ಭಟ್ಕಳ: ಇಲ್ಲಿನ ಬೈಪಾಸ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವ ಹಿನ್ನೆಲೆಯಲ್ಲಿ ಸಚಿವ ಮಂಕಾಳ ವೈದ್ಯ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕಾಮಗಾರಿ ವಿಳಂಬದಿAದ ಪ್ರತಿದಿನ ಅಪಘಾತಗಳು ಹಾಗೂ ಅನಾಹುತಗಳು ಸಂಭವಿಸುತ್ತಿರುವುದನ್ನು ಉಲ್ಲೇಖಿಸಿ, ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ ಹೆದ್ದಾರಿ ಯೋಜನೆ ಅಧಿಕಾರಿ ಶ್ರೀನಿವಾಸ ಅವರಿಗೆ ಖಡಕ್ ಸೂಚನೆ ನೀಡಿದರು.

ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿದ ಸಚಿವರು, ಬಿರು ಬಿಸಿಲಿನಲ್ಲೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಬೈಪಾಸ್ ಕಾಮಗಾರಿ ಅರ್ಧದಲ್ಲೇ ನಿಂತಿದೆ. ಹಲವು ಕಡೆಗಳಲ್ಲಿ ಮಳೆ ನೀರು ಹರಿದು ಹೋಗಲು ಚರಂಡಿಯೇ ಇಲ್ಲ. ಮಳೆ ಬಂದರೆ ನೀರು ಎಲ್ಲಿ ಹೋಗಬೇಕು ಎಂದು ಪ್ರಶ್ನಿಸಿದರು.
ಇನ್ನೂ ಮಳೆಗಾಲ ಆರಂಭವಾಗಲು ಕೇವಲ 15 ದಿನಗಳು ಮಾತ್ರ ಬಾಕಿ ಇವೆ. ಆದರೆ ಇಲ್ಲಿ ಯಾವುದೇ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಮಳೆ ಆರಂಭವಾದರೆ ಪರಿಸ್ಥಿತಿ ನಿಯಂತ್ರಣಕ್ಕೆ ಬರುವುದಿಲ್ಲ. ತಾಲೂಕಿನಾದ್ಯಂತ ಇದೇ ರೀತಿಯ ಗಂಭೀರ ಸಮಸ್ಯೆಗಳು ಎದುರಾಗಿವೆ. ಹೆದ್ದಾರಿ ಕಾಮಗಾರಿಯ ಅಧಿಕಾರಿಗಳು ಮನಬಂದAತೆ ವರ್ತಿಸುತ್ತಿದ್ದಾರೆ ಎಂಬ ದೂರುಗಳು ಕೇಳಿಬರುತ್ತಿವೆ,” ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.
ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡ ಸಚಿವರು ಜಿಲ್ಲಾಧಿಕಾರಿ ಕೆ.ಲಕ್ಷ್ಮಿ ಪ್ರಿಯ ಅವರಿಗೆ ಸ್ಥಳದ ವಾಸ್ತವ ಸ್ಥಿತಿ ಅವಲೋಕಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು. ಭಟ್ಕಳ ಸರ್ಕಲ್ ಹಾಗೂ ರಂಗಿನಕಟ್ಟೆ ಭಾಗದಲ್ಲಿ ನಿರ್ಮಿಸಿರುವ ಡ್ರೈನೇಜ್ ಕಾಮಗಾರಿಯ ಅವೈಜ್ಞಾನಿಕತೆಯ ಕುರಿತು ಕೂಡ ಅವರು ಆಕ್ರೋಶ ವ್ಯಕ್ತಪಡಿಸಿದರು.

ಡ್ರೈನೇಜ್ ನಿರ್ಮಿಸಿರುವುದು ಸರಿ. ಆದರೆ ಅದರಲ್ಲಿ ಹರಿದು ಬರುವ ನೀರು ಹೋಗುವುದೆಲ್ಲಿ? ಇಂತಹ ಅವೈಜ್ಞಾನಿಕ ಕಾಮಗಾರಿಗಳನ್ನು ಹೇಗೆ ನಡೆಸುತ್ತೀರಿ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದ ಸಚಿವರು, ಸರಾಬಿ ನದಿಗೆ ಮಳೆ ನೀರು ಹರಿದು ಹೋಗುವಂತೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸುವ ಜವಾಬ್ದಾರಿಯನ್ನು ಪೌರಾಯುಕ್ತ ಬಾಬಾಸಾಹೇಬ ಮಾನೆ ಹಾಗೂ ಉಪವಿಭಾಗಾಧಿಕಾರಿ ಮಹೇಶ್ ಜಿ ಅವರಿಗೆ ನೀಡಿದರು.
ಈ ವೇಳೆ ಜಿಲ್ಲಾಧಿಕಾರಿ ಕ.ಲಕ್ಷ್ಮಿ ಪ್ರಿಯಾ ಮಾತನಾಡಿ, ಕೆಲವೊಮ್ಮೆ ಸ್ಥಳೀಯರಿಂದ ಅಡ್ಡಿಪಡಿಗಳು ಉಂಟಾಗುತ್ತಿರುವುದರಿAದ ಕಾಮಗಾರಿ ನಿರೀಕ್ಷಿತ ವೇಗದಲ್ಲಿ ಪೂರ್ಣಗೊಳ್ಳುತ್ತಿಲ್ಲ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮಂಕಾಳ ವೈದ್ಯ ಸ್ಥಳದಲ್ಲಿದ್ದ ಡಿವೈಎಸ್ಪಿಗೆ ಸೂಚನೆ ನೀಡಿ ಕಾಮಗಾರಿಗೆ ಯಾವುದೇ ಅಡ್ಡಿಯಾಗದಂತೆ ಕ್ರಮ ಕೈಗೊಳ್ಳುವಂತೆ ಆದೇಶಿಸಿದರು.
ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಸತೀಶಕುಮಾರ ನಾಯ್ಕ ಮಾತನಾಡಿ, ಮಳೆ ನೀರು ಹರಿದು ಹೋಗಲು ಚರಂಡಿ ಹಾಗೂ ಸರ್ವಿಸ್ ರಸ್ತೆ ನಿರ್ಮಿಸಬೇಕೆಂಬ ನಿರ್ಧಾರ ಇದ್ದರೂ, ಇದೀಗ ಆ ಕಾಮಗಾರಿಯನ್ನು ಸ್ಥಗಿತಗೊಳಿಸಿ ಕೇವಲ ಹೆದ್ದಾರಿ ಕಾಮಗಾರಿಯನ್ನು ಮಾತ್ರ ಮುಂದುವರಿಸಲಾಗುತ್ತಿದೆ ಎಂದು ಆರೋಪಿಸಿದರು. ಇದರಿಂದ ಮಳೆಗಾಲದಲ್ಲಿ ನೀರು ಹರಿದು ಹೋಗಲು ಸಮರ್ಪಕ ವ್ಯವಸ್ಥೆ ಇಲ್ಲದೆ ಪಟ್ಟಣ ಮುಳುಗುವ ಅಪಾಯ ಎದುರಾಗಿದ್ದು, ವಿಶೇಷವಾಗಿ ಶಂಸುದ್ದೀನ್ ಸರ್ಕಲ್ ಸುತ್ತಮುತ್ತಲಿನ ವ್ಯಾಪಾರ ಮಳಿಗೆಗಳಿಗೆ ಭಾರಿ ಹಾನಿಯಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದರು.
ಸ್ಥಳದಲ್ಲಿ ನೂರಾರು ಸಾರ್ವಜನಿಕರು ಸೇರಿಕೊಂಡು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಸಚಿವರು, ಎಲ್ಲಾ ಸಮಸ್ಯೆಗಳನ್ನು ಅಧಿಕಾರಿಗಳು ಹಂತ ಹಂತವಾಗಿ ಬಗೆಹರಿಸಲಿದ್ದಾರೆ ಎಂದು ಭರವಸೆ ನೀಡಿ ಸಾರ್ವಜನಿಕರ ಸಹಕಾರ ಕೋರಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸಾಜಿದ ಮುಲ್ಲಾ, ಉಪವಿಭಾಗಾಧಿಕಾರಿ ಮಹೇಶ್ ಜಿ, ತಹಶೀಲ್ದಾರ ನಾಗೇಂದ್ರ ಕೋಳಶೆಟ್ಟಿ, ಐಆರ್‌ಬಿ ಇಂಜಿನಿಯರ್ ಸುದೇಶ್ ಶೆಟ್ಟಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
About The Author


More Stories
ಯುವಕರಲ್ಲಿ ಕ್ರೀಡಾ ಪ್ರೇಮ ಬೆಳೆಸಿಕೊಳ್ಳಬೇಕು: ರಾಜು ಮಂಜಪ್ಪ ನಾಯ್ಕ
ಅನಾಥವಾಗಿ ಕೊನೆಯುಸಿರೆಳೆದ ಭಿಕ್ಷುಕ: ಕುಟುಂಬಸ್ಥರು ಬಾರದ ಹಿನ್ನೆಲೆ ಸಮಾಜ ಸೇವಕರಿಂದ ಅಂತ್ಯಕ್ರಿಯೆ
ನಿನಾದ ಕಲ್ಚರಲ್ ಅಕಾಡೆಮಿಗೆ ‘ಉತ್ತಮ ಸೇವಾ ಸಂಸ್ಥೆ’ ಪ್ರಶಸ್ತಿ ಪ್ರದಾನ