April 15, 2026

ತಲೆಯ ಮೇಲೆ ಚಪ್ಪಲಿ ಹೊತ್ತು ವಿನೂತನ ಪ್ರತಿಭಟನೆ: “ಮನೆ ಇಲ್ಲ, ವಿಷ ಕೊಡಿ” – ದಾಂಡೇಲಿ ಹೋರಾಟ ಸಮಿತಿ ಆಕ್ರೋಶ


ಕಾರವಾರ : ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ವತಿಯಿಂದ ಕಾರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಇಂದು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಲಾಯಿತು.


ಪ್ರತಿಭಟನಾಕಾರರು ತಲೆಯ ಮೇಲೆ ಪಾದರಕ್ಷೆಗಳನ್ನು ಹೊತ್ತು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಹಲವು ವರ್ಷಗಳಿಂದ ಸ್ಥಳೀಯ ಕಚೇರಿಗಳಿಗೆ ಅಲೆದಾಡುತ್ತಾ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಯತ್ನಿಸಿದರೂ ಫಲ ಸಿಗದ ಹಿನ್ನೆಲೆಯಲ್ಲಿ ಈ ರೀತಿಯ ವಿಶಿಷ್ಟ ಪ್ರತಿಭಟನೆ ನಡೆಸಲಾಗಿದೆ ಎಂದು ತಿಳಿಸಿದರು. ಪಾದರಕ್ಷೆಗಳು ಹರಿದು ಹೋಗಿರುವುದನ್ನು ಸಂಕೇತವಾಗಿ ತೋರಿಸುವ ಮೂಲಕ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿದರು.


ಈ ವೇಳೆ ಮಹಿಳೆಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಜನರ ಸಮಸ್ಯೆಗಳ ಕಡೆಗಣಿಸುತ್ತಿರುವ ರಾಜಕಾರಣಿಗಳ ವಿರುದ್ಧ ಅಸಮಾಧಾನ ಹೊರಹಾಕಿದರು. “ನಮಗೆ ವಾಸಿಸಲು ಮನೆ ಇಲ್ಲ, ವಿಷ ಕೊಡಿ” ಎಂದು ಜಿಲ್ಲಾಧಿಕಾರಿಯವರ ಬಳಿ ಅಳಲು ತೋಡಿಕೊಂಡು ತಮ್ಮ ಸಂಕಷ್ಟವನ್ನು ವ್ಯಕ್ತಪಡಿಸಿದರು.


ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ನಿರಂತರ ಹೋರಾಟದ ಫಲವಾಗಿ ಪ್ರಧಾನಮಂತ್ರಿ ಅವಾಸ್ ಯೋಜನೆ ಹಾಗೂ ರಾಜ್ಯ ಸರ್ಕಾರದ ಆಶ್ರಯ ಯೋಜನೆಯಡಿ 1106 ಮನೆಗಳ ಕಾಮಗಾರಿ ಪ್ರಾರಂಭವಾದರೂ, ಕೇವಲ 108 ಮನೆಗಳನ್ನು ಮಾತ್ರ ಹಂಚಿಕೆ ಮಾಡಲಾಗಿದೆ. 84 ಮನೆಗಳ ಕಾಮಗಾರಿ ಪೂರ್ಣಗೊಂಡಿದ್ದರೂ ವಿತರಣೆ ಆಗಿಲ್ಲ. ಉಳಿದ 998 ಮನೆಗಳ ಕಾಮಗಾರಿ ಇನ್ನೂ ಪ್ರಾರಂಭವಾಗಿಲ್ಲ ಎಂದು ಆರೋಪಿಸಿದರು.


ಪ್ರತಿಭಟನೆಯ ವೇಳೆ ಜಿಲ್ಲಾಧಿಕಾರಿಯವರು ಒಂದು ವಾರದೊಳಗೆ ಸಂಬಂಧಪಟ್ಟ ಅಧಿಕಾರಿಗಳನ್ನು ದಾಂಡೇಲಿಗೆ ಕಳುಹಿಸಿ ಕ್ರಮ ಕೈಗೊಳ್ಳುವುದಾಗಿ ಹಾಗೂ ಮುಂದೆಯೂ ಸ್ವತಃ ಭೇಟಿ ನೀಡುವುದಾಗಿ ಭರವಸೆ ನೀಡಿದರು.

ಮುಖ್ಯ ಬೇಡಿಕೆಗಳು:
ಆಶ್ರಯ ಯೋಜನೆಯಡಿ ಮಂಜೂರಾದ 1106 ಮನೆಗಳ ಕಾಮಗಾರಿ ಪುನರಾರಂಭಿಸಿ, ಸಂಪೂರ್ಣಗೊಳಿಸಲು ವಿಶೇಷ ಅನುದಾನ ಬಿಡುಗಡೆ ಮಾಡಬೇಕು.


ಗ್ರಹ ಮಂಡಳಿಯಿಂದ ನಿವೇಶನರಹಿತರಿಗೆ ನಿವೇಶನ ನೀಡಲು ತಕ್ಷಣ ಕ್ರಮ ಕೈಗೊಳ್ಳಬೇಕು.


ದಾಂಡೇಲಿ ಭೂ ಹಗರಣ ಹಾಗೂ ಆಸರೆಯ ಪಟಾ ವಿಷಯದಲ್ಲಿ ಲೋಕಾಯುಕ್ತ ತನಿಖೆ ನಡೆಸಬೇಕು.


ಹೊಸದಾಗಿ ಘೋಷಿಸಿದ ತಾಲೂಕುಗಳಿಗೆ ತಾಲೂಕು ಮಟ್ಟದ ಕಚೇರಿಗಳನ್ನು ಪ್ರಾರಂಭಿಸಬೇಕು.


ದಾಂಡೇಲಿ ಇ.ಎಸ್.ಐ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯನ್ನು ನಿವಾರಿಸಿ, ಮೇಲ್ದರ್ಜೆಗೇರಿಸಬೇಕು.


ಈ ಪ್ರತಿಭಟನೆಯಲ್ಲಿ ಸಮಿತಿಯ ಅಧ್ಯಕ್ಷ ಅಕ್ರಮ್ ಖಾನ್, ಡಾ. ಎಸ್.ಎಸ್. ಪಾಟೀಲ್, ಸಂಗನಗೌಡ ಹೂವಣ್ಣವರ, ಶಿವಕುಮಾರ್ ಎಸ್. ಪಾಟೀಲ್, ಬಸವರಾಜು ಸೇರಿದಂತೆ ಅನೇಕ ಮುಖಂಡರು, ಹೋರಾಟಗಾರರು ಹಾಗೂ ಮಹಿಳೆಯರು ಭಾಗವಹಿಸಿದರು.

About The Author

error: Content is protected !!