April 18, 2026

ಭಟ್ಕಳ ನ್ಯೂ ಇಂಗ್ಲಿಷ್ ಶಾಲೆ ಪೂರ್ವ ವಿದ್ಯಾರ್ಥಿಗಳ ಸಮಾಗಮ ಏ.29ರಂದು

ಭಟ್ಕಳ: ದಿ ನ್ಯೂ ಇಂಗ್ಲಿಷ್ ಶಾಲೆಯ ಪೂರ್ವ ವಿದ್ಯಾರ್ಥಿಗಳ ಸಮಾಗಮ ಹಾಗೂ ಗುರುಗಳಿಗೆ ಗುರುವಂದನಾ ಕಾರ್ಯಕ್ರಮವು ಏಪ್ರಿಲ್ 29ರಂದು ಬೆಳಿಗ್ಗೆ 11 ಗಂಟೆಗೆ ಶಾಲಾ ಆವರಣದಲ್ಲಿ ಜರುಗಲಿದೆ ಎಂದು ಟ್ರಸ್ಟಿ ಮ್ಯಾನೆಜರ್ ರಾಜೇಶ ನಾಯಕ ತಿಳಿಸಿದರು.

ನಗರದ ಸುಧೀಂದ್ರ ಕಾಲೇಜಿನಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಒಂದು ಕಾಲದಲ್ಲಿ ಶಿಕ್ಷಣದ ಅವಕಾಶಗಳು ಅತ್ಯಂತ ಸೀಮಿತವಾಗಿದ್ದವು. ಭಟ್ಕಳ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರಾಥಮಿಕ ಮಟ್ಟದ ಕೆಲವೇ ಕನ್ನಡ ಮಾಧ್ಯಮ ಶಾಲೆಗಳು ಇದ್ದುದರಿಂದ, ವಿದ್ಯಾರ್ಥಿಗಳು ಮಾಧ್ಯಮಿಕ ಶಿಕ್ಷಣಕ್ಕಾಗಿ ಹೊನ್ನಾವರ, ಕುಮಟಾ ಮುಂತಾದ ಪಟ್ಟಣಗಳಿಗೆ ತೆರಳಬೇಕಾಗುತ್ತಿತ್ತು. ವಿಶೇಷವಾಗಿ ವಿದ್ಯಾರ್ಥಿನಿಯರ ಶಿಕ್ಷಣ ಬಹಳ ಕಷ್ಟಕರವಾಗಿತ್ತು ಎಂದು ವಿವರಿಸಿದರು.

ಈ ಹಿನ್ನೆಲೆಯಲ್ಲಿ 1935ರಲ್ಲಿ ನಾಗಪ್ಪ ವಾಮನ ನಾಯಕ, ರಾಮಕೃಷ್ಣ ನಾಯಕ ಹಾಗೂ ವಾಮನ ಗಣಪಯ್ಯ ಶಾನಭಾಗ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಭಟ್ಕಳ ಎಜ್ಯುಕೇಶನ್ ಟ್ರಸ್ಟ್ ಸ್ಥಾಪನೆಯಾಯಿತು. ಸಮಾಜಮುಖಿ ದಾನಿಗಳು ಮತ್ತು ಶಿಕ್ಷಣಾಭಿಮಾನಿಗಳ ಸಹಕಾರದಿಂದ ಟ್ರಸ್ಟ್ ಅಭಿವೃದ್ಧಿ ಕಂಡಿತು ಎಂದು ಹೇಳಿದರು.
ಅದೇ ವರ್ಷ ಜುಲೈ 4ರಂದು ದಿ ನ್ಯೂ ಇಂಗ್ಲಿಷ್ ಶಾಲೆ ಆರಂಭಗೊಂಡು, 34 ವಿದ್ಯಾರ್ಥಿಗಳೊಂದಿಗೆ ತನ್ನ ಶಿಕ್ಷಣ ಯಾತ್ರೆಯನ್ನು ಆರಂಭಿಸಿತು. ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಸಹ ಶಿಕ್ಷಣ ನೀಡುವ ಮೂಲಕ ಶಿಕ್ಷಣ ಕ್ರಾಂತಿಗೆ ನಾಂದಿ ಹಾಡಿತು. ಇಂದಿಗೆ 90 ವರ್ಷಗಳ ಸೇವೆಯನ್ನು ಪೂರೈಸಿರುವ ಈ ಶಾಲೆ ಶತಮಾನೋತ್ಸವದತ್ತ ಸಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಈ ಹಿನ್ನೆಲೆಯಲ್ಲಿ ಅಲ್ಯುಮ್ನಿ ರಿಯೂನಿಯನ್ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಹಳೆಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದರು. ಈಗಾಗಲೇ ಪೂರ್ವ ವಿದ್ಯಾರ್ಥಿಗಳನ್ನು ಸಂಪರ್ಕಿಸುವ ಕಾರ್ಯ ಆರಂಭಗೊಂಡಿದ್ದು, ಭಾಗವಹಿಸಲು ಆಸಕ್ತರು 9113871471 ಸಂಖ್ಯೆಗೆ ಕರೆ ಮಾಡಿ ನೋಂದಣಿ ಮಾಡಿಕೊಳ್ಳಬಹುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬಿಎಟಿ ಅಧ್ಯಕ್ಷ ಡಾ. ಸುರೇಶ್ ನಾಯಕ, ಟ್ರಸ್ಟಿಗಳಾದ ಪ್ರದೀಪ ಪೈ, ನಾಗೇಶ ಭಟ್, ಶ್ರೀಧರ ಶ್ಯಾನಭಾಗ, ರಮೇಶ್ ಖಾರ್ವಿ, ಸುಧೀಂದ್ರ ಕಾಲೇಜಿನ ಪ್ರಾಂಶುಪಾಲ ಶ್ರೀನಾಥ ಪೈ, ನ್ಯೂ ಇಂಗ್ಲಿಷ್ ಪಿಯು ಕಾಲೇಜಿನ ಪ್ರಾಂಶುಪಾಲ ವೀರೇಂದ್ರ ಶ್ಯಾನಭಾಗ, ವಿದ್ಯಾಭಾರತಿ ಮುಖ್ಯೋಪಾಧ್ಯಾಯಿನಿ ರೂಪಾ ಖಾರ್ವಿ, ನ್ಯೂ ಇಂಗ್ಲಿಷ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಗಣಪತಿ ಶಿರೂರು ಸೇರಿದಂತೆ ಇತರರು ಉಪಸ್ಥಿತರಿದ್ದರು.

About The Author

error: Content is protected !!