July 15, 2026

ಹೊನ್ನಾವರ ತಾಲೂಕು ಆಡಳಿತ ಸೌಧದಲ್ಲಿ ನೂತನ ‘ಹಾಲುಣಿಸುವ ಕೇಂದ್ರ’ ಲೋಕಾರ್ಪಣೆ:                        ರೋಟರಿ ಸಂಸ್ಥೆ ಹಾಗೂ ದಾನಿ ಬಾಲಕೃಷ್ಣ ಬಾಳೇರಿ ಶ್ಲಾಘನೀಯ ಕಾರ್ಯ

ಹೊನ್ನಾವರ: ತಾಲೂಕು ಆಡಳಿತ ಸೌಧ ಹಾಗೂ ತಹಶೀಲ್ದಾರ್ ಕಚೇರಿಗೆ ವಿವಿಧ ಕೆಲಸ ಕಾರ್ಯಗಳಿಗಾಗಿ ಆಗಮಿಸುವ ಮಹಿಳೆಯರಿಗೆ ಮತ್ತು ಅವರ ಪುಟ್ಟ ಕಂದಮ್ಮಗಳ ಅನುಕೂಲಕ್ಕಾಗಿ ರೋಟರಿ ಸಂಸ್ಥೆಯ ಸಹಯೋಗದೊಂದಿಗೆ ನೂತನವಾಗಿ ನಿರ್ಮಿಸಲಾದ ‘ಹಾಲುಣಿಸುವ ಕೇಂದ್ರ’ವನ್ನು ಗ್ರೇಡ್-2 ತಹಶೀಲ್ದಾರ್ ಉಷಾ ಪಾವಸ್ಕರ್ ಅವರು ಸೋಮವಾರ ಅಧಿಕೃತವಾಗಿ ಉದ್ಘಾಟಿಸಿದರು.
ಸಾಮಾಜಿಕ ಕಾರ್ಯಕರ್ತರಾದ ಬಾಲಕೃಷ್ಣ ಬಾಳೇರಿ ಅವರು ತಮ್ಮ ಪತ್ನಿ ಸೌಮ್ಯ ಬಾಲಕೃಷ್ಣ ಬಾಳೇರಿ ಅವರ ಹೆಸರಿನಲ್ಲಿ, ರೋಟರಿ ಕ್ಲಬ್ ಸಹಕಾರದೊಂದಿಗೆ ಈ ಸುಸಜ್ಜಿತ ಕೇಂದ್ರವನ್ನು ತಹಶೀಲ್ದಾರ್ ಕಚೇರಿಗೆ ಕೊಡುಗೆಯಾಗಿ ನೀಡಿದ್ದಾರೆ.

ತಾಲೂಕು ಮಟ್ಟದ ಕಚೇರಿಯಲ್ಲೇ ಪ್ರಥಮ ಪ್ರಯೋಗ: ತಹಶೀಲ್ದಾರ್ ಪ್ರವೀಣ ಕರಾಂಡೆ

ಕಾರ್ಯಕ್ರಮದಲ್ಲಿ ಮಾತನಾಡಿದ ತಹಶೀಲ್ದಾರ್ ಪ್ರವೀಣ ಕರಾಂಡೆ ಅವರು, “ಆಧಾರ್ ನೊಂದಣಿ ಹಾಗೂ ಕಚೇರಿಯ ಇತರೆ ಕೆಲಸಗಳಿಗೆ ಮಹಿಳೆಯರು ತಮ್ಮ ಪುಟ್ಟ ಕಂದಮ್ಮಗಳನ್ನು ಕರೆದುಕೊಂಡು ಬಂದಾಗ ಅನುಭವಿಸುವ ಮುಜುಗರ ಮತ್ತು ಕಷ್ಟಗಳ ಕುರಿತು ಸಾಲ್ಕೋಡ್ ಗ್ರಾಮ ಸಹಾಯಕ ಜಗದೀಶ ನಾಯ್ಕ ಅವರು ನನ್ನ ಗಮನಕ್ಕೆ ತಂದಿದ್ದರು. ಈ ವಿಷಯವನ್ನು ರೋಟರಿ ಸಂಸ್ಥೆಯ ಪದಾಧಿಕಾರಿಗಳ ಜೊತೆ ಹಂಚಿಕೊಂಡಾಗ, ಅವರು ತಕ್ಷಣವೇ ಸ್ಪಂದಿಸಿ ದಾನಿಗಳ ಮೂಲಕ ಈ ಕೇಂದ್ರವನ್ನು ನಿರ್ಮಿಸಿಕೊಟ್ಟಿದ್ದಾರೆ. ತಾಲೂಕು ಮಟ್ಟದ ಸರ್ಕಾರಿ ಕಚೇರಿಯೊಂದರಲ್ಲಿ ಇಂತಹ ಮಹತ್ವದ ಸೌಲಭ್ಯ ಪ್ರಾರಂಭವಾಗಿರುವುದು ಜಿಲ್ಲೆಯಲ್ಲೇ ಇದೇ ಮೊದಲು” ಎಂದರು.
ಮುಂದುವರಿದು ಮಾತನಾಡಿದ ಅವರು, “ಸಾರ್ವಜನಿಕರು ಮತ್ತು ಸಂಘ-ಸಂಸ್ಥೆಗಳ ಸಹಕಾರ ಸಿಕ್ಕರೆ ಇಂತಹ ಹತ್ತಾರು ಧನಾತ್ಮಕ ಕೆಲಸಗಳನ್ನು ಮಾಡಲು ಸಾಧ್ಯ. ಸದ್ಯದಲ್ಲೇ ತಾಲೂಕು ಕಚೇರಿಯಲ್ಲಿ ಸಾರ್ವಜನಿಕರಿಗಾಗಿ ಒಂದು ಸಣ್ಣ ಗ್ರಂಥಾಲಯವನ್ನು ಮಾಡುವ ಯೋಜನೆಯೂ ಇದ್ದು, ಇದಕ್ಕೂ ಎಲ್ಲರ ಸಹಕಾರ ಅಗತ್ಯವಿದೆ” ಎಂದು ಆಶಯ ವ್ಯಕ್ತಪಡಿಸಿದರು.

ಅಧಿಕಾರಿಗಳ ಇಚ್ಛಾಶಕ್ತಿಗೆ ರೋಟರಿ ಮೆಚ್ಚುಗೆ

ರೋಟರಿ ಸಂಸ್ಥೆಯ ಅಧ್ಯಕ್ಷರಾದ ರಾಜು ಮಾಳಗಿಮನಿ ಮಾತನಾಡಿ, “ಎಲ್ಲರ ಸಾಮೂಹಿಕ ಸಹಕಾರದಿಂದ ಇಂದು ತಾಲೂಕು ಆಡಳಿತ ಕಚೇರಿಯಲ್ಲಿ ಅತ್ಯುತ್ತಮ ಸೌಲಭ್ಯವೊಂದು ಲೋಕಾರ್ಪಣೆಯಾಗಿದೆ. ಯುವ ಅಧಿಕಾರಿಗಳು ಉನ್ನತ ಹುದ್ದೆಯಲ್ಲಿದ್ದಾಗ ಆಡಳಿತ ವ್ಯವಸ್ಥೆಯಲ್ಲಿ ಎಂತಹ ಧನಾತ್ಮಕ ಬದಲಾವಣೆಗಳನ್ನು ತರಬಹುದು ಎನ್ನುವುದಕ್ಕೆ ಈ ಕಚೇರಿಯೇ ಪ್ರತ್ಯಕ್ಷ ಸಾಕ್ಷಿಯಾಗಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಸೂರ್ಯಕಾಂತ ಸಾರಂಗ ಮಾತನಾಡಿ, ಕೆಲಸ ಮಾಡುವ ಮನಸ್ಸಿರುವ ಅಧಿಕಾರಿಗಳು ಸಿಕ್ಕಾಗ ರೋಟರಿ ಸಂಸ್ಥೆಯ ಮೂಲಕ ಇಂತಹ ಅತ್ಯುತ್ತಮ ಸಾಮಾಜಿಕ ಫಲಿತಾಂಶಗಳು ಹೊರಬರಲು ಸಾಧ್ಯ ಎಂದರು.

ಸಮಾರಂಭದಲ್ಲಿ ಕೇಂದ್ರದ ಪ್ರಾಯೋಜಕರಾದ ಬಾಲಕೃಷ್ಣ ಬಾಳೇರಿ, ರೋಟರಿ ಕಾರ್ಯದರ್ಶಿ ಹೆನ್ರಿ ಲೀಮಾ, ಖಜಾಂಚಿ ಸುಹಾನ್ ಹೊರ್ಟಾ, ಸದಸ್ಯರಾದ ದೀಪಕ‌ ಲೋಪಿಸ್, ದಿನೇಶ ಕಾಮತ್, ಸ್ಟೀಪನ್ ರೊಡ್ರಗೀಸ್, ಶ್ರೀಕಾಂತ ನಾಯ್ಕ, ಡಾ. ರಾಜೇಶ ಕಿಣಿ, ಗಣೇಶ ಹೆಬ್ಬಾರ, ಎಂ.ಎಂ. ಹೆಗಡೆ, ಮಹೇಶ ಕಲ್ಯಾಣಪುರ ಉಪಸ್ಥಿತರಿದ್ದರು.
ಇವರೊಂದಿಗೆ ಕ್ಷೇತ್ರ ಶಿಕ್ಷಣಾಧಿಕಾರಿ (BEO) ಜಯಶ್ರೀ ನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ಎಂ.ಜಿ. ನಾಯ್ಕ, ತಾಲೂಕು ಆರೋಗ್ಯಾಧಿಕಾರಿ ಡಾ. ವೈಶಾಲಿ ನಾಯ್ಕ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಣ್ಣಪ್ಪ ಮುಕ್ರಿ, ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಸುಧೀಶ ನಾಯ್ಕ ಸೇರಿದಂತೆ ಹಲವು ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.                                     ವರದಿ ; ವಿಶ್ವನಾಥ ಸಾಲ್ಕೋಡ

About The Author

error: Content is protected !!