June 23, 2026

ಹೊನ್ನಾವರ ತಾಲೂಕು ಆಸ್ಪತ್ರೆ: ವರ್ಗಾವಣೆಗೊಂಡ ವೈದ್ಯರು, ಸಿಬ್ಬಂದಿಗಳಿಗೆ ಆತ್ಮೀಯ ಬೀಳ್ಕೊಡುಗೆ

ಹೊನ್ನಾವರ: ಇಲ್ಲಿನ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಸುದೀರ್ಘ ಹಾಗೂ ಯಶಸ್ವಿ ಸೇವೆ ಸಲ್ಲಿಸಿ ಬೇರೆಡೆಗೆ ವರ್ಗಾವಣೆಗೊಂಡಿರುವ ವೈದ್ಯರು ಮತ್ತು ಸಿಬ್ಬಂದಿಗಳಿಗೆ ಆಸ್ಪತ್ರೆಯ ಆವರಣದಲ್ಲಿ ಆತ್ಮೀಯ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರಮುಖ ಹೃದಯ ರೋಗ ತಜ್ಞರಾದ ಡಾ. ಪ್ರಕಾಶ್ ನಾಯ್ಕ, ದಂತ ವೈದ್ಯರಾದ ಡಾ. ಅನುರಾಧಾ, ಚರ್ಮ ರೋಗ ತಜ್ಞರಾದ ಡಾ. ಶಿವಾನಂದ ಹೆಗಡೆ ಹಾಗೂ ಶುಶ್ರೂಷಾಧಿಕಾರಿ ಸುಜಾತಾ ನಾಯ್ಕ ಸೇರಿದಂತೆ ಹಲವು ಸಿಬ್ಬಂದಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ನನ್ನ ವೃತ್ತಿ ಜೀವನದ ಸುವರ್ಣಯುಗ: ಡಾ. ಪ್ರಕಾಶ್ ನಾಯ್ಕ

ಸನ್ಮಾನ ಸ್ವೀಕರಿಸಿ ಮಾತನಾಡಿದ ಹೃದಯ ರೋಗ ತಜ್ಞ ಡಾ. ಪ್ರಕಾಶ್ ನಾಯ್ಕ, “ಹೊನ್ನಾವರ ತಾಲೂಕು ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಿದ ಅವಧಿ ನನ್ನ ವೃತ್ತಿ ಜೀವನದ ಸುವರ್ಣಯುಗವಿದ್ದಂತೆ. ಇಲ್ಲಿನ ಆಸ್ಪತ್ರೆಯ ವಾತಾವರಣ ಮತ್ತು ಹೊನ್ನಾವರದ ಜನತೆ ನೀಡಿದ ಪ್ರೋತ್ಸಾಹ ಅತ್ಯುತ್ತಮ ಸೇವೆ ನೀಡಲು ಪ್ರೇರಣೆಯಾಯಿತು. ನನ್ನ ವೃತ್ತಿ ಜೀವನದ ಅತ್ಯಂತ ಸ್ಮರಣೀಯ ದಿನಗಳನ್ನು ನಾನು ಇಲ್ಲೇ ಕಳೆದಿದ್ದೇನೆ” ಎಂದು ಭಾವುಕರಾಗಿ ನುಡಿದರು.

ದಂತ ವೈದ್ಯರಾದ ಡಾ. ಅನುರಾಧಾ ಮಾತನಾಡಿ, “ನನ್ನ ವೃತ್ತಿ ಜೀವನದ ಬಹುತೇಕ ಅವಧಿಯನ್ನು ಹೊನ್ನಾವರದಲ್ಲೇ ಕಳೆದಿದ್ದೇನೆ. ಯಾವುದೇ ಅಡ್ಡಿ-ಆತಂಕಗಳಿಲ್ಲದೆ, ಅತ್ಯಂತ ಖುಷಿಯಿಂದ ಸೇವೆ ಸಲ್ಲಿಸುವಂತಹ ವಾತಾವರಣ ಇಲ್ಲಿದೆ” ಎಂದರು. ಚರ್ಮ ರೋಗ ತಜ್ಞರಾದ ಡಾ. ಶಿವಾನಂದ ಹೆಗಡೆ ಅವರು ಮಾತನಾಡಿ, “ಕಾಲಚಕ್ರ ಉರುಳಿದಂತೆ ನಾವೂ ಸಾಗಬೇಕು. ಹೊನ್ನಾವರವು ಯಾವುದೇ ತಂಟೆ-ತಕರಾರುಗಳಿಲ್ಲದೆ ನೆಮ್ಮದಿಯಿಂದ ಕೆಲಸ ಮಾಡಬಹುದಾದ ಅತ್ಯಂತ ಸುಂದರ ಸ್ಥಳ” ಎಂದು ತಮ್ಮ ಸೇವೆಯ ದಿನಗಳನ್ನು ಸ್ಮರಿಸಿದರು.

ಸಿಬ್ಬಂದಿಗಳಿಗೆ ಗೌರವ ಸಲ್ಲಿಕೆ:

ಇದೇ ಸಂದರ್ಭದಲ್ಲಿ ಆಸ್ಪತ್ರೆಯಿಂದ ಬೇರೆಡೆಗೆ ವರ್ಗಾವಣೆಗೊಂಡಿರುವ ಸಿಬ್ಬಂದಿಗಳಾದ ಗಿರಿಜಾ ನಾಯ್ಕ, ಶೋಭಾ ಫರ್ನಾಂಡಿಸ್, ಭಾರತಿ ನಾಯ್ಕ, ಜಯಲಕ್ಷ್ಮಿ, ವಾಹನ ಚಾಲಕ ಮಂಜುನಾಥ ನಾಯ್ಕ ಹಾಗೂ ಆರೋಗ್ಯ ಮಿತ್ರ ವೆಂಕಟೇಶ ಪಟಗಾರ ಅವರಿಗೆ ನೆನಪಿನ ಕಾಣಿಕೆ ನೀಡಿ, ಶಾಲೂ ಹೊದಿಸಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ರಾಜೇಶ್ ಕಿಣಿ ಅವರು ಮಾತನಾಡಿ, ವರ್ಗಾವಣೆಗೊಂಡ ಎಲ್ಲಾ ವೈದ್ಯರು ಹಾಗೂ ಸಿಬ್ಬಂದಿಗಳ ನಿಷ್ಠಾವಂತ ಸೇವೆಯನ್ನು ಶ್ಲಾಘಿಸಿದರು. ಆಸ್ಪತ್ರೆಯ ಒಟ್ಟಾರೆ ಅಭಿವೃದ್ಧಿ ಹಾಗೂ ರೋಗಿಗಳ ಸೇವೆಯಲ್ಲಿ ಇವರೆಲ್ಲರ ಶ್ರಮ ಮತ್ತು ಕೊಡುಗೆ ದೊಡ್ಡದಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಸಮಾರಂಭದಲ್ಲಿ ಆಸ್ಪತ್ರೆಯ ಇತರೆ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ವರದಿ : ವಿಶ್ವನಾಥ ಸಾಲ್ಕೋಡ ಹೊನ್ನಾವರ

About The Author

error: Content is protected !!