ಕೂಡ್ಲಿಗಿ: “ಆಸ್ಪತ್ರೆಗಳಲ್ಲಿ ಯಾವುದೇ ರೀತಿಯ ಅವ್ಯವಹಾರ ಮತ್ತು ಅವ್ಯವಸ್ಥೆಗೆ ಅವಕಾಶವಿಲ್ಲ. ಎಲ್ಲದಕ್ಕೂ ತಕ್ಷಣವೇ ಕಡಿವಾಣ ಹಾಕಿ, ಪ್ರತಿಯೊಬ್ಬರೂ ಕರ್ತವ್ಯ ನಿಷ್ಠೆ ಹಾಗೂ ಪ್ರಾಮಾಣಿಕ ಸೇವೆಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು” ಎಂದು ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜೂನ್ 11ರಂದು ನಡೆದ ಆರೋಗ್ಯ ಸೇವಾ ರಕ್ಷಾ ಸಮಿತಿ ಸಭೆಯಲ್ಲಿ ವೈದ್ಯರು, ವೈದ್ಯಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಸಭೆಗೂ ಮುನ್ನ ಶಾಸಕರು ಆಸ್ಪತ್ರೆಯ ಒಳ-ಹೊರ ಆವರಣವನ್ನು ಸಂಪೂರ್ಣವಾಗಿ ಪರಿಶೀಲಿಸಿ, ಬಳಿಕ ಪ್ರಗತಿ ಪರಿಶೀಲನೆ ನಡೆಸಿದರು.
ಗಂಭೀರ ಆರೋಪಗಳು ಸಾಬೀತಾದಲ್ಲಿ ನಿರ್ಧಾಕ್ಷಿಣ್ಯ ಕ್ರಮ: ಎಚ್ಚರಿಕೆ
ಆಸ್ಪತ್ರೆಯಲ್ಲಿನ ಮೂಲಸೌಕರ್ಯಗಳ ಕೊರತೆ ಹಾಗೂ ಅವ್ಯವಸ್ಥೆಗಳ ಕುರಿತು ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಶಾಸಕರು, “ಸರ್ಕಾರಿ ಆಸ್ಪತ್ರೆಯನ್ನೇ ನಂಬಿ ಬರುವ ಬಡ ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ಮಾನವೀಯತೆಯಿಂದ ಚಿಕಿತ್ಸೆ ನೀಡಬೇಕು. ರೋಗಿಗಳೊಂದಿಗೆ ಸೌಜನ್ಯದಿಂದ ವರ್ತಿಸುವುದರ ಜೊತೆಗೆ ಅವರ ಸೇವೆಗೆ ಮೊದಲ ಆದ್ಯತೆ ನೀಡಬೇಕು. ಆಡಳಿತ ಅಧಿಕಾರಿಗಳು ಗಂಭೀರ ವಿಷಯಗಳಿಗೆ ಸಂಬಂಧಿಸಿದಂತೆ ಆರೋಗ್ಯ ರಕ್ಷಾ ಸಮಿತಿಯೊಂದಿಗೆ ಸಮಾಲೋಚಿಸಿ ನಿರ್ಧಾರ ಕೈಗೊಳ್ಳಬೇಕು. ಕರ್ತವ್ಯ ಲೋಪ ಅಥವಾ ನಿರ್ಲಕ್ಷ್ಯ ಧೋರಣೆ ತೋರಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ” ಎಂದು ಖಡಕ್ ಎಚ್ಚರಿಕೆ ನೀಡಿದರು.
ಪ್ರಾಮಾಣಿಕ ವೈದ್ಯರು, ಸಿಬ್ಬಂದಿ ರಕ್ಷಣೆಗೆ ಬದ್ಧ
ಇದೇ ವೇಳೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಸಿಬ್ಬಂದಿಗೆ ಧೈರ್ಯ ತುಂಬಿದ ಶಾಸಕರು, “ಯಾರೇ ಕಿಡಿಗೇಡಿಗಳು ವೈದ್ಯರಿಗೆ ಅಥವಾ ಸಿಬ್ಬಂದಿಗೆ ಕಿರುಕುಳ ನೀಡಿದರೆ, ದೈಹಿಕ-ಮಾನಸಿಕ ದೌರ್ಜನ್ಯ ಎಸಗಿದರೆ ಸಹಿಸುವುದಿಲ್ಲ. ಅವರ ನಿಷ್ಠೆಯ ಕರ್ತವ್ಯಕ್ಕೆ ಅಡ್ಡಿಪಡಿಸುವವರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರ ವಿರುದ್ಧ ಕಾನೂನಿನಡಿ ಕಠಿಣ ಕ್ರಮ ಜರುಗಿಸಲಾಗುವುದು. ಯಾರೂ ಆತಂಕ ಪಡುವ ಅಗತ್ಯವಿಲ್ಲ” ಎಂದು ಅಭಯ ನೀಡಿದರು.
ಡಯಲಿಸಿಸ್ ಸಿಬ್ಬಂದಿಗೆ 1 ಲಕ್ಷ ರೂ. ಪ್ರೋತ್ಸಾಹ ಧನ
ಆಸ್ಪತ್ರೆಯ ಡಯಲಿಸಿಸ್ ವಿಭಾಗದ ಹೊರಗುತ್ತಿಗೆ ನೌಕರರ ಕಾರ್ಯಕ್ಷಮತೆಯನ್ನು ಖುದ್ದಾಗಿ ಮನವರಿಕೆ ಮಾಡಿಕೊಂಡ ಶಾಸಕರು, ಸಿಬ್ಬಂದಿಯಾದ ಗಂಗಮ್ಮ ಹಾಗೂ ಇನ್ನಿಬ್ಬರ ನಿರಂತರ ಸೇವೆಯನ್ನು ಮುಕ್ತಕಂಠದಿಂದ ಪ್ರಶಂಸಿಸಿದರು. ಅಲ್ಲದೆ, ಅವರ ಉತ್ತಮ ಕಾರ್ಯವನ್ನು ಗುರುತಿಸಿ ವೈಯಕ್ತಿಕವಾಗಿ 1 ಲಕ್ಷ ರೂ. ಪ್ರೋತ್ಸಾಹ ಧನವನ್ನು ಪ್ರಕಟಿಸಿದರು.
ಸಭೆಯಲ್ಲಿ ಸಮಿತಿ ಸದಸ್ಯರು ಆಸ್ಪತ್ರೆಯ ಮೂಲಸೌಕರ್ಯಗಳ ಸುಧಾರಣೆ, ಅಗತ್ಯ ಔಷಧಿಗಳ ಲಭ್ಯತೆ ಹಾಗೂ ಸಿಬ್ಬಂದಿ ಕೊರತೆಯ ಕುರಿತು ಶಾಸಕರ ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿದ ಶಾಸಕರು, ಶೀಘ್ರದಲ್ಲೇ ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸುವುದಾಗಿ ಭರವಸೆ ನೀಡಿದರು.
ಗಣ್ಯರ ಉಪಸ್ಥಿತಿ
ಸಭೆಯಲ್ಲಿ ಆರೋಗ್ಯ ಸೇವಾ ರಕ್ಷಾ ಸಮಿತಿ ಸದಸ್ಯರಾದ ಶ್ರೀಮತಿ ಡಾ. ಪುಷ್ಪಾ ಎನ್.ಟಿ. ಶ್ರೀನಿವಾಸ್, ಹೊನ್ನೂರಪ್ಪ, ಮೊರಬ ಬಿ. ವೀರಭದ್ರಪ್ಪ, ಡಿ.ಹೆಚ್. ದುರಗೇಶ್, ಫಸಲು ಪಾಪಯ್ಯ, ಎನ್. ದಿನೇಶ್, ಮಾದಳ್ಳಿ ನಜೀರ್ ಸಾಬ್, ಗೋವಿಂದಗಿರಿ ಡಿ.ಬಿ. ಚಿತ್ತಪ್ಪ ಉಪಸ್ಥಿತರಿದ್ದರು.
ಹಾಗೂ ಪ್ರಮುಖ ಮುಖಂಡರಾದ ಕೊಗಳಿ ಮಂಜುನಾಥ, ನರಸಿಂಹಗಿರಿ ಎಸ್. ವೆಂಕಟೇಶ್, ಹಿರೇಕುಂಬಳಗುಂಟೆ ಟಿ. ಉಮೇಶ್ ಸೇರಿದಂತೆ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಮಧುಕುಮಾರ, ಸ್ತ್ರೀರೋಗ ತಜ್ಞರಾದ ಡಾ. ನಾಗರಾಜ, ಸಲೀಂಭಾಷ ಮತ್ತು ವಿವಿಧ ತಜ್ಞ ವೈದ್ಯರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.ವರದಿ : ಮಹೇಶ ಶರ್ಮ

More Stories
ಕೊಟ್ಟೂರು ಪೊಲೀಸರ ಮಿಂಚಿನ ಕಾರ್ಯಾಚರಣೆ: ನಾಲ್ವರು ಅಂತರರಾಜ್ಯ ಕಳ್ಳರ ಬಂಧನ, ₹6 ಲಕ್ಷ ಮೌಲ್ಯದ ಚಿನ್ನಾಭರಣ ವಶ!
ಅಣಕು ಮದುವೆ ಮೂಲಕ ನರೇಗಾ ಕಾಮಗಾರಿಗೆ ವಿಶಿಷ್ಟ ಚಾಲನೆ: ಕುರಿಹಟ್ಟಿಯಲ್ಲಿ ಹಳ್ಳಿಯ ಸೊಬಗಿನ ಸಂಭ್ರಮ