June 24, 2026

ಕತಾರ್ ಕನ್ನಡಿಗರಿಂದ ಗಾಯಕ ರಾಜೇಶ್ ಕೃಷ್ಣನ್ ಅವರಿಗೆ ಪ್ರತಿಷ್ಠಿತ “ಸ್ವರ ಯೋಗಿ” ಬಿರುದು ಪ್ರದಾನ:

ದೋಹಾ (ಕತಾರ್): ಇಲ್ಲಿನ ಕರ್ನಾಟಕ ಸಂಘ ಕತಾರ್ (ಕೆಎಸ್‌ಕ್ಯೂ) ವತಿಯಿಂದ ಅಲ್ ವಕ್ರಾ ನಗರದ ಡಿಪಿಎಸ್ ಎಂಐಎಸ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಭವ್ಯ ‘ಸಂಭ್ರಮ 2026’ ಸಾಂಸ್ಕೃತಿಕ ಮಹೋತ್ಸವದಲ್ಲಿ, ಖ್ಯಾತ ಹಿನ್ನೆಲೆ ಗಾಯಕ ಹಾಗೂ “ಮೆಲೋಡಿ ಕಿಂಗ್” ಶ್ರೀ ರಾಜೇಶ್ ಕೃಷ್ಣನ್ ಅವರಿಗೆ ಇಡೀ ಕತಾರ್ ಅನಿವಾಸಿ ಕನ್ನಡಿಗರ ಪರವಾಗಿ ಪ್ರತಿಷ್ಠಿತ “ಸ್ವರ ಯೋಗಿ” ಗೌರವ ಬಿರುದನ್ನು ಪ್ರದಾನ ಮಾಡಿ ಸನ್ಮಾನಿಸಲಾಯಿತು.

ಗಣ್ಯರ ಉಪಸ್ಥಿತಿಯಲ್ಲಿ ಅದ್ಧೂರಿ ಸನ್ಮಾನ

ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಗಣ್ಯರ ವಿವರ:

ಮುಖ್ಯ ಅತಿಥಿಗಳು: ಕತಾರ್ ದೇಶದ ಭಾರತೀಯ ರಾಯಭಾರಿ ಘನತೆವೆತ್ತ ಶ್ರೀ ವಿಪುಲ್, ಉಪ ರಾಯಭಾರಿ ಶ್ರೀ ಸಂದೀಪ್ ಕುಮಾರ್, ಮತ್ತು ಪ್ರಥಮ ಕಾರ್ಯದರ್ಶಿ ಶ್ರೀ ಹರೀಶ್ ಪಾಂಡೆ.

ವಿಶೇಷ ಅತಿಥಿಗಳು: ಭಾರತೀಯ ಸಾಂಸ್ಕೃತಿಕ ಕೇಂದ್ರ ಕತಾರ್ ಅಧ್ಯಕ್ಷ ಶ್ರೀ ಎ.ಪಿ. ಮಣಿಕಂಠನ್, ಖತಾರ್ ಆಟೋ ಮ್ಯೂಸಿಯಂ ಆಡಳಿತ ವಿಭಾಗದ ಉಪ ನಿರ್ದೇಶಕಿ ಮಿಸ್ ಫಾತಿಮಾ ಅಲ್ ಮಾದೀದ್ ಹಾಗೂ ಹಿರಿಯ ಪೆಟ್ರೋಲಿಯಂ ಎಂಜಿನಿಯರ್ ಶ್ರೀ ಖಾಲಿದ್ ಅಲ್ ಫಕ್ರೂ.
ವೇದಿಕೆಯ ಮೇಲೆ ಕರ್ನಾಟಕ ಸಂಘ ಕತಾರ್ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ಸಲಹೆಗಾರರು ಉಪಸ್ಥಿತರಿದ್ದು ಕಾರ್ಯಕ್ರಮದ ಚಂದವನ್ನು ಹೆಚ್ಚಿಸಿದರು.

ರಾಜೇಶ್ ಕೃಷ್ಣನ್ ಅವರ ಸಂಗೀತ ಸಾಧನೆಯನ್ನು ಕೊಂಡಾಡಿದ ಸನ್ಮಾನ ಪತ್ರದಲ್ಲಿ ಹೀಗೆ ಉಲ್ಲೇಖಿಸಲಾಯಿತು:

“ನಿಮ್ಮ ಸುಮಧುರ ಕಂಠದ ಮಾಧುರ್ಯ, ಭಾವಪೂರ್ಣ ಗಾಯನ ಮತ್ತು ಸಂಗೀತದ ಮೇಲಿನ ಅಪಾರ ನಿಷ್ಠೆಯ ಮೂಲಕ ನೀವು ಕನ್ನಡ ಸಂಗೀತ ಲೋಕಕ್ಕೆ ನೀಡಿರುವ ಕೊಡುಗೆ ಅನನ್ಯವಾದುದು. ನಿಮ್ಮ ಗಾಯನ ಲಕ್ಷಾಂತರ ಸಂಗೀತಾಭಿಮಾನಿಗಳ ಭಾವನೆಗಳೊಂದಿಗೆ ಬೆಸೆದುಕೊಂಡಿದೆ. ನಿಮ್ಮ ಈ ಕಲಾ ಸಾಧನೆಯನ್ನು ಗೌರವಿಸಿ ‘ಸ್ವರ ಯೋಗಿ’ ಗೌರವ ಬಿರುದನ್ನು ಪ್ರದಾನ ಮಾಡಲು ನಾವು ಹೆಮ್ಮೆಪಡುತ್ತೇವೆ.”

ತಾಯ್ನಾಡಿನ ನೆನಪು ಮರುಕಳಿಸಿದ ಗಾಯನ

ಸನ್ಮಾನದ ಬಳಿಕ ನಡೆದ ಸಂಗೀತ ರಸದೌಲತಿನಲ್ಲಿ ಶ್ರೀ ರಾಜೇಶ್ ಕೃಷ್ಣನ್ ಅವರು ತಮ್ಮ ಸದಾ ಹಸಿರಾದ ಕನ್ನಡ ಗೀತೆಗಳ ಮೂಲಕ ಕತಾರ್ ನೆಲದಲ್ಲಿ ಕನ್ನಡ ಸಂಸ್ಕೃತಿಯ ಸುವಾಸನೆಯನ್ನು ಹರಡಿದರು. ಅನಿವಾಸಿ ಕನ್ನಡಿಗರಲ್ಲಿ ತಾಯ್ನಾಡಿನ ನೆನಪುಗಳನ್ನು ಮರುಜೀವಂತಗೊಳಿಸಿದ ಗಾಯನಕ್ಕೆ ಇಡೀ ಸಭಾಂಗಣ ಕರತಾಡನ ಹಾಗೂ ಹರ್ಷೋದ್ಗಾರಗಳ ಮೂಲಕ ಸಾಕ್ಷಿಯಾಯಿತು.
ಕರ್ನಾಟಕ ಸಂಘ ಕತಾರ್ ತಂಡದ ಅಚ್ಚುಕಟ್ಟಾದ ಸಮನ್ವಯ ಮತ್ತು ಪರಿಶ್ರಮದಿಂದಾಗಿ ‘ಸಂಭ್ರಮ 2026’ ಕಾರ್ಯಕ್ರಮವು ಜಾಗತಿಕ ವೇದಿಕೆಯಲ್ಲಿ ಕನ್ನಡಿಗರ ಸಾಂಸ್ಕೃತಿಕ ಹೆಮ್ಮೆಯನ್ನು ಎತ್ತಿ ಹಿಡಿಯುವಲ್ಲಿ ಅಭೂತಪೂರ್ವ ಯಶಸ್ಸು ಕಂಡಿತು.

About The Author

error: Content is protected !!