June 24, 2026

ಬಿವಿಟಿಯ ನೂತನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಮೋಹನ ಭಾಸ್ಕರ ಹೆಗಡೆ ಅಧಿಕಾರ ಸ್ವೀಕಾರ

ಶಿರಸಿ / ಮಣಿಪಾಲ: ಪ್ರಖ್ಯಾತ ಸೆಲ್ಕೋ (SELCO) ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (CEO) ಸೇವೆ ಸಲ್ಲಿಸಿ ನಿವೃತ್ತರಾಗಿರುವ ಮೋಹನ ಭಾಸ್ಕರ ಹೆಗಡೆ ಹೆರವಟ್ಟ ಅವರು, ಪ್ರತಿಷ್ಠಿತ ಭಾರತೀಯ ವಿಕಾಸ ಟ್ರಸ್ಟ್‌ನ (BVT) ನೂತನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಅಂತಾರಾಷ್ಟ್ರೀಯ ಖ್ಯಾತಿಯ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಹಾಗೂ ಸೆಲ್ಕೋ ಸಂಸ್ಥೆಯ ಸಂಸ್ಥಾಪಕರಾದ ಹರೀಶ್ ಹಂದೆ ಅವರು ಮೋಹನ ಹೆಗಡೆ ಅವರಿಗೆ ಈ ಮಹತ್ವದ ಜವಾಬ್ದಾರಿಯನ್ನು ಹಸ್ತಾಂತರಿಸಿದ್ದಾರೆ.

ಅಪಾರ ಅನುಭವ, ಗಮನಾರ್ಹ ಕೊಡುಗೆ

ಸೌರ ವಿದ್ಯುತ್ ಕ್ಷೇತ್ರದಲ್ಲಿ ಸೆಲ್ಕೋ ಸಂಸ್ಥೆಯ ಮೂಲಕ ಗ್ರಾಮೀಣಾಭಿವೃದ್ಧಿ ಹಾಗೂ ಸುಸ್ಥಿರ ಇಂಧನ ಬಳಕೆಯ ವಿಸ್ತರಣೆಯಲ್ಲಿ ಮೋಹನ ಹೆಗಡೆ ಅವರು ಗಮನಾರ್ಹ ಕೊಡುಗೆ ನೀಡಿದ್ದಾರೆ. ಆಡಳಿತ, ಯೋಜನಾ ನಿರ್ವಹಣೆ ಮತ್ತು ಸಾಮಾಜಿಕ ಅಭಿವೃದ್ಧಿ ಕ್ಷೇತ್ರಗಳಲ್ಲಿ ಅವರು ದಶಕಗಳ ಅಪಾರ ಅನುಭವವನ್ನು ಹೊಂದಿದ್ದಾರೆ.

ಸಾಹಿತ್ಯ, ಸಂಸ್ಕೃತಿ ಮತ್ತು ಸಾಮಾಜಿಕ ವಲಯದಲ್ಲಿ ಸಕ್ರಿಯ

ಸಾಮಾಜಿಕ ಕ್ಷೇತ್ರದ ಜೊತೆಗೆ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದಲ್ಲಿಯೂ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಮೋಹನ ಹೆಗಡೆ ಅವರು: ಯಕ್ಷಗಾನ ತಾಳಮದ್ದಳೆಯ ಪ್ರಸಿದ್ಧ ಅರ್ಥಧಾರಿಯಾಗಿದ್ದಾರೆ. ಲೇಖಕರಾಗಿ ಹಾಗೂ ಪ್ರಭಾವಿ ವಾಗ್ಮಿಯಾಗಿ ಹೆಸರುವಾಸಿಯಾಗಿದ್ದಾರೆ. ಪ್ರಸ್ತುತ ಶ್ರೀರಾಮಚಂದ್ರಾಪುರ ಮಠದ ಆಡಳಿತ ವಿಭಾಗದ ಶಾಸನ ತಂತ್ರ ಸಮಿತಿಯ ಅಧ್ಯಕ್ಷರಾಗಿಯೂ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

    ಟ್ರಸ್ಟ್‌ನ ಕಾರ್ಯಚಟುವಟಿಕೆಗಳಿಗೆ ಹೊಸ ಚೈತನ್ಯ

    ಮಣಿಪಾಲದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಭಾರತೀಯ ವಿಕಾಸ ಟ್ರಸ್ಟ್ (BVT), ಗ್ರಾಮೀಣಾಭಿವೃದ್ಧಿ, ಶಿಕ್ಷಣ, ಸುಸ್ಥಿರ ಆರೋಗ್ಯ ಹಾಗೂ ಜೀವನಾಧಾರ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದೆ. ಮೋಹನ ಭಾಸ್ಕರ ಹೆಗಡೆ ಅವರ ದೀರ್ಘಕಾಲದ ಅನುಭವ ಮತ್ತು ಸಮರ್ಥ ನಾಯಕತ್ವದಿಂದ ಟ್ರಸ್ಟ್‌ನ ಮುಂದಿನ ಎಲ್ಲಾ ಜನಪರ ಯೋಜನೆಗಳಿಗೆ ಮತ್ತಷ್ಟು ವೇಗ ಹಾಗೂ ಹೊಸ ಚೈತನ್ಯ ದೊರೆಯಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

    About The Author

    error: Content is protected !!