February 8, 2026

‘ದೈವ ಸಂಕಲ್ಪ – ಮಾಯಾ ಮೋಹಿನಿ’ ನಾಟಕಕ್ಕೆ ಭಾರೀ ಮೆಚ್ಚುಗೆ.

ಭಟ್ಕಳ:ತಾಲೂಕಿನಲ್ಲಿ ರಂಗಭೂಮಿ ನಾಟಕಗಳು ನಿಧಾನವಾಗಿ ನಶಿಸುತ್ತಿವೆ, ಸ್ಥಳೀಯ ಕಲಾವಿದರಿಗೆ ಸಮರ್ಪಕ ಪ್ರೋತ್ಸಾಹ ಸಿಗುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿರುವ ನಡುವೆಯೇ, ಸೋಡಿಗದ್ದೆ ಶ್ರೀ ಮಹಾಸತಿ ದೇವಿ ಜಾತ್ರೆಯ ಸಾಂಸ್ಕೃತಿಕ ವೇದಿಕೆಯಲ್ಲಿ ಪ್ರದರ್ಶನಗೊಂಡ ‘ದೈವ ಸಂಕಲ್ಪ – ಮಾಯಾ ಮೋಹಿನಿ’ ರಂಗಭೂಮಿ ನಾಟಕ ಸ್ಥಳೀಯ ಕಲಾವಿದರಿಗೆ ಹೊಸ ಉತ್ಸಾಹ ತುಂಬಿದೆ.


ಭಟ್ಕಳ ತಾಲೂಕಿನ ಸರ್ಪನಕಟ್ಟೆ, ಬೆಳ್ಕೆ, ಸೋಡಿಗದ್ದೆ ಸೇರಿದಂತೆ ವಿವಿಧ ಭಾಗಗಳ ಅನುಭವಿ ಹಾಗೂ ಉದಯೋನ್ಮುಖ ಕಲಾವಿದರ ಸಹಭಾಗಿತ್ವದಲ್ಲಿ ಸಿದ್ಧಗೊಂಡ ಈ ನಾಟಕ, ಯಾವುದೇ ವೈಸ್‌ ರೆಕಾರ್ಡಿಂಗ್ ಇಲ್ಲದೆ ನೈಜ ಧ್ವನಿಯಲ್ಲಿ ಪ್ರದರ್ಶನಗೊಂಡಿದ್ದು, ಪ್ರೇಕ್ಷಕರ ಭಾರೀ ಮೆಚ್ಚುಗೆಗೆ ಪಾತ್ರವಾಯಿತು. ವೃತ್ತಿಪರ ನಾಟಕ ಮಂಡಳಿಗಳಿಗೆ ಸಮನಾದ ತಾಂತ್ರಿಕತೆ, ಅಭಿನಯ ಹಾಗೂ ಕಥಾವಸ್ತುವಿನ ಸಮನ್ವಯ ನಾಟಕದ ಪ್ರಮುಖ ಬಲವಾಗಿದೆ.


ಪ್ರಥಮ ಪ್ರದರ್ಶನವೇ ರಾತ್ರಿ 3 ರವರೆಗೆ ಮುಂದುವರಿದರೂ ಮಕ್ಕಳು, ಮಹಿಳೆಯರು ಸೇರಿದಂತೆ ಎಲ್ಲ ವರ್ಗದ ಪ್ರೇಕ್ಷಕರು ಆಸಕ್ತಿಯಿಂದ ವೀಕ್ಷಿಸಿದರು. ಗ್ರಾಮೀಣ ದೈವಾರಾಧನೆ ಹಿನ್ನೆಲೆಯ ಕಥಾವಸ್ತು, ಜಮೀಂದಾರರ ದಬ್ಬಾಳಿಕೆ, ಊರಿನ ನಾಯಕರ ದ್ವಂದ್ವ ನಿಲುವು, ದೈವದ ಅನುಷ್ಠಾನಕ್ಕೆ ಗ್ರಾಮಸ್ಥರ ಒಗ್ಗಟ್ಟು ಹಾಗೂ ಹಾಸ್ಯದ ಸೂಕ್ತ ಲೇಪನ ನಾಟಕದ ಪ್ರಮುಖ ಆಕರ್ಷಣೆಯಾಗಿತ್ತು. ಜೀವಂತ ಸಂಭಾಷಣೆ, ಪರಿಣಾಮಕಾರಿ ಸಂಗೀತ ಸಂಯೋಜನೆ ಹಾಗೂ ಇಲೆಕ್ಟ್ರಾನಿಕ್ ಸ್ಕ್ರೀನ್‌ನ ಸಮರ್ಪಕ ಬಳಕೆ ನಾಟಕಕ್ಕೆ ವಿಶೇಷ ಕಳೆ ನೀಡಿತು.
ನಾಟಕವನ್ನು ರಚಿಸಿ ನಿರ್ದೇಶಿಸಿದ ಪತ್ರಕರ್ತ ಭಾಸ್ಕರ ನಾಯ್ಕ ಅವರು ನಾಲ್ಕು ವಿಭಿನ್ನ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದ ಪರಿಗೆ ಪ್ರೇಕ್ಷಕರು ಬೆಕ್ಕಸಗೊಂಡರು. ನಟ ಭಯಂಕರ ಅವರ ಅಭಿನಯ ಪ್ರೇಕ್ಷಕರನ್ನು ಸ್ಥಬ್ಧಗೊಳಿಸಿದರೆ, ಜಟ್ಟಿಗನ ಪಾತ್ರದಲ್ಲಿ ಸಾಕ್ಷಾತ್ ಜಟ್ಟಿಗನನ್ನೇ ಮೈಮೇಲೆ ಆಹ್ವಾನಿಸಿಕೊಂಡಂತೆ ತೋರಿಸಿದ ಅಭಿನಯ ಭಾವಪರವಶಗೊಳಿಸಿತು. ತಂಡದ ಮತ್ತೊಬ್ಬ ಕಲಾವಿದ ಹಾಗೂ ಪತ್ರಕರ್ತ ಲೋಕೇಶ್ ನಾಯ್ಕ ಅವರು ಅರ್ಚಕರ ಪಾತ್ರದಲ್ಲಿ ಹಾಸ್ಯ–ನಗೆ ಚಟಾಕಿ ಮೂಲಕ ಮನರಂಜಿಸಿದರು.


ಇತ್ತೀಚಿನ ದಿನಗಳಲ್ಲಿ ತಿಂಗಳುಗಳ ಅಭ್ಯಾಸದ ಬಳಿಕವೂ ಪ್ರೇಕ್ಷಕರ ಕೊರತೆಯಿಂದ ನಿರಾಸೆಗೊಂಡಿದ್ದ ಸ್ಥಳೀಯ ಕಲಾವಿದರಿಗೆ ಈ ನಾಟಕ ಆತ್ಮವಿಶ್ವಾಸ ತುಂಬಿದೆ ಎಂದು ಕಲಾಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಭಟ್ಕಳದ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ವೇದಿಕೆಗಳಲ್ಲಿ ಈ ನಾಟಕವನ್ನು ಮರುಪ್ರದರ್ಶನಗೊಳಿಸಬೇಕೆಂಬ ಬೇಡಿಕೆಯೂ ವ್ಯಕ್ತವಾಗಿದೆ.


ಸ್ಥಳೀಯ ರಂಗಭೂಮಿ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದಲ್ಲಿ ಭಟ್ಕಳದ ರಂಗಭೂಮಿ ಕಲೆ ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳಲಿದೆ ಎಂದು ಮಾಜಿ ಸೈನಿಕ ಶ್ರೀಕಾಂತ ನಾಯ್ಕ ಆಗ್ರಹಿಸಿದರು. ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕ್ರಮದಲ್ಲಿ ಭಾಸ್ಕರ ನಾಯ್ಕ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ ನಾಯ್ಕ, ಸಾಹಿತಿ ಶ್ರೀಧರ ಶೇಟ್, ನಾರಾಯಣ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

About The Author

error: Content is protected !!