April 15, 2026

ವಿಧೇಯತೆಯಿಂದ ವಿದ್ಯಾರ್ಥಿಗಳಿಗೆ ಯಶಸ್ಸು – ಎಸ್. ಜಿ. ಭಟ್ಟ

ಸಂಗೀತ- ಸಂಸ್ಕೃತಿ- ಶಿಬಿರ 2026 ಉದ್ಘಾಟನೆ

ಹೊನ್ನಾವರ : ನಮ್ಮ ಹಿರಿಯರಿಂದ ಬಂದ ಶ್ರೀಮಂತ ಸಂಸ್ಕೃತಿಯನ್ನು ಉಳಿಸಿ ಬೆಳೆಸಿ ಮುಂದಿನ ತಲೆಮಾರಿಗೆ ದಾಟಿಸುವ ಜವಾಬ್ದಾರಿ ಇಂದಿನ ವಿದ್ಯಾರ್ಥಿಗಳ ಮೇಲಿದೆ. ಜ್ಞಾನದ ಜೊತೆಗೆ ವಿದ್ಯಾರ್ಥಿಗಳು ವಿನಯ ತಾಳ್ಮೆ ವಿಧೇಯತೆಯನ್ನು ಕಲಿತರೆ ಅವರ ಜೀವನದಲ್ಲಿ ಯಶಸ್ಸು ಸಿಗುತ್ತದೆ ಎಂದು ನಿವೃತ್ತ ಪ್ರಾಚಾರ್ಯರಾದ ಎಸ್. ಜಿ. ಭಟ್ಟ ಕವಲಕ್ಕಿ ಹೇಳಿದರು

ಅವರು ತಾಲೂಕಿನ ಕಲಭಾಗದ ಶ್ರೀಧರ ಹೆಗಡೆ ಅವರ ಮನೆಯಲ್ಲಿ ಶ್ರೀ ಕರಿಕಾನ ಪರಮೇಶ್ವರಿ ಮ್ಯೂಸಿಕ್ ಟ್ರಸ್ಟ್ (ರಿ.) ಆಶ್ರಯದಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಸಂಗೀತ-ಸಂಸ್ಕೃತಿ ಶಿಬಿರ 2026ನ್ನು ಉದ್ಘಾಟಿಸಿ ಮಾತನಾಡಿದರು.

ಸಾಮಾಜಿಕ ಜಾಲತಾಣಗಳ ಕಬಂಧ ಬಾಹುಗಳಲ್ಲಿ ಸಿಲುಕಿ ಮಕ್ಕಳು ತಮ್ಮ ಬಾಲ್ಯವನ್ನೇ ಕಳೆದುಕೊಳ್ಳುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮನಸ್ಸು ಅರಳಿಸುವ ಸಂಗೀತ, ಸಂಸ್ಕೃತಿ,ಧ್ಯಾನಗಳನ್ನು ಕಲಿಸುವ ಇಂತಹ ವಿಶೇಷ ಬೇಸಿಗೆ ಶಿಬಿರಗಳು ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ಪೂರಕವಾಗಲಿದೆ ಎಂದು ಅವರು ಹೇಳಿದರು.

ಅತಿಥಿಗಳಾದ ಬಿ. ಆರ್.ಪಿ ವೆಂಕಟೇಶ್ ನಾಯ್ಕೆ ಮಾತನಾಡಿ, ಸಂಗೀತದ ಪರಂಪರೆ ಇರುವ, ನಿಸರ್ಗದ ಮಡಿಲಲ್ಲಿ ವಸತಿ ಸಹಿತವಾಗಿ ಏಳು ದಿನಗಳ ಕಾಲ ಇಂತಹ ವಿಶೇಷ ಶಿಬಿರ ಆಯೋಜಿಸಿದ ಶ್ರೀಧರ ಹೆಗಡೆ ಕಲಭಾಗ ಹಾಗೂ ಅವರ ಕುಟುಂಬದ ಸಾಹಸ ದೊಡ್ಡದು. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಪ್ರಯೋಜನ ಪಡೆಯಬೇಕು ಎಂದು ಹೇಳಿದರು. ತಬಲಾಪಟು ಗೋಪಾಲಕೃಷ್ಣ ಹೆಗಡೆ ಕಲಭಾಗ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ನಂತರದಲ್ಲಿ ಕುಮಾರವ್ಯಾಸನ ಉದ್ಯೋಗ ಪರ್ವದ ಕರ್ಣಬೇಧನ ಭಾಗದ ಆಯ್ದ ಪದ್ಯಗಳ ಗಾಯನವನ್ನು ಶ್ರೀಧರ ಹೆಗಡೆ ಕಲಭಾಗ ಮಾಡಿದರೆ ಅದಕ್ಕೆ ಅರ್ಥಪೂರ್ಣವಾಗಿ ವ್ಯಾಖ್ಯಾನವನ್ನು ವಿನಾಯಕ ಎಸ್.ಎಂ. ಮಾಡಿದರು.

ವಿವಿಧ ವಯೋಮಾನದ ಶಿಬಿರಾರ್ಥಿಗಳು ಖುಷಿಯಿಂದ ದಿನವಿಡೀ ಕಾರ್ಯಕ್ರಮದಲ್ಲಿ ಭಾಗವಹಿಸಿ ಹೊಸ ಅನುಭವ ಪಡೆದರು. ಬರುವ ಒಂದು ವಾರದವರೆಗೆ ಚಿಣ್ಣರು ಈ ಶಿಬಿರದಲ್ಲಿ ಭಾಗವಹಿಸಿ ಗ್ರಾಮೀಣ ಜೀವನದ ಅನುಭವದ ಜೊತೆಗೆ ಸಂಗೀತ ಯೋಗ ಧ್ಯಾನ ಭಗವದ್ಗೀತೆಯ ಅಭ್ಯಾಸ ಮಾಡಲಿದ್ದಾರೆ.

About The Author

error: Content is protected !!