ಭಟ್ಕಳ: ತಾಲೂಕಿನ ಮುರುಡೇಶ್ವರ ವ್ಯಾಪ್ತಿಯ ಕೈಕಿಣಿ ಗ್ರಾಮದ ಶಿರಾಣಿಕೇರಿ ಎಲ್‌ಪಿಎಸ್ ಶಾಲೆಯ ಮುಖ್ಯ ಶಿಕ್ಷಕರ ವರ್ಗಾವಣೆಯನ್ನು ವಿರೋಧಿಸಿ ಸ್ಥಳೀಯರು, ಎಸ್‌ಡಿಎಂಸಿ ಸದಸ್ಯರು ಹಾಗೂ ವಿದ್ಯಾರ್ಥಿಗಳ ಪಾಲಕರು ಶುಕ್ರವಾರ ತೀವ್ರ ಪ್ರತಿಭಟನೆ ನಡೆಸಿದರು.
ಮುಖ್ಯ ಶಿಕ್ಷಕರಾದ ಪ್ರಸಾದ್ ಎಚ್.ಎಸ್ ಅವರು ಸರ್ಕಾರದ ಆದೇಶದಂತೆ 2025ರ ನವೆಂಬರ್‌ನಲ್ಲಿ ಮಾರುಕೇರಿ ಪಂಚಾಯತ್ ವ್ಯಾಪ್ತಿಯ ಕುಂಟವಾಣಿ ಶಾಲೆಗೆ ವರ್ಗಾವಣೆಯಾಗಿದ್ದು, ಮಧ್ಯಂತರ ಕ್ರಮವಾಗಿ ಏಪ್ರಿಲ್ 9ರಂದು ಅವರನ್ನು ಬಿಡುಗಡೆಗೊಳಿಸುವಂತೆ ಸೂಚನೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ, ಶುಕ್ರವಾರ ಮಧ್ಯಾಹ್ನ ಶಾಲೆಗೆ ಆಗಮಿಸಿದ ಅವರು ಸಹ ಶಿಕ್ಷಕಿ ಹೇಮಾ ನಾಯ್ಕ ಅವರಿಗೆ ಜವಾಬ್ದಾರಿ ಹಸ್ತಾಂತರಿಸಲು ಮುಂದಾದಾಗ, ಸ್ಥಳೀಯರು ಶಾಲೆ ಮುಂದೆ ಸೇರಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರಸಾದ್ ಅವರು ಸುಮಾರು 18 ವರ್ಷಗಳಿಂದ ಇದೇ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಶಾಲೆಯ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. 2009ರಲ್ಲಿ ಜಿಲ್ಲಾ ಪಂಚಾಯತ್ ಅನುದಾನದಲ್ಲಿ ಮಂಜೂರಾದ ಬಾವಿ ಹಾಗೂ ನಂತರದ ವರ್ಷಗಳಲ್ಲಿ ನಡೆದ ಕಾಮಗಾರಿಗಳ ವಿಷಯದಲ್ಲಿಯೂ ಅವರು ಸ್ಪಷ್ಟತೆ ನೀಡಬೇಕೆಂದು ಆಗ್ರಹಿಸಿದರು.
ಇನ್ನೊಂದೆಡೆ, ಶಾಲೆಗೆ ಮಂಜೂರಾದ ಎಂಟು ಗುಂಟೆ ಜಾಗದಲ್ಲಿ ಕೇವಲ ಎರಡು ಗುಂಟೆ ಪ್ರದೇಶಕ್ಕೆ ಮಾತ್ರ ಕಂಪೌಂಡ್ ನಿರ್ಮಿಸಿ ಉಳಿದ ಜಾಗವನ್ನು ಬಿಟ್ಟುಬಿಟ್ಟಿರುವ ಬಗ್ಗೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದರ ನಡುವೆ, ವರ್ಗಾವಣೆಯನ್ನು ತಡೆಹಿಡಿಯುವಂತೆ ಧಾರವಾಡ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ನ್ಯಾಯಾಲಯದ ತೀರ್ಪು ಬರುವವರೆಗೆ ಶಿಕ್ಷಕರನ್ನು ಬಿಡುಗಡೆಗೊಳಿಸಬಾರದು ಎಂಬುದು ಅವರ ಆಗ್ರಹವಾಗಿದೆ. ಆದರೂ ಅಧಿಕಾರಿಗಳು ಕ್ರಮ ಕೈಗೊಂಡಿರುವುದನ್ನು ಖಂಡಿಸಿ ಧರಣಿ ನಡೆಸಿದರು.
“ನಮ್ಮ ಮನವಿಯನ್ನು ಪರಿಗಣಿಸದೆ ಶಿಕ್ಷಕರನ್ನು ಬಿಡುಗಡೆಗೊಳಿಸಿರುವುದು ಸರಿಯಲ್ಲ. ಇದನ್ನು ಸರಿಪಡಿಸದಿದ್ದರೆ ಕಾನೂನು ಹೋರಾಟ ಮುಂದುವರಿಸುತ್ತೇವೆ,” ಎಂದು ಎಚ್ಚರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪ್ರಸಾದ್ ಎಚ್.ಎಸ್ ಅವರು, “ಸರ್ಕಾರದ ಆದೇಶದಂತೆ ಕಾರ್ಯನಿರ್ವಹಿಸುತ್ತಿದ್ದೇನೆ. ಮೇಲಾಧಿಕಾರಿಗಳು ಅಥವಾ ನ್ಯಾಯಾಲಯದಿಂದ ನಿರ್ದೇಶನ ಬಂದಲ್ಲಿ ಮಾತ್ರ ವರ್ಗಾವಣೆಯನ್ನು ತಡೆಯಲು ಸಾಧ್ಯ,” ಎಂದು ಸ್ಪಷ್ಟಪಡಿಸಿದರು
ಶಾಲೆ ಎಸ್ ಡಿ ಎಂ ಸಿ ಅಧ್ಯಕ್ಷ ಜಾನು ಶಿವು ಮರಾಠಿ,ಎಸ್,ಡಿ.ಎಂ.ಸಿ ಸದಸ್ಯರಾದ ಬಾಬು ಲಿಂಗು ಮರಾಠಿ,ಕೃಷ್ಣ ಸುಕ್ರ ಮಾರಾಠಿ,ಪ್ರೇಮ ಬಾಬು ಮರಾಠಿ, ಸ್ಥಳೀಯರಾದ ಮಹಾಬಲೇಶ್ವರ ಗಣಪತಿ ಹೆಗಡೆ,ಹೊನ್ನ ಲಕ್ಷಣ ಮರಾಠಿ,ಲಕ್ಷಣ ನಾಜೀಯಾ ಮರಾಠಿ,ಗೌರಿ ದೇವೇಂದ್ರ ಮರಾಠಿ,ಲಕ್ಷ್ಮಿ ಅಣ್ಣಪ್ಪ ಮರಾಠಿ,ಪ್ರದೀಪ್ ಅಣ್ಣಪ್ಪ ಮರಾಠಿ ಉಪಸ್ಥಿತರಿದ್ದರು.


More Stories
ತೇಜಸ್ವಿ ನಾಯ್ಕರಿಗೆ ಕೇಂದ್ರದಲ್ಲಿ ಜಂಟಿ ಕಾರ್ಯದರ್ಶಿಯಾಗಿ ಪದೋನ್ನತಿ
ಬೈಲೂರಿನಲ್ಲಿ ಭಗವದ್ಗೀತೆಯ 3ನೇ ಅಧ್ಯಾಯ ಸಮರ್ಪಣೆ, ಮಾತೃವಂದನೆ ಕಾರ್ಯಕ್ರಮ ಯಶಸ್ವಿ
ಮೊಬೈಲ್ ಮೋಜಿನಿಂದ ಮಕ್ಕಳನ್ನು ಹೊರತರುವ ಅಗತ್ಯವಿದೆ : ರಾಮದಾಸ ಪ್ರಭು