ಕೂಡ್ಲಿಗಿ: ನರೇಗಾ ಕಾಮಗಾರಿಗಳಿಗೆ ವಿಭಿನ್ನ ಹಾಗೂ ಸೃಜನಾತ್ಮಕವಾಗಿ ಚಾಲನೆ ನೀಡುವುದನ್ನು ನೀವು ಕೇಳಿರಬಹುದು, ಆದರೆ ಇಲ್ಲೊಂದು ಗ್ರಾಮದಲ್ಲಿ ಅಪ್ಪಟ ಹಳ್ಳಿಯ ಸೊಬಗಿನ ಶೈಲಿಯಲ್ಲಿ ‘ಅಣಕು ಮದುವೆ’ ಮಾಡುವ ಮೂಲಕ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆಗೆ ಅದ್ದೂರಿ ಚಾಲನೆ ನೀಡಲಾಗಿದೆ!
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಮಾಕನಡಕು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರಿಹಟ್ಟಿ ಗ್ರಾಮದಲ್ಲಿ ಈ ವಿಶಿಷ್ಟ ಪ್ರಸಂಗ ಜರುಗಿದೆ. ಗ್ರಾಮದ ಕೆರೆಯಂಗಳದಲ್ಲಿ ಶಾಮಿಯಾನ ಹಾಕಿ, ಬ್ಯಾಂಡ್ ಸೆಟ್ ವಾದ್ಯಗಳ ಮೇಳದೊಂದಿಗೆ ಅಪ್ಪಟ ಕಲ್ಯಾಣ ಮಹೋತ್ಸವದ ವಾತಾವರಣವನ್ನು ಸೃಷ್ಟಿಸಲಾಗಿತ್ತು.
ಕಾರಿನಲ್ಲಿ ಬಂದ ಮದುಮಗ, ಸಾಂಪ್ರದಾಯಿಕ ಶಾಸ್ತ್ರ!
ಕೂಲಿ ಕಾರ್ಮಿಕರಾದ ರುದ್ರಪ್ಪ ಅವರು ಮದುಮಗನಾಗಿ ಸಖತ್ ಆಗಿ ಅಲಂಕರಿಸಿದ ಕಾರಿನಲ್ಲಿ ಅದ್ದೂರಿಯಾಗಿ ಮದುವೆ ಮಂಟಪಕ್ಕೆ ಆಗಮಿಸಿದರೆ, ಅವರ ಧರ್ಮಪತ್ನಿ ಹಾಗೂ ಸಹ ಕೂಲಿ ಕಾರ್ಮಿಕರಾದ ಗೌರಮ್ಮ ಅವರು ಸಾಂಪ್ರದಾಯಿಕ ಮದುಮಗಳ ಸಿಂಗಾರದೊಂದಿಗೆ ಮಹಿಳಾ ಕಾರ್ಮಿಕರೊಡಗೂಡಿ ಮಂಟಪಕ್ಕೆ ಹೆಜ್ಜೆ ಇಟ್ಟರು. ಹಳ್ಳಿಯ ಸಾಂಪ್ರದಾಯಿಕ ವಿಧಿ-ವಿಧಾನಗಳಂತೆ ಶಾಸ್ತ್ರಗಳನ್ನು ನೆರವೇರಿಸಿ, ಬಂದಿದ್ದ ಎಲ್ಲರಿಗೂ ಸಿಹಿ ಊಟ ಬಡಿಸುವ ಮೂಲಕ ನರೇಗಾ ಕಾಮಗಾರಿಗೆ ಚಾಲನೆ ನೀಡಿದ್ದು ವಿಶೇಷವಾಗಿತ್ತು.
ಈ ಅಪರೂಪದ ಹಾಗೂ ಸೃಜನಾತ್ಮಕ ಕಾರ್ಯಕ್ರಮವು ನೆರೆದಿದ್ದ ಕಾರ್ಮಿಕರಲ್ಲಿ ಮತ್ತು ಗ್ರಾಮಸ್ಥರಲ್ಲಿ ಹೊಸ ಉತ್ಸಾಹವನ್ನು ಮೂಡಿಸಿತು.
ಗಣ್ಯರ ಉಪಸ್ಥಿತಿ
ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಜಿ. ಓಬಣ್ಣ, ಸಿ. ನಾಗಮ್ಮ ಕೃಷ್ಣಪ್ಪ, ಮುಖಂಡರಾದ ಜಿ. ಎಂ. ನಾಗರಾಜಪ್ಪ, ಮದಕರಿ ಬೊಮ್ಮಣ್ಣ, ಪೂಜಾರಿ ಈರಣ್ಣ, ಸಿ. ಎಂ. ನಾಗರಾಜ್ ಗೌಡ್ರು, ಗಂಗಣ್ಣ, ಎಚ್. ಎನ್. ಚೌಡಪ್ಪ, ಸುಪುತ್ರ, ಲೋಕೇಶ್, ಪಿ. ಚಂದ್ರು, ಎಚ್. ಬಿ. ಮಹಾಂತೇಶ್, ಮೂಡೆಲ್ ಹಂಪಣ್ಣ, ಪೂಜಾರಿ ನಾಗರಾಜ್, ಛಲವಾದಿ ಓಬಣ್ಣ, ಕೆ. ಏರ್ರಿಸ್ವಾಮಿ, ಛಲವಾದಿ ತಿಪ್ಪೇಸ್ವಾಮಿ ಸೇರಿದಂತೆ ಗ್ರಾಮದ ನೂರಾರು ಯುವಕರು ಹಾಗೂ ಮಹಿಳಾ ಕೂಲಿ ಕಾರ್ಮಿಕರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವರದಿ: ವಿ. ಜಿ. ವೃಷಭೇಂದ್ರ, ಕೂಡ್ಲಿಗಿ

More Stories
ಕೊಟ್ಟೂರು ಪೊಲೀಸರ ಮಿಂಚಿನ ಕಾರ್ಯಾಚರಣೆ: ನಾಲ್ವರು ಅಂತರರಾಜ್ಯ ಕಳ್ಳರ ಬಂಧನ, ₹6 ಲಕ್ಷ ಮೌಲ್ಯದ ಚಿನ್ನಾಭರಣ ವಶ!