ಹೊನ್ನಾವರ : ತಾಲೂಕಿನ ಖರ್ವಾ ಗ್ರಾಮದ ನಾಥಗೇರಿಯ ಶ್ರೀ ಮಾಸ್ತಿದೇವಿ ಮತ್ತು ಯಕ್ಷಿ ದೇವಿ ದೇವಸ್ಥಾನದ 18ನೇ ವಾರ್ಷಿಕ ವರ್ಧಂತಿ ಉತ್ಸವವು ಭಕ್ತಿ ಭಾವದಿಂದ ವಿಜೃಂಭಣೆಯಿಂದ ನಡೆಯಿತು.
ವರ್ಧಂತಿ ಉತ್ಸವದ ಅಂಗವಾಗಿ ಗಣಪತಿ ಪೂಜೆ, ಪುಣ್ಯಾಹ, ಕಲಶ ಸ್ಥಾಪನೆ, ಬಲಿ, ನವಗ್ರಹ ಹೋಮ, ಸ್ಥಾನಶುದ್ಧಿ ಹೋಮ, ಬಿಂಬಶುದ್ಧಿ ಹೋಮ, ಕಲಾವೃದ್ಧಿ ಹೋಮ, ಶ್ರೀ ಸತ್ಯನಾರಾಯಣ ವ್ರತ, ಬ್ರಹ್ಮಕಲಶಾಭಿಷೇಕ ಹಾಗೂ ಪೂರ್ಣಾಹುತಿ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ಮೊಗೇಗಾರ ದತ್ತಾತ್ರೇಯ ಭಟ್ಟ ಅವರ ನೇತೃತ್ವದಲ್ಲಿ ನೆರವೇರಿದವು.
ಉತ್ಸವ ಪ್ರಯುಕ್ತ ದೇವಿಗೆ ವಿಶೇಷ ಹೂವಿನ ಅಲಂಕಾರ ಸಮರ್ಪಿಸಲಾಗಿ, ಅಭಯ ಹಸ್ತ ರೂಪದಲ್ಲಿ ದೇವಿ ಭಕ್ತರ ಮನಸೆಳೆಯುವಂತೆ ಕಂಗೊಳಿಸುತ್ತಿದ್ದರು. ಗೇರುಸೊಪ್ಪಾದ ಶ್ರೀ ಗುತ್ತಿಕನ್ನಿಕಾ ಪರಮೇಶ್ವರಿ ದೇವಿಯ ಪಲ್ಲಕ್ಕಿಯನ್ನು ದೇವಳಕ್ಕೆ ಕರೆತಂದು ವಿಶೇಷ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಊರು ಹಾಗೂ ತಾಲೂಕಿನ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸಿ, ಹಣ್ಣು-ಕಾಯಿ ಸೇವೆ ಸೇರಿದಂತೆ ವಿವಿಧ ಸೇವೆಗಳನ್ನು ಸಲ್ಲಿಸಿ, ಶ್ರೀ ಮಾಸ್ತಿದೇವಿ ಮತ್ತು ಯಕ್ಷಿ ದೇವಿಯ ದರ್ಶನ ಪಡೆದು ಧನ್ಯರಾದರು.
ದೇವಾಲಯದ ಪ್ರಧಾನ ಅರ್ಚಕರಾದ ಗಣೇಶ ಗೌಡ ಅವರು ಪೂಜಾ ಕೈಂಕರ್ಯ ನೆರವೇರಿಸಿದರು. ಆಡಳಿತ ಮಂಡಳಿಯ ಅಧ್ಯಕ್ಷ ವಿಷ್ಣು ನಾಯ್ಕ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆಯ ನಂತರ ಮಧ್ಯಾಹ್ನ 1 ಗಂಟೆಯಿಂದ ಅನ್ನಸಂತರ್ಪಣೆ ನಡೆಯಿತು.
ವರದಿ : ವಿಶ್ವನಾಥ ಸಾಲ್ಕೋಡ ಹೊನ್ನಾವರ

More Stories
ಗುಣವಂತೆ ಶ್ರೀ ಶಂಭು ಶಂಭುಲಿಂಗೇಶ್ವರ ದೇವಾಲಯದಲ್ಲಿ ಧಾರ್ಮಿಕ ಸಭೆ ವೈಭವ
ಶ್ರೀ ಶಂಭು ಲಿಂಗೇಶ್ವರ ದೇವಸ್ಥಾನದ ನೂತನ ಶಿಲಾಮಯ ಶಿವಾಲಯ ಲೋಕಾರ್ಪಣೆ
ಸಿ.ಎ ಕನಸು ಹೊತ್ತ ಗ್ರಾಮೀಣ ಪ್ರತಿಭೆ ಚಿನ್ನಯಿ ಶೆಟ್ಟಿ, ಪಿಯುಸಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ