May 23, 2026

ಬಕ್ರೀದ್ ಹಿನ್ನೆಲೆ ಭಟ್ಕಳದಲ್ಲಿ ಕಟ್ಟೆಚ್ಚರ: ಮೇ 30ರವರೆಗೆ ಅಧಿಕಾರಿಗಳಿಗೆ ಕೇಂದ್ರ ಸ್ಥಾನದಲ್ಲೇ ಇರಲು ಸೂಚನೆ

ಭಟ್ಕಳ: ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡಲು ಕಟ್ಟೆಚ್ಚರ ವಹಿಸಲಾಗಿದ್ದು, ಮೇ 30ರವರೆಗೆ ಎಲ್ಲ ಅಧಿಕಾರಿಗಳು ತಮ್ಮ ಕೇಂದ್ರ ಸ್ಥಾನದಲ್ಲೇ ಇರುವಂತೆ ಸೂಚಿಸಲಾಗಿದೆ ಎಂದು ಸಹಾಯಕ ಆಯುಕ್ತ ಮಹೇಶ ಹೇಳಿದರು.

ಇಲ್ಲಿನ ಸಹಾಯಕ ಆಯುಕ್ತರ ಕಚೇರಿಯಲ್ಲಿ ಗುರುವಾರ ನಡೆದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಹಬ್ಬದ ಸಂದರ್ಭದಲ್ಲಿ ಮದ್ಯ ಮಾರಾಟ ಅಂಗಡಿಗಳನ್ನು ಬಂದ್ ಮಾಡಲಾಗುವುದು. ಕಸ ಹಾಗೂ ತ್ಯಾಜ್ಯ ವಿಲೇವಾರಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಾಗೂ ಪ್ರಚೋದನಕಾರಿ ಸಂದೇಶ ಹರಡಿ ಸಾಮಾಜಿಕ ಅಶಾಂತಿಗೆ ಕಾರಣವಾಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಪಿಐ ದಿವಾಕರ ಎಚ್ಚರಿಕೆ ನೀಡಿದರು. ಇತ್ತೀಚೆಗೆ ಪಟ್ಟಣದಲ್ಲಿ ಕೆಲವು ವಿವಾದಾತ್ಮಕ ಘಟನೆಗಳು ನಡೆದಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ವಿಶೇಷ ನಿಗಾ ವಹಿಸಲಾಗಿದೆ. ರಾತ್ರಿ 12 ಗಂಟೆಯ ನಂತರ ಅನಾವಶ್ಯಕವಾಗಿ ರಸ್ತೆಗಳಲ್ಲಿ ಸಂಚರಿಸುವವರನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದರು.

ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಗೂ ತ್ಯಾಜ್ಯ ಎಸೆಯುವವರ ವಿರುದ್ಧವೂ ದಂಡಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಮಾತನಾಡಿದ ಹೆಬಳೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸೈಯದ್ ಅಲಿ, ಹೆಬಳೆ ವ್ಯಾಪ್ತಿಯಲ್ಲಿ ಅಕ್ರಮ ಸಾರಾಯಿ ಮಾರಾಟ ನಡೆಯುತ್ತಿದ್ದು, ಹೊರರಾಜ್ಯಗಳಿಂದ ಬಂದ ಕಾರ್ಮಿಕರು ಸಾರ್ವಜನಿಕ ಸ್ಥಳಗಳಲ್ಲೇ ಮದ್ಯಪಾನ ಮಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ದೂರಿದರು. ಈ ಕುರಿತು ಕ್ರಮ ಕೈಗೊಳ್ಳುವುದಾಗಿ ಎಸಿ ಮಹೇಶ ಭರವಸೆ ನೀಡಿದರು.

ಎಡಿಶನಲ್ ಎಸ್ಪಿ ಕೃಷ್ಣಮೂರ್ತಿ, ಡಿವೈಎಸ್ಪಿ ಮಹೇಶ, ತಹಸೀಲ್ದಾರ್ ಕೋಳಶೆಟ್ಟಿ, ನಗರಸಭೆ ಆಯುಕ್ತ ಬಾಬಾಸಾಹೇಬ್ ಮಾಣೆ, ತಾಪಂ ಸಹಾಯಕ ಲೆಕ್ಕಾಧಿಕಾರಿ ರಾಜೇಶ ಮಹಾಲೆ, ಜಾಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜಪ್ಪ, ಹೆಸ್ಕಾಂ ಎಇಇ ಮಂಜುನಾಥ, ಭಟ್ಕಳ ಗ್ರಾಮೀಣ ಠಾಣೆ ಸಿಪಿಐ ವೆಂಕಟೇಶ, ಮುರುಡೇಶ್ವರ ಠಾಣೆ ಸಿಪಿಐ ಜಗದೀಶ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಭಟ್ಕಳ ಮಜ್ಲಿಸ್-ಎ-ಇಸ್ಲಾಹ್ ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಅಲ್ತಾಫ್ ಖರೂರಿ, ಸಿದ್ದಿಕ್ ಇಸ್ಟೈಲ್, ಎಸ್.ಜೆ. ಹಾಶೀಮ್, ಮುನೀರ್, ಅಝೀಜುರ್ ರೆಹಮಾನ್, ಇಬ್ಬು ಅಲಿ ಹೆಬಳೆ, ಸೈಯದ್ ಅಲಿ ಹೆಬಳೆ, ಇಮ್‌ಶಾದ್ ಸೇರಿದಂತೆ ಹಲವರು ಸಭೆಯಲ್ಲಿ ಭಾಗವಹಿಸಿ ಮುಂಜಾಗ್ರತಾ ಕ್ರಮಗಳ ಕುರಿತು ಅಹವಾಲು ಮಂಡಿಸಿದರು.

About The Author

error: Content is protected !!