May 23, 2026

ಚತುಷ್ಪಥ ಕಾಮಗಾರಿ ಅವಾಂತರ: ಭಟ್ಕಳದಲ್ಲಿ ಸಂಚಾರ ದಟ್ಟಣೆ, ಜಲಾವೃತ ಭೀತಿ

ಭಟ್ಕಳ: ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವ ಹಿನ್ನೆಲೆ ನಗರ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ಸಮಸ್ಯೆ ತೀವ್ರಗೊಂಡಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಎಂಟು ವರ್ಷಗಳಿಂದ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದರೂ ನಗರ ವ್ಯಾಪ್ತಿಯ ಹಲವು ಪ್ರಮುಖ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ. ಮೇಲ್ಸೇತುವೆ, ಸರ್ವೀಸ್ ರಸ್ತೆ ಹಾಗೂ ಒಳಚರಂಡಿ ನಿರ್ಮಾಣಕ್ಕೆ ಸ್ಥಳೀಯರು ಆಗ್ರಹಿಸಿದ್ದು, ಭೂಸ್ವಾಧೀನ ಸಂಬAಧ ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ ಕಾಮಗಾರಿ ವಿಳಂಬವಾಗಿದೆ ಎನ್ನಲಾಗಿದೆ.

ಗುತ್ತಿಗೆ ಅವಧಿ ಮುಕ್ತಾಯವಾಗುವ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಾರ್ವಜನಿಕರ ಸಭೆ ನಡೆಸಿ, ಮೊದಲ ಹಂತದ ಕಾಮಗಾರಿ ಪೂರ್ಣಗೊಳಿಸಲು ಸಹಕರಿಸಿದರೆ ಎರಡನೇ ಹಂತದಲ್ಲಿ ಸ್ಥಳೀಯರ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡಿದ್ದರು. ಅದರಂತೆ ಐಆರ್‌ಬಿ ಇನ್‌ಫ್ರಾಸ್ಟ್ರಕ್ಚರ್ ಕಂಪನಿಯು ಎರಡು ತಿಂಗಳ ಹಿಂದೆ ಕಾಮಗಾರಿ ಆರಂಭಿಸಿದ್ದರೂ ನಿರೀಕ್ಷಿತ ವೇಗದಲ್ಲಿ ಕೆಲಸ ನಡೆಯುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ರಂಗಿನಕಟ್ಟೆಯಿAದ ಕೊಟೇಶ್ವರ ಕಾಲೊನಿವರೆಗೆ ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು, ಮಳೆಗಾಲದಲ್ಲಿ ಹೆದ್ದಾರಿ ಮುಳುಗಡೆಯಾಗದಂತೆ ತಪ್ಪಿಸಲು ರಸ್ತೆ ಮಟ್ಟವನ್ನು 3 ರಿಂದ 4 ಅಡಿ ಎತ್ತರಕ್ಕೆ ಏರಿಸಿ ಡಾಂಬರೀಕರಣ ಮಾಡಲಾಗಿದೆ. ಆದರೆ ರಸ್ತೆಯ ಎರಡೂ ಬದಿಯ ಅಂಗಡಿ ಹಾಗೂ ಮನೆಗಳಿಗೆ ಮಳೆ ನೀರು ನುಗ್ಗುವ ಅಪಾಯ ಉಂಟಾಗಲಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಹೆದ್ದಾರಿಯನ್ನು ಮಾತ್ರ ಎತ್ತರಕ್ಕೆ ಏರಿಸಿ ಪಕ್ಕದ ತಗ್ಗು ಪ್ರದೇಶಗಳನ್ನು ಹಾಗೆಯೇ ಬಿಟ್ಟರೆ ಮಳೆಗಾಲದಲ್ಲಿ ಸಂಶುದ್ದೀನ್ ವೃತ್ತ ಹಾಗೂ ರಂಗಿನಕಟ್ಟೆ ಭಾಗ ಸಂಪೂರ್ಣ ಜಲಾವೃತಗೊಳ್ಳಲಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಮಳೆಗಾಲ ಆರಂಭಕ್ಕೂ ಮುನ್ನ ಕಾಮಗಾರಿ ಮುಗಿಸುವ ಧಾವಂತದಲ್ಲಿ ಕಂಪನಿ ಬೇಕಾಬಿಟ್ಟಿಯಾಗಿ ಕೆಲಸ ನಿರ್ವಹಿಸುತ್ತಿದ್ದು, ಇದರಿಂದ ವಾಹನ ಸವಾರರು ಪ್ರತಿದಿನ ಪರದಾಡುವಂತಾಗಿದೆ ಎನ್ನಲಾಗಿದೆ. ರಸ್ತೆ ವಿಸ್ತರಣೆ ನೆಪದಲ್ಲಿ ಕಿರಿದಾದ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗುತ್ತಿದ್ದು, ಪರಿಣಾಮ ಕಿಲೋಮೀಟರ್‌ಗಳಷ್ಟು ವಾಹನ ದಟ್ಟಣೆ ಉಂಟಾಗುತ್ತಿದೆ. ಅಪಘಾತಗಳೂ ಹೆಚ್ಚುತ್ತಿರುವ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ಪಡೆಯಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಲಭ್ಯರಾಗಲಿಲ್ಲ.
ಮಳೆಗಾಲ ಆರಂಭಕ್ಕೂ ಮುನ್ನ ಕಾಮಗಾರಿ ವೈಜ್ಞಾನಿಕವಾಗಿ ಪೂರ್ಣಗೊಳಿಸಿ, ಜಲಾವೃತ ಹಾಗೂ ಸಂಚಾರ ದಟ್ಟಣೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಜವಾಬ್ದಾರಿ ಸಂಬAಧಿತ ಇಲಾಖೆಗಳ ಮೇಲಿದೆ.

About The Author

error: Content is protected !!