೆಯುತ್ತ, ಕಥಾ- ಕಾವ್ಯ ಕಮ್ಮಟ, ಜಗುಲಿಯ ಮೇಲಿನ ಸಾಧಕರು ಮುಂತಾದ ಕಾರ್ಯಕ್ರಮಗಳಿಗೆ ವೇದಿಕೆ ಸಂಘಟಿಸಿ ಮಕ್ಕಳ ಪ್ರತಿಭೆಗೆ ಸಾಣೆ ಹಿಡಿದಿದ್ದಾರೆ.

ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಶಿಕ್ಷಕ ಪಿ.ಆರ್.ನಾಯ್ಕ ಅವರು ತಿಮ್ಮು, ಗುಲಗುಂಜಿ, ತಣ್ಣೀರು, ಡಾಕ್ಟರ್ ಮಾಮಾ, ನಮ್ಮವರು ನಮ್ಮ ಜನಾಂಗ, ಭಾವಾಭಿನಂದನೆ, ಪ್ರತಿಭಾ ಸಂಪನ್ನ, ದೇವಗಿರಿ, ಪಾಟಿಚೀಲ, ಅಕ್ಷರ ಸಂಗಾತಿ, ಜಿಲ್ಲೆಯ ಜನಪದ ಕಲೆ, ನಮ್ ಕಥೆ, ನಮ್ಮ ವ್ಯಥೆ ಮುಂತಾದ 25 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಅವರ `ಪಾಟಿಚೀಲ’ ಮಕ್ಕಳ ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಪರಿಷತ್ತಿನಿಂದ ಶಿಶು ಸಂಗಮೇಶ ದತ್ತಿ ಪುರಸ್ಕಾರ ಲಭಿಸಿದೆ. ಭಟ್ಕಳ ತಾಲೂಕಾ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯೂ, ರಾಜ್ಯಮಟ್ಟದ ಗುರು ಶ್ರೀ, ವಿಜ್ಞಾನ ಮಿತ್ರ ಪ್ರಶಸ್ತಿ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಇವರ ಮುಡಿಗೇರಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ ನೇಮಕರಾಗಿದ್ದಾರೆ.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ

About The Author

error: Content is protected !!