April 16, 2026

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧ: ಹೋರಾಟ ನಿಲ್ಲದು — ಅನಂತ ಹೆಗಡೆ ಅಶೀಸರ


ಭಟ್ಕಳ: ಉತ್ತರ ಕನ್ನಡ ಜಿಲ್ಲೆಯಲ್ಲಿ ಭೂಕುಸಿತದಂತಹ ಸಮಸ್ಯೆಗಳು ಹೆಚ್ಚುತ್ತಿರುವ ಸಂದರ್ಭದಲ್ಲಿಯೇ, ಈಗಾಗಲೇ ಅನೇಕ ಯೋಜನೆಗಳಿಗೆ ಭೂಮಿಯನ್ನು ಕಳೆದುಕೊಂಡಿರುವ ಜಿಲ್ಲೆಯ ಮೇಲೆ ಮತ್ತೊಂದು ಭಾರ ಹಾಕುವಂತೆ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಅರಣ್ಯ ಮತ್ತು ವನ್ಯಜೀವಿ ಕಾಯ್ದೆ ಉಲ್ಲಂಘನೆಯ ಅಂಶಗಳನ್ನು ಒಳಗೊಂಡಿರುವ ಈ ಯೋಜನೆ ತೀವ್ರ ಖಂಡನೀಯವಾಗಿದ್ದು, ಅದು ಸಂಪೂರ್ಣ ನಿಲ್ಲುವ ತನಕ ಹೋರಾಟ ನಿಲ್ಲುವುದಿಲ್ಲ ಎಂದು ಖ್ಯಾತ ಪರಿಸರವಾದಿ ಹಾಗೂ ಪಶ್ಚಿಮಘಟ್ಟಗಳ ಕಾರ್ಯಪಡೆಯ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿದ್ದಾರೆ.


ಸುಬ್ರಹ್ಮಣ್ಯದ ಕುಮಾರದಾರಾ ಉಳಿಸಿ ಹೋರಾಟದಲ್ಲಿ ಭಾಗವಹಿಸಲು ಶಿರಸಿಯಿಂದ ಸುಬ್ರಹ್ಮಣ್ಯಕ್ಕೆ ತೆರಳುವ ವೇಳೆ ಭಟ್ಕಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಶ್ಚಿಮಘಟ್ಟ ಉಳಿಸಿ ಹೋರಾಟ ಹಲವು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದ್ದು, ಈಗಾಗಲೇ ಅನೇಕ ಮಾರಕ ಯೋಜನೆಗಳ ವಿರುದ್ಧ ನಡೆದ ಹೋರಾಟಗಳಲ್ಲಿ ಜಯಗಳಿಸಿದ್ದೇವೆ ಎಂದು ಹೇಳಿದರು.


ಈಗ ೨೧ನೇ ಶತಮಾನದಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರುದ್ಧ ಹೋರಾಟ ಮುಂದುವರಿದಿದ್ದು, ಇದು ಶರಾವತಿ ಅಭಯಾರಣ್ಯವನ್ನೇ ಹಾನಿಗೊಳಿಸುವಂತಹ ಬೃಹತ್ ಜಲವಿದ್ಯುತ್ ಯೋಜನೆ ಆಗಿದೆ. ಜಿಲ್ಲೆ ಅತ್ಯಂತ ಸೂಕ್ಷ್ಮ ಪರಿಸರ ಪ್ರದೇಶವಾಗಿದ್ದು, ಭೂಕುಸಿತ, ಅರಣ್ಯ ನಾಶ ಹಾಗೂ ಅಭಯಾರಣ್ಯ ಕಾಯ್ದೆಗಳ ಉಲ್ಲಂಘನೆಗೆ ಕಾರಣವಾಗುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪಶ್ಚಿಮಘಟ್ಟ ಪ್ರದೇಶದ ಶಾಸಕರು, ಸಂಸದರು ಹಾಗೂ ಇತರೆ ಜನಪ್ರತಿನಿಧಿಗಳು ಒಗ್ಗಟ್ಟಿನಿಂದ ಈ ಯೋಜನೆಯನ್ನು ವಿರೋಧಿಸಬೇಕು. ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಸಭೆ ನಡೆಸಿ ಹೋರಾಟದ ಧ್ವನಿಯನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ ಎಂದರು.


ಹೋರಾಟವು ಎಲ್ಲಾ ಮುಖಗಳಲ್ಲಿ ನಡೆಯುತ್ತಿದ್ದು, ಸ್ವರ್ಣವಲ್ಲಿ ಸ್ವಾಮೀಜಿಯವರೂ ಜನಾಂದೋಲನದಲ್ಲಿ ಭಾಗವಹಿಸಿ ಮಹಾತ್ಮ ಗಾಂಧೀಜಿಯವರ ಮಾದರಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ಜಿಲ್ಲೆಯ ರೈತರು, ಮೀನುಗಾರರು, ತೋಟಿಗರು ಸಂಕಷ್ಟದಲ್ಲಿದ್ದು, ಸಾವಯವ ಕೃಷಿ, ಜೇನು ಕೃಷಿಗೆ ಉತ್ತೇಜನ ಹಾಗೂ ವಿವಿಧ ಯೋಜನೆಗಳಿಂದ ನಿರಾಶ್ರಿತರಾದವರಿಗೆ ಪುನರ್ವಸತಿ ಒದಗಿಸುವುದು ಅಗತ್ಯವಿದೆ ಎಂದು ಹೇಳಿದರು.


ಭಟ್ಕಳದ ಎಂಡೋಸಲ್ಫಾನ್ ಪೀಡಿತರಿಗೂ ಸಮರ್ಪಕ ಪುನರ್ವಸತಿ ಒದಗಿಸಬೇಕಾಗಿದೆ. ಇಂತಹ ಮೂಲಭೂತ ಸಮಸ್ಯೆಗಳನ್ನ ಬಿಟ್ಟು ಮತ್ತೊಂದು ಮಾರಕ ಯೋಜನೆ ಕೈಗೊಳ್ಳುವುದನ್ನು ಜಿಲ್ಲೆಯ ಪ್ರಜ್ಞಾವಂತ ನಾಗರಿಕರು ಯಾವತ್ತೂ ಒಪ್ಪುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

About The Author

error: Content is protected !!