ಭಟ್ಕಳ: “ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆಗೆ ಸೀಮಿತವಾಗದೆ, ತಮ್ಮ ಜೀವನದಲ್ಲಿ ನಾಡು ಹಾಗೂ ನುಡಿಯ ಅಭಿಮಾನವನ್ನು ಸದಾ ಉಳಿಸಿಕೊಂಡು ಹೋಗಬೇಕು,” ಎಂದು ಭಟ್ಕಳ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ನಾಯಕ ನುಡಿದರು.

ಇಲ್ಲಿನ ಆನಂದಾಶ್ರಮ ಪ್ರೌಢಶಾಲೆಯಲ್ಲಿ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಜಂಟಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ, 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಕನ್ನಡ ಭಾಷಾ ವಿಷಯದಲ್ಲಿ ಪ್ರತಿಶತ 100 ಕ್ಕೆ 100 ಅಂಕ ಗಳಿಸಿದ ತಾಲೂಕಿನ ಸಾಧಕ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮುಂದಿನ ಹಂತದ ಶಿಕ್ಷಣದಲ್ಲೂ ವಿದ್ಯಾರ್ಥಿಗಳು ಇದೇ ಸಾಧನೆಯನ್ನು ಮುಂದುವರಿಸಬೇಕು ಎಂದು ಆಶಿಸಿದ ಅವರು, ಜಿಲ್ಲೆಯಾದ್ಯಂತ ಎಲ್ಲರನ್ನೂ ಒಳಗೊಳ್ಳುವ ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಾ ಬಂದಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ಷಮತೆಯನ್ನು ಶ್ಲಾಘಿಸಿದರು.

ಪಠ್ಯದ ಆಚೆಗೂ ಜ್ಞಾನ ವಿಸ್ತರಿಸಿಕೊಳ್ಳಿ: ಬಿ.ಎನ್. ವಾಸರೆ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ, “ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕಕ್ಕೆ ಸೀಮಿತವಾಗದೆ, ಅದರ ಆಚೆಗೂ ತಮ್ಮ ಜ್ಞಾನದ ಪರಿಧಿಯನ್ನು ವಿಸ್ತರಿಸಿಕೊಳ್ಳಬೇಕು. ನಿಮ್ಮಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಬೆಳೆಸಿಕೊಳ್ಳಿ. ಇಂದಿನ ದಿನಗಳಲ್ಲಿ ಮೊಬೈಲ್ ಫೋನ್‌ಗಳನ್ನು ಕೇವಲ ಜ್ಞಾನ ವೃದ್ಧಿಸಿಕೊಳ್ಳಲು ಮಾತ್ರ ಬಳಸಬೇಕು. ಅದರೊಂದಿಗೆ ದಿನಪತ್ರಿಕೆಗಳು ಹಾಗೂ ಉತ್ತಮ ಸಾಹಿತ್ಯಿಕ ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು,” ಎಂದು ಕರೆ ನೀಡಿದರು.
99 ಸಾಧಕ ವಿದ್ಯಾರ್ಥಿಗಳು ಹಾಗೂ 25 ಶಿಕ್ಷಕರಿಗೆ ಗೌರವ ಸತ್ಕಾರ
ಕಳೆದ ಐದು ವರ್ಷಗಳಿಂದ ತಾಲೂಕಿನಲ್ಲಿ ಕನ್ನಡ ಭಾಷೆಯಲ್ಲಿ ಗರಿಷ್ಠ ಸಾಧನೆ ಮಾಡಿದವರನ್ನು ಗುರುತಿಸುತ್ತಾ ಬರಲಾಗುತ್ತಿದ್ದು, ಈ ಬಾರಿ 2025-26ನೇ ಸಾಲಿನ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 100 ಕ್ಕೆ 100 ಅಂಕ ಗಳಿಸಿದ ಭಟ್ಕಳ ತಾಲೂಕಿನ ಭರ್ಜರಿ 99 ವಿದ್ಯಾರ್ಥಿಗಳನ್ನು ಹಾಗೂ ಅವರ ಈ ಐತಿಹಾಸಿಕ ಸಾಧನೆಗೆ ಮಾರ್ಗದರ್ಶನ ನೀಡಿದ 25 ಕನ್ನಡ ಭಾಷಾ ಶಿಕ್ಷಕರನ್ನು ವೇದಿಕೆಯಲ್ಲಿ ಅತ್ಯಂತ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಬರೋಬ್ಬರಿ 36 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ದಿ ನ್ಯೂ ಇಂಗ್ಲಿಷ್ ಶಾಲೆಯ ಮಾಜಿ ಮುಖ್ಯಾಧ್ಯಾಪಕ ಆರ್.ಡಿ. ಪ್ರಭು, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ನಾಯಕ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಉಮೇಶ್ ಕೆರೆಕಟ್ಟೆ ಅವರನ್ನು ಪರಿಷತ್ತಿನ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಉಪಸ್ಥಿತರಿದ್ದ ನಿವೃತ್ತ ಶಿಕ್ಷಕ ಹಾಗೂ ಸಹಕಾರಿ ಧುರೀಣ ಡಿ. ಬಿ. ನಾಯ್ಕ, ಸಾಹಿತಿ ಮಾನಾಸುತ ಶಂಭು ಹೆಗಡೆ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಎನ್. ನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಉಮೇಶ್ ಕೆರೆಕಟ್ಟೆ, ಮತ್ತು ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗಣಪತಿ ಶಿರೂರು ಸಾಂದರ್ಭಿಕವಾಗಿ ಮಾತನಾಡಿ ಶುಭ ಹಾರೈಸಿದರು.
ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ತಾಲೂಕಿನ ಎಲ್ಲಾ ಪ್ರೌಢಶಾಲೆಗಳನ್ನು ತಲುಪಿ ಕನ್ನಡದ ಕೆಲಸ ಮಾಡಲು ನೆರವಾದ ಎಲ್ಲರನ್ನೂ ಸ್ಮರಿಸಿದರು. ವೇದಿಕೆಯಲ್ಲಿ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಪಿ.ಆರ್. ನಾಯ್ಕ, ಪ್ರೌಢಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಮಂಜುನಾಥ ನಾಯಕ ಉಪಸ್ಥಿತರಿದ್ದರು.
ಕಸಾಪ ಗೌರವ ಕೋಶಾಧ್ಯಕ್ಷ ಶ್ರೀಧರ್ ಶೇಟ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಆನಂದಾಶ್ರಮ ಪ್ರೌಢಶಾಲೆಯ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ಕಾರ್ಯಕ್ರಮದಲ್ಲಿ ಕಸಾಪ ಕಾರ್ಯಕಾರಿ ಸಮಿತಿಯ ಪೆಟ್ರಿಕ್ ಟೆಲಿಸ್, ಪಾಂಡುರಂಗ ಅಳ್ವೆಗದ್ದೆ, ಪ್ರಮುಖ ಮುಖ್ಯಾಧ್ಯಾಪಕರುಗಳಾದ ರೂಪ ಖಾರ್ವಿ, ಕೆ. ಬಿ. ಮಡಿವಾಳ, ಮಮತಾ ಭಟ್ಕಳ, ಶಕುಂತಲಾ ಎನ್. ನಾಯಕ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

More Stories
ಪ್ರತಿಷ್ಠಿತ ‘ಡಿಜಿ-ಐಜಿಪಿ ಶ್ಲಾಘನಾ ಪದಕ’ ಗೌರವಕ್ಕೆ ಭಾಜನರಾದ ಭಟ್ಕಳದ ಹೆಡ್ ಕಾನ್ಸ್ಟೇಬಲ್ ದೀಪಕ್ ನಾಯ್ಕ
ಪಲ್ಸ್ ಪೋಲಿಯೋ ಕಾರ್ಯಕ್ರಮ ಯಶಸ್ಸಿಗೆ ಇಲಾಖೆಗಳ ಸಮನ್ವಯ ಅಗತ್ಯ: ಪ್ರಭಾರಿ ತಹಶೀಲ್ದಾರ್ ಪ್ರವೀಣ್ ಕಾರಂಡೆ
ಸಿಎ ಅಂತಿಮ ಪರೀಕ್ಷೆಯಲ್ಲಿ ಶ್ರೀ ಗುರು ಸುಧೀಂದ್ರ ಕಾಲೇಜಿನ ಹಳೆ ವಿದ್ಯಾರ್ಥಿಗಳಾದ ಪ್ರಜ್ವಲ್ ಗೋಳಿ ಮತ್ತು ಪ್ರಸಾದ ಶೆಟ್ಟಿ ಸಾಧನೆ