April 21, 2026

ಕವಲಕ್ಕಿ ಶ್ರೀ ಸುಬ್ರಹ್ಮಣ್ಯ ಪ್ರೌಢಶಾಲೆಗೆ ನವಚೈತನ್ಯ: ಉಚಿತ ಶಿಕ್ಷಣ ವ್ಯವಸ್ಥೆ ಉದ್ಘಾಟನೆ ಏ.16–17


ಹೊನ್ನಾವರ: ಕವಲಕ್ಕಿಯ ಶ್ರೀ ಸುಬ್ರಹ್ಮಣ್ಯ ಪ್ರೌಢಶಾಲೆಯಲ್ಲಿ ಉಚಿತ ಶಿಕ್ಷಣ ವ್ಯವಸ್ಥೆಯ ಉದ್ಘಾಟನೆ ಹಾಗೂ ವಿದ್ಯಾರ್ಥಿಗಳ ದತ್ತು ಸ್ವೀಕಾರ ಕಾರ್ಯಕ್ರಮವನ್ನು ಏಪ್ರಿಲ್ 16 ಮತ್ತು 17ರಂದು ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಎಸ್.ಆರ್. ಹೆಗಡೆ ತಿಳಿಸಿದರು.


ಮುಗ್ವಾದ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಭಾಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಮುಚ್ಚುವ ಹಂತಕ್ಕೆ ತಲುಪಿದ್ದ ಈ ಪ್ರೌಢಶಾಲೆಯನ್ನು ದೇವಸ್ಥಾನದ ಆಡಳಿತ ಮಂಡಳಿ ವಹಿಸಿಕೊಂಡು ಮುಂದುವರಿಸಲು ನಿರ್ಧರಿಸಿದೆ ಎಂದು ಹೇಳಿದರು. 1964ರಲ್ಲಿ ಸ್ಥಾಪಿತವಾದ ಈ ಶಾಲೆ ಇತ್ತೀಚಿನ ವರ್ಷಗಳಲ್ಲಿ ಆಂಗ್ಲ ಮಾಧ್ಯಮ ಶಾಲೆಗಳ ಪ್ರಭಾವದಿಂದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡು ಮುಚ್ಚುವ ಪರಿಸ್ಥಿತಿಗೆ ಬಂದಿತ್ತು ಎಂದು ವಿವರಿಸಿದರು.


ದೇವಸ್ಥಾನದ ಆಡಳಿತ ಮಂಡಳಿ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಹೆಜ್ಜೆ ಇಟ್ಟಿದ್ದು, ಶಾಲೆಯನ್ನು ಸಂಪೂರ್ಣ ಕನ್ನಡ ಮಾಧ್ಯಮದಲ್ಲಿ ಮುಂದುವರಿಸಲು ತೀರ್ಮಾನಿಸಿದೆ. ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ಉದ್ದೇಶದಿಂದ ದತ್ತು ಸ್ವೀಕಾರ ಯೋಜನೆ ಜಾರಿಗೆ ತರಲಾಗಿದೆ. ಒಬ್ಬ ದಾನಿ ₹11,000 ನೀಡುವುದರಿಂದ 8ರಿಂದ 10ನೇ ತರಗತಿ ತನಕ ಒಬ್ಬ ವಿದ್ಯಾರ್ಥಿಗೆ ಉಚಿತ ಶಿಕ್ಷಣ ಕಲ್ಪಿಸಲಾಗುವುದು ಎಂದು ತಿಳಿಸಿದರು.


ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲೀಷ್ ಹಾಗೂ ಕಂಪ್ಯೂಟರ್ ತರಬೇತಿಯನ್ನು ಸಹ ಉಚಿತವಾಗಿ ನೀಡಲಾಗುವುದು. ಶಾಲೆಯ ಮೂಲಸೌಕರ್ಯ ದುರಸ್ಥಿ ಕಾರ್ಯವೂ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.
ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಶಾಸಕ ದಿನಕರ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಏಪ್ರಿಲ್ 16ರಂದು ಸ್ವಾಮೀಜಿಯವರ ಆಗಮನವಾಗಲಿದ್ದು, ಮಧ್ಯಾಹ್ನ 2 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ನಿವೃತ್ತ ಪ್ರಧಾನ ಅರ್ಚಕ ರಾಮಚಂದ್ರ ಶಂಭು ಭಟ್ ಕೋಣ್ಮನೆ ಅವರಿಗೆ ಸನ್ಮಾನ ಹಾಗೂ ದೇವಸ್ಥಾನಕ್ಕೆ ಗಣಕೀಕರಣ ವ್ಯವಸ್ಥೆ ಒದಗಿಸಿದ ಕೆ.ಆರ್. ಕುಂಬಾರ ಅವರಿಗೆ ಗೌರವ ಸಲ್ಲಿಸಲಾಗುವುದು. ಮುರುಡೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಜಯರಾಮ ಅಡಿಗ ಉಪಸ್ಥಿತರಿರುವರು. ಸುಬ್ರಹ್ಮಣ್ಯ ಭಟ್ ಮೇಲಿನಗಂಟಿ ಅಭಿನಂದನಾ ನುಡಿಗಳನ್ನಾಡಲಿದ್ದಾರೆ.


ಏಪ್ರಿಲ್ 17 ಮತ್ತು 18ರಂದು ಶ್ರೀ ಗುರು ಪಾದುಕಾಪೂಜೆ ಹಾಗೂ ಶ್ರೀ ಗುರು ಭಿಕ್ಷಾಸೇವೆ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರಾದ ಎನ್.ಎಂ. ಭಟ್ಟ ಬೆಕ್ಕುತ್ತೆ, ನಾರಾಯಣ ಎಂ. ಹೆಗಡೆ ಆರೊಳ್ಳಿ, ಎಸ್.ಜಿ. ಹೆಗಡೆ ಹಾರೂರಿ, ಸುಬ್ರಹ್ಮಣ್ಯ ಭಟ್ ಬಿಡಕೆರೆ, ಎಸ್.ವಿ. ಭಟ್ ಹಾಗೂ ಸತ್ಯನಾರಾಯಣ ತೋಟಿ ಉಪಸ್ಥಿತರಿದ್ದರು.

ವರದಿ : ವಿಶ್ವನಾಥ ಸಾಲ್ಕೋಡ ಹೊನ್ನಾವರ

About The Author

error: Content is protected !!