April 15, 2026

ಕುಕ್ ನೀರು ಶಾಲೆಗೆ ಸುವರ್ಣ ಸಂಭ್ರಮ: ಏ.11-12ರಂದು ವೈಭವದ ಕಾರ್ಯಕ್ರಮ

ಭಟ್ಕಳ: ತಾಲೂಕಿನ ಹೆಬಳೆ ಸಮೀಪದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಕ್ ನೀರು ತನ್ನ ಸ್ಥಾಪನೆಯ 50ನೇ ವರ್ಷದ ಅಂಗವಾಗಿ ‘ಸುವರ್ಣ ಸಂಭ್ರಮ’ವನ್ನು ಏಪ್ರಿಲ್ 11 ಮತ್ತು 12ರಂದು ವಿಜೃಂಭಣೆಯಿಂದ ಆಚರಿಸಲು ಸಜ್ಜಾಗಿದೆ. ಜಿಲ್ಲಾ ಪಂಚಾಯತ್ ಉತ್ತರ ಕನ್ನಡ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಭಟ್ಕಳ ಹಾಗೂ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ.


ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಕೃಷ್ಣ ಎನ್. ನಾಯ್ಕ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಾಲೆ ಅರ್ಧ ಶತಮಾನ ಪೂರೈಸಿದ ಈ ಸಂದರ್ಭದಲ್ಲಿ ಗ್ರಾಮಸ್ಥರು, ಶಾಲೆಯ ಎಸ್‌ಡಿಎಂಸಿ, ಹಳೆ ವಿದ್ಯಾರ್ಥಿ ಸಂಘದ ಒಮ್ಮತದ ನಿರ್ಧಾರದಂತೆ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದರು.


1975ರಲ್ಲಿ ಕೇವಲ 25-35 ಮನೆಗಳಿದ್ದ ಚಿಕ್ಕ ಗ್ರಾಮದಲ್ಲಿ ಶಾಲೆಯು ಆರಂಭಗೊಂಡಿತು. ಗಣಪತಿ ಕಾಮತ್ ಅವರ ತಂದೆ ನಾರಾಯಣ ಕಾಮತ್ ಅವರು ಶಿಕ್ಷಣದ ಅಗತ್ಯತೆಯನ್ನು ಮನಗಂಡು ಸಭೆ ಕರೆದು ಶಾಲೆ ಆರಂಭಕ್ಕೆ ಮುಂದಾದರು. ಆರಂಭದಲ್ಲಿ ನಾರಾಯಣ ನಾಯ್ಕ ಅವರ ಜಾಗದಲ್ಲಿ ಸಣ್ಣ ಕಟ್ಟಡದಲ್ಲಿ ಶಾಲೆ ಶುರುವಾಗಿದ್ದು, ಬಳಿಕ ಗಣಪತಿ ಕಾಮತ್ ಅವರು 8 ಗುಂಟೆ ಜಾಗ ದಾನವಾಗಿ ನೀಡಿದರು. ಹಂತ ಹಂತವಾಗಿ ತರಗತಿಗಳು ಹಾಗೂ ಕೊಠಡಿಗಳು ಹೆಚ್ಚುತ್ತಾ ಇಂದು 50ನೇ ವರ್ಷದವರೆಗೆ ಶಾಲೆ ಉತ್ತಮ ರೀತಿಯಲ್ಲಿ ಬೆಳೆಯಲು ಕಾರಣವಾಗಿದೆ ಎಂದು ವಿವರಿಸಿದರು.


ಇದೇ ವೇಳೆ ಜಿಲ್ಲಾ ಮೀನುಗಾರಿಕಾ ಹಾಗೂ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ಶಾಲೆಗೆ ಒಟ್ಟು ₹13 ಲಕ್ಷ ದೇಣಿಗೆ ನೀಡಿರುವುದಾಗಿ ತಿಳಿಸಿದರು.
ಶಾಲೆಯ ಮುಖ್ಯ ಶಿಕ್ಷಕಿ ರೇಖಾ ಪಟಗಾರ ಮಾಹಿತಿ ನೀಡಿ, ಏಪ್ರಿಲ್ 11ರಂದು ವೆಂಕಟಾಪುರ ಶಾಲೆಯಿಂದ ಕುಕ್ ನೀರು ಶಾಲೆಯವರೆಗೆ ಚಂಡೆ ವಾದನದೊಂದಿಗೆ ಭವ್ಯ ಮೆರವಣಿಗೆ ನಡೆಯಲಿದೆ. ಜಾಗದ ದಾನಿಗಳು ಹಾಗೂ ಶಾಲೆಗೆ ಸೇವೆ ಸಲ್ಲಿಸಿದ ನಿವೃತ್ತ ಮುಖ್ಯ ಶಿಕ್ಷಕರನ್ನು ಮೆರವಣಿಗೆ ಮೂಲಕ ಕರೆತಂದು ಸನ್ಮಾನಿಸಲಾಗುತ್ತದೆ ಎಂದರು.
ಅಂದು ಬೆಳಿಗ್ಗೆ 10 ಗಂಟೆಗೆ ಬಹುಮಾನ ವಿತರಣಾ ಸಮಾರಂಭ ಹಾಗೂ ಮಕ್ಕಳಿಗೆ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಭೋಜನ ವ್ಯವಸ್ಥೆ ಇರಲಿದೆ. ಸಂಜೆ 6 ಗಂಟೆಗೆ ಸುವರ್ಣ ಮಹೋತ್ಸವ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸಚಿವ ಮಂಕಾಳ ವೈದ್ಯ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮಕ್ಕೆ ಕೃಷ್ಣ ನಾಯ್ಕ ಅಧ್ಯಕ್ಷತೆ ವಹಿಸಲಿದ್ದು, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಊರಿನ ಪ್ರಮುಖರು ಉಪಸ್ಥಿತರಿರಲಿದ್ದಾರೆ. ರಾತ್ರಿ 8 ಗಂಟೆಗೆ ಶಾಲಾ ವಿದ್ಯಾರ್ಥಿಗಳು ಹಾಗೂ ನೃತ್ಯ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಏಪ್ರಿಲ್ 12ರಂದು ಮಧ್ಯಾಹ್ನ 1 ಗಂಟೆಗೆ ಭೋಜನ ವ್ಯವಸ್ಥೆ ಇರುತ್ತದೆ. ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಮಾಜಿ ಶಾಸಕ ಸುನೀಲ ನಾಯ್ಕ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಕೃಷ್ಣ ನಾಯ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ರಾತ್ರಿ 8 ಗಂಟೆಗೆ ಶಾಂಭವಿ ನಾಟಕ ತಂಡದ ಕಲಾವಿದರಿಂದ ‘ಚಿಟ್ಟೆ’ ಎಂಬ ಸಾಮಾಜಿಕ ಎಐ ಆಧಾರಿತ ನಾಟಕ ಪ್ರದರ್ಶನ ನಡೆಯಲಿದೆ.


ಪತ್ರಿಕಾಗೋಷ್ಠಿಯಲ್ಲಿ ಕ್ಲಸ್ಟರ್ ಮಟ್ಟದ ಸಮೂಹ ಸಂಪನ್ಮೂಲ ವ್ಯಕ್ತಿ ಎ.ಎಚ್. ಶೇಖ್, ಎಸ್‌ಡಿಎಂಸಿ ಅಧ್ಯಕ್ಷ ವೆಂಕಟೇಶ ನಾಯ್ಕ, ಮಹೋತ್ಸವ ಸಮಿತಿ ರೂವಾರಿ ವೆಂಕಟರಮಣ ಮೊಗೇರ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣಪತಿ ನಾಯ್ಕ, ಗಣೇಶೋತ್ಸವ ಸೇವಾ ಸಮಿತಿ ಅಧ್ಯಕ್ಷ ವೆಂಕಟರಮಣ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

About The Author

error: Content is protected !!