ನೂಜ್ ಕೆಕ್ಕೋಡ್‌ನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ೨೫ನೇ ವರ್ಷದ ಬೆಳ್ಳಿ ಮಹೋತ್ಸವ
ಭಟ್ಕಳ: ಶಿಕ್ಷಕರು ಯಾವುದೇ ಸ್ವಾರ್ಥವಿಲ್ಲದೆ ಸಮಾಜಕ್ಕಾಗಿ ದುಡಿಯುತ್ತಾರೆ. ದೂರದ ಊರುಗಳಿಂದ ಬಂದು ಹಳ್ಳಿಗಾಡಿನ ಶಾಲೆಗಳಲ್ಲಿ ಮಕ್ಕಳಿಗೆ ಪಾಠ ಮಾಡುವ ಜವಾಬ್ದಾರಿ ಸುಲಭವಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಹೇಳಿದರು.
ತಾಲೂಕಿನ ಕುಗ್ರಾಮ ನೂಜ್ ಕೆಕ್ಕೋಡ್‌ನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲೆಯ ೨೫ನೇ ವರ್ಷದ ಬೆಳ್ಳಿ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಊರಿನ ಜನರು ಸದಾ ಶಿಕ್ಷಕರಿಗೆ ಬೆಂಬಲವಾಗಿ ನಿಲ್ಲಬೇಕು. ಆಗ ಮಾತ್ರ ಶಿಕ್ಷಣ ಕ್ಷೇತ್ರದಲ್ಲಿ ಅಮೂಲ್ಯ ಹಾಗೂ ಅಮೂಲಾಗ್ರ ಬದಲಾವಣೆ ಸಾಧ್ಯವೆಂದು ಹೇಳಿದರು.
ಕೆಕ್ಕೋಡ್–ಹೆಜ್ಜಿಲ್ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕುಂಬ್ರಿ ಮರಾಠಿ ಸಮುದಾಯದ ಜನರು ವಾಸವಿದ್ದು, ಅವರು ನಿಸ್ವಾರ್ಥ ಹಾಗೂ ದೈವಭಕ್ತಿಯುಳ್ಳ ಸಮುದಾಯವೆಂದು ಶ್ಲಾಘಿಸಿದರು. ಕುಂಬ್ರಿ ಮರಾಠಿ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಬದ್ಧವಾಗಿದ್ದು, ಸ್ಥಳೀಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಈ ವೇಳೆ ಶಾಲೆಯ ಆಡಳಿತ ಮಂಡಳಿ ಹಾಗೂ ಕುಂಬ್ರಿ ಮರಾಠಿ ಸಮುದಾಯದ ಪರವಾಗಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಸನ್ಮಾನಿಸಲಾಯಿತು. ಜೊತೆಗೆ ತಾಲೂಕಿನ ಕುಂಬ್ರಿ ಮರಾಠಿ ಸಮುದಾಯದಲ್ಲಿ ಪ್ರಪ್ರಥಮ ಬಾರಿಗೆ ಸರ್ಕಾರಿ ನೌಕರಿ ಪಡೆದ ಶಾಲೆಯ ಹಳೆಯ ವಿದ್ಯಾರ್ಥಿ, ಮಂಗಳೂರಿನಲ್ಲಿ ಪೊಲೀಸ್ ಕಾನಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿರುವ ಕೃಷ್ಣ ಕೆಕ್ಕೋಡ್ ಅವರನ್ನು ಗೌರವಿಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯ ದೇವಿದಾಸ ನಾಯ್ಕ ಅವರು ಶಾಲೆಯ ಇತಿಹಾಸ ಹಾಗೂ ಬೆಳವಣಿಗೆಗೆ ಸಹಕರಿಸಿದ ಶಿಕ್ಷಕರು ಮತ್ತು ಊರಿನ ಜನರ ಕುರಿತು ವರದಿ ವಾಚಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು, ಶಾಲೆಯ ಪ್ರಗತಿಗೆ ಶ್ರಮಿಸಿದ ಪ್ರಮುಖರು ಹಾಗೂ ಈ ಹಿಂದೆ ಶಾಲೆಯಲ್ಲಿ ಬೋಧಿಸಿದ ಗುರುಗಳನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ರಾತ್ರಿ ಊರಿನ ಕಬಡ್ಡಿ ಸಮಿತಿಯಿಂದ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯ ದೇವಿದಾಸ ನಾಯ್ಕ ಸ್ವಾಗತಿಸಿದರು. ಸಹಶಿಕ್ಷಕಿ ನಯನಾ ದೇವಾಡಿಗ ವಂದಿಸಿದರು. ಹೆಮ್ಮಾಡಿ ಜನತಾ ಕಾಲೇಜಿನ ಉಪನ್ಯಾಸಕ ಉದಯ ನಾಯ್ಕ ನಿರೂಪಿಸಿದರು.
ತಾಲೂಕಾ ನೌಕರ ಸಂಘದ ಅಧ್ಯಕ್ಷ ಎಂ.ಎನ್. ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ನಾಯ್ಕ, ಕುಂಟವಾಣಿ ಸಮೂಹ ಶಿಕ್ಷಣಾಧಿಕಾರಿ ಸುರೇಶ ಮುರುಡೇಶ್ವರ, ಹಾಡವಳ್ಳಿ ಪಂಚಾಯತ್ ಅಧ್ಯಕ್ಷ ಶ್ರೀಧರ ಶೆಟ್ಟಿ, ಜಿಲ್ಲಾ ಕುಂಬ್ರಿ ಮರಾಠಿ ಅಭಿವೃದ್ಧಿ ಸಂಘದ ಗೌರವಾಧ್ಯಕ್ಷ ದೇವರಾಜ ಮರಾಠಿ, ತಾಲೂಕಾ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ದೇವಯ್ಯ ಡಿ. ನಾಯ್ಕ (ಹೆಜ್ಜಿಲ್), ತಾಲೂಕಾ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಪ್ರಕಾಶ ಶಿರಾಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

More Stories
ನಿವೃತ್ತ ಶಿಕ್ಷಕ ಐ.ಡಿ. ಖಾನ್ ನಿಧನ
ಸೊನಾರಕೇರಿಯಲ್ಲಿ ದೈವಜ್ಞ ಸಮಾಜದ ರಥೋತ್ಸವ ವೈಭವ
ಯಕ್ಷಗಾನ ಶ್ರೇಷ್ಠ ಪರಂಪರಾ ಕಲೆ – ಗಜು ಭಟ್ಟ ಖರ್ವಾ