April 30, 2026

ವಿದ್ಯೆಯ ಜೊತೆ ನೈತಿಕತೆ, ವಿನಯವೂ ಅಗತ್ಯ: ವಿದ್ಯಾದೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ

ಭಟ್ಕಳ: ವಿದ್ಯೆಯೊಂದಿಗೆ ಅನುಭವ, ನೈತಿಕತೆ ಹಾಗೂ ವಿನಯವೂ ಬೆಳೆಸಿಕೊಳ್ಳಬೇಕು ಎಂದು ಗೋಕರ್ಣ ಪರ್ತಗಾಳಿ ಮಠಾಧೀಶರಾದ ಶ್ರೀಮದ್ ವಿದ್ಯಾದೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಹೇಳಿದರು.


ಅವರು ಬುಧವಾರ ಇಲ್ಲಿನ ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲೀಷ್ ಪಿಯು ಕಾಲೇಜಿನ ನೂತನ ಕಟ್ಟಡವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ೯೦ ವರ್ಷಗಳ ಹಿಂದೆ ಹಿರಿಯರು ಶಿಕ್ಷಣ ಸಂಸ್ಥೆಯೊಂದನ್ನು ನಿರ್ಮಿಸಿ ಅದಕ್ಕೆ ಭಟ್ಕಳದ ಹೆಸರನ್ನು ಇಟ್ಟು ಉದಾರತೆ ಮೆರೆದಿದ್ದಾರೆ. ಅಂದು ಸಣ್ಣ ಸಸಿಯಂತೆ ಆರಂಭವಾದ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿರುವುದು ಸಂತಸದ ವಿಚಾರವಾಗಿದೆ. ಕೇವಲ ಕಾಲೇಜಿನ ಹೆಸರಿಗಿಂತ, ಅದರೊಳಗೆ ವಿದ್ಯಾರ್ಥಿಗಳಿಗೆ ನೀಡುವ ಗುಣಮಟ್ಟದ ಶಿಕ್ಷಣ ಮತ್ತು ಹೊಸ ಆವಿಷ್ಕಾರಗಳು ಮುಖ್ಯವಾಗಿವೆ ಎಂದು ತಿಳಿಸಿದರು.


ವಿದ್ಯಾರ್ಥಿಗಳಲ್ಲಿ ಕೇವಲ ಜ್ಞಾನವಿದ್ದರೆ ಸಾಕಾಗುವುದಿಲ್ಲ, ಅದರೊಂದಿಗೆ ಕೌಶಲ್ಯವೂ ಅಗತ್ಯ. ಕೇವಲ ಅಂಕಗಳ ಹಿಂದೆ ಓಡುವುದಕ್ಕಿಂತ, ಜೀವನಪರವಾದ ವಿದ್ಯೆಯನ್ನು ಅರಿತುಕೊಳ್ಳಬೇಕು. ತಮ್ಮ ಪ್ರಿಯ ಗುರುಗಳು ಅಡಿಗಲ್ಲು ಹಾಕಿ ಆರಂಭಿಸಿದ ಸಂಸ್ಥೆಯೊಂದರ ನೂತನ ಕಟ್ಟಡವನ್ನು ಹಸ್ತಾ ನಕ್ಷತ್ರದಲ್ಲೇ ಹಸ್ತಾಂತರಿಸುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಚಿವ ಮಂಕಾಳ ವೈದ್ಯ ಮಾತನಾಡಿ, ಭಟ್ಕಳ ಎಜುಕೇಷನ್ ಟ್ರಸ್ಟ್‌ಗೆ ತಾನು ಸದಾ ಸಹಕಾರ ನೀಡುವುದಾಗಿ ತಿಳಿಸಿದರು. ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಗಳಿಗೆ ಪ್ರಾಥಮ್ಯ ನೀಡುವುದಾಗಿ ಅವರು ಹೇಳಿದರು.
ಹಳೆಯ ವಿದ್ಯಾರ್ಥಿಗಳಾದ ಸದಾನಂದ ಬಾಳಿಗಾ, ದೇವೇಂದ್ರ ನಾಯ್ಕ ಹಾಗೂ ಹಾಂಗ್ಯೋ ಐಸ್‌ಕ್ರೀಮ್ ದಿನೇಶ್ ಪೈ ತಮ್ಮ ಅನುಭವಗಳನ್ನು ಹಂಚಿಕೊಂಡರು.


ಬಿಇಟಿ ಅಧ್ಯಕ್ಷ ಡಾ. ಸುರೇಶ್ ನಾಯಕ್, ಟ್ರಸ್ಟಿ-ಮ್ಯಾನೇಜರ್ ರಾಜೇಶ್ ನಾಯಕ ಉಪಸ್ಥಿತರಿದ್ದರು. ಪ್ರದೀಪ್ ಜಿ. ಪೈ ಪ್ರಾಸ್ತಾವಿಕವಾಗಿ ಮಾತನಾಡಿದರು.
ನೂತನ ಕಟ್ಟಡ ನಿರ್ಮಾಣಕ್ಕಾಗಿ ರೂ.1 ಕೋಟಿ ದೇಣಿಗೆ ನೀಡಿದ ಅಮೆರಿಕಾದಲ್ಲಿ ವಾಸವಾಗಿರುವ ಭಟ್ಕಳದ ವಾಮನ ಆರ್. ಶ್ಯಾನಭಾಗ ಹಾಗೂ ರೂ.10 ಲಕ್ಷ ದೇಣಿಗೆ ನೀಡಿದ ಅವರ ಪುತ್ರರ ಪರವಾಗಿ ವಸಂತ ಶ್ಯಾನಭಾಗರನ್ನು ಸ್ವಾಮೀಜಿ ಗೌರವಿಸಿದರು. ಕೊಠಡಿಗಳಿಗೆ ದೇಣಿಗೆ ನೀಡಿದ ದಾನಿಗಳಿಗೆ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
ಇದಕ್ಕೂ ಮುನ್ನ ಬೆಳಿಗ್ಗೆ 8.13ಕ್ಕೆ ಧ್ವಾರಪೂಜೆ ಹಾಗೂ ಸರಸ್ವತಿ ಪೂಜೆ ನೆರವೇರಿಸಿದ ಶ್ರೀಗಳು ಗೀತಾ ವಾಮನ ಬ್ಲಾಕ್ ಹಾಗೂ ನೂತನ ಕಟ್ಟಡ ಉದ್ಘಾಟಿಸಿ ಇಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಬಿಇಟಿ ಉಪಾಧ್ಯಕ್ಷ ಸುರೇಂದ್ರ ಶ್ಯಾನಭಾಗ, ಟ್ರಸ್ಟಿಗಳಾದ ಶ್ರೀಧರ ಶ್ಯಾನಭಾಗ, ಡಾ. ರಾಜೇಶ್ ಯು., ಚಿತ್ತರಂಜನ, ಸುಮಿತ್ರಾ ಕೌಸಿಕ್, ರಮೇಶ್ ಖಾರ್ವಿ, ಗುರುದತ್ ಶೇಟ್ ಹಾಗೂ ನ್ಯೂ ಇಂಗ್ಲೀಷ್ ಪಿಯು ಕಾಲೇಜಿನ ಪ್ರಾಂಶುಪಾಲ ವೀರೇಂದ್ರ ಶ್ಯಾನಭಾಗ, ಇತರ ಅಂಗ ಸಂಸ್ಥೆಗಳ ಪ್ರಾಂಶುಪಾಲರು, ಉಪನ್ಯಾಸಕರು ಇತರರು ಉಪಸ್ಥಿತರಿದ್ದರು. ಟ್ರಸ್ಟಿ ನಾಗೇಶ್ ಮೋಹನ ಭಟ್ ವಂದಿಸಿದರು. ಪ್ರಾಂಶುಪಾಲ ಶ್ರೀನಾಥ ಪೈ ಮತ್ತು ಉಪನ್ಯಾಸಕ ವಿಶ್ವನಾಥ ಭಟ್ ಕಾರ್ಯಕ್ರಮ ನಿರ್ವಹಿಸಿದರು.

About The Author

error: Content is protected !!