June 23, 2026

ಬೆಂಗಳೂರಿನಲ್ಲಿ ಸ್ವರ್ಣರಶ್ಮಿ ಕೌಶಲ್ಯಾಭಿವೃದ್ಧಿ ಸಂಸ್ಥೆಯ ನೂತನ ಕಟ್ಟಡದ ಭವ್ಯ ಶಿಲಾನ್ಯಾಸ: ಶ್ರೀ ಸ್ವರ್ಣವಲ್ಲಿ ಶ್ರೀಗಳಿಂದ ಚಾಲನೆ

ಶಿರಸಿ / ಬೆಂಗಳೂರು: ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಅಂಗಸಂಸ್ಥೆಯಾದ ಬೆಂಗಳೂರಿನ ‘ಸ್ವರ್ಣರಶ್ಮಿ ಪ್ರತಿಷ್ಠಾನ’ದ ವತಿಯಿಂದ ಸ್ಥಾಪಿಸಲಾಗುತ್ತಿರುವ “ಸ್ವರ್ಣರಶ್ಮಿ ಕೌಶಲ್ಯಾಭಿವೃದ್ಧಿ ಮತ್ತು ತರಬೇತಿ ಸಂಸ್ಥೆ”ಯ ನೂತನ ಕಟ್ಟಡದ ಭವ್ಯ ಶಿಲಾನ್ಯಾಸ ಕಾರ್ಯಕ್ರಮವು ಬೆಂಗಳೂರಿನ ನಾಗರಭಾವಿ ವರ್ತುಲ ರಸ್ತೆಯ ಎಂ.ಪಿ.ಎಂ. ಬಡಾವಣೆಯಲ್ಲಿರುವ ನಿವೇಶನದಲ್ಲಿ ಅತ್ಯಂತ ಯಶಸ್ವಿಯಾಗಿ ನೆರವೇರಿತು.

ಶ್ರೀಗಳ ಅಮೃತ ಹಸ್ತದಿಂದ ಶಿಲಾನ್ಯಾಸ

ಸ್ವರ್ಣವಲ್ಲಿ ಮಹಾಸಂಸ್ಥಾನದ ಮಠಾಧೀಶರಾದ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಹಾಗೂ ಅವರದೇ ಅಮೃತ ಹಸ್ತಗಳಿಂದ ಶಾಸ್ತ್ರೋಕ್ತ ಧಾರ್ಮಿಕ ವಿಧಿವಿಧಾನಗಳೊಂದಿಗೆ ಕಟ್ಟಡದ ಶಿಲಾನ್ಯಾಸ ನೆರವೇರಿತು.
ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು:

“ಯುವಜನರು ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಉನ್ನತ ಮಟ್ಟದ ತರಬೇತಿ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾರ್ಗದರ್ಶನ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಕೌಶಲ್ಯಾಭಿವೃದ್ಧಿ ಅವಕಾಶಗಳನ್ನು ಒದಗಿಸುವ ಉದಾತ್ತ ಉದ್ದೇಶದಿಂದ ಈ ಸಂಸ್ಥೆ ಕಾರ್ಯನಿರ್ವಹಿಸಲಿದೆ. ನೂತನ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಶಿಲಾನ್ಯಾಸದ ಮೂಲಕ ಈಗ ಅಧಿಕೃತ ಚಾಲನೆ ದೊರೆತಿದೆ ಎಂದರು.

ಸಮಾಜ ನಿರ್ಮಾಣದಲ್ಲಿ ಸಂಸ್ಥೆಯ ಪಾತ್ರ ದೊಡ್ಡದು: ಕೇಂದ್ರ ಸಚಿವ ವಿ. ಸೋಮಣ್ಣ

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರು ಮಾತನಾಡಿ, “ಯುವಜನರಿಗೆ ಕೌಶಲ್ಯಾಭಿವೃದ್ಧಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡುವ ಇಂತಹ ಸಂಸ್ಥೆಗಳು ಇಂದಿನ ಅಗತ್ಯವಾಗಿದ್ದು, ಸಮಾಜ ನಿರ್ಮಾಣದಲ್ಲಿ ಇವು ಮಹತ್ವದ ಪಾತ್ರ ವಹಿಸುತ್ತವೆ” ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದ ಶಾಸಕ ಎನ್. ಮುನಿರತ್ನ ಅವರು ಸಂಸ್ಥೆಯ ಮುಂಬರುವ ಕಾರ್ಯಚಟುವಟಿಕೆಗಳಿಗೆ ಹಾಗೂ ನೂತನ ಕಟ್ಟಡ ನಿರ್ಮಾಣಕ್ಕೆ ಭರಪೂರ ಶುಭಕೋರಿದರು.

ಈ ಭವ್ಯ ಸಮಾರಂಭದಲ್ಲಿ ಸ್ವರ್ಣರಶ್ಮಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷರಾದ ಸುಬ್ರಾಯ ಎಂ. ಹೆಗಡೆ, ಉಪಾಧ್ಯಕ್ಷರಾದ ಎನ್. ರಮೇಶ್, ಆಡಳಿತ ಮಂಡಳಿಯ ಪದಾಧಿಕಾರಿಗಳು, ಮಠದ ಭಕ್ತಾದಿಗಳು ಹಾಗೂ ನಾಡಿನ ಪ್ರಮುಖ ಗಣ್ಯರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

About The Author

error: Content is protected !!