July 15, 2026

ಬೆಳಗಾವಿ ಜಿಲ್ಲೆ ಅಥಣಿ ತಾಲೂಕು: ಇಂದಿರಾಗಾಂಧಿ ಮೂರ್ತಿ ಸ್ಥಾಪಕ ಅಶೋಕ್ ತಳವಾರ ಅವರಿಗೆ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯಿಂದ ಸನ್ಮಾನ

ಅಥಣಿ: ಇಲ್ಲಿನ ಪ್ರಸಿದ್ಧ ಹಾಗೂ ಐತಿಹಾಸಿಕ ಶ್ರೀ ರಾಮೇಶ್ವರ ದೇವಸ್ಥಾನಕ್ಕೆ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ಪದಾಧಿಕಾರಿಗಳು ಇತ್ತೀಚೆಗೆ ಭೇಟಿ ನೀಡಿ, ಅಲ್ಲಿನ ವಿಶೇಷತೆಗಳನ್ನು ಅರಿತುಕೊಂಡರು. ಇದೇ ಸಂದರ್ಭದಲ್ಲಿ ದೇವಸ್ಥಾನದ ಆವರಣದಲ್ಲಿ ಅಪರೂಪದ ಸತ್ಕಾರ್ಯದ ಮೂಲಕ ಗಮನ ಸೆಳೆದ ವಿಶೇಷ ವ್ಯಕ್ತಿ, ಅಪ್ಪಟ ದೇಶಪ್ರೇಮಿ ಶ್ರೀ ಅಶೋಕ್ ತಳವಾರ ಅವರನ್ನು ಸಂಸ್ಥೆಯ ವತಿಯಿಂದ ಗುರುತಿಸಿ ಸನ್ಮಾನಿಸಲಾಯಿತು.


ಭಾರತ ರತ್ನ, ದೇಶದ ಮೊದಲ ಮಹಿಳಾ ಪ್ರಧಾನ ಮಂತ್ರಿ ದಿವಂಗತ ಇಂದಿರಾಗಾಂಧಿ ಅವರ ಮೇಲಿನ ಅಪಾರ ಅಭಿಮಾನದಿಂದ ಅಶೋಕ್ ತಳವಾರ ಅವರು ತಮ್ಮ ಸ್ವಂತ ಆಸಕ್ತಿ ಮತ್ತು ವೆಚ್ಚದಲ್ಲಿ ಇಂದಿರಾಗಾಂಧಿಯವರ ಭವ್ಯ ಮೂರ್ತಿಯನ್ನು ಸ್ಥಾಪಿಸಿದ್ದಾರೆ. ಈ ಸುಂದರ ಮೂರ್ತಿಯನ್ನು ವೀಕ್ಷಣೆ ಮಾಡಿದ ಸಂಸ್ಥೆಯ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಅವರ ಮೂರ್ತಿಗೆ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ಮುಖ್ಯಸ್ಥರಾದ ಪ್ರವೀಣ ನಾಯಿಕ ಅವರು ಮಾಲಾರ್ಪಣೆ ಮಾಡಿ ಭಾವಪೂರ್ಣ ಗೌರವ ನಮನಗಳನ್ನು ಸಲ್ಲಿಸಿದರು. ನಂತರ ಇಂದಿರಾಗಾಂಧಿಯವರ ನೆನಪನ್ನು ಹಸಿರಾಗಿಟ್ಟಿರುವ ಹೆಮ್ಮೆಯ ಅಭಿಮಾನಿ ಶ್ರೀ ಅಶೋಕ್ ತಳವಾರ ಅವರಿಗೆ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ರಾಷ್ಟ್ರೀಯ ನಾಯಕರ ಭೇಟಿಯ ಭರವಸೆ: ಅಶೋಕ್ ತಳವಾರ

ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀ ಅಶೋಕ್ ತಳವಾರ ಅವರು, “ನಾನು ಮಾಜಿ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಅವರ ಅಪ್ಪಟ ಅಭಿಮಾನಿಯಾಗಿದ್ದೇನೆ. ದೇಶಕ್ಕಾಗಿ ಅವರು ನೀಡಿದ ಕೊಡುಗೆ ಮತ್ತು ಅವರ ಧೀಮಂತ ನಾಯಕತ್ವ ನಮಗೆಲ್ಲರಿಗೂ ಸದಾ ಪ್ರೇರಣೆಯಾಗಿದೆ. ಅವರ ನೆನಪನ್ನು ಅಮರವಾಗಿಸಲು ಈ ಮೂರ್ತಿಯನ್ನು ಸ್ಥಾಪಿಸಲಾಗಿದೆ. ಈ ಇಂದಿರಾಗಾಂಧಿಯ ಮೂರ್ತಿಯನ್ನು ವೀಕ್ಷಿಸಲು ಈ ಹಿಂದೆ ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯದ ಹಲವು ಮಂತ್ರಿಗಳು ಇಲ್ಲಿಗೆ ಭೇಟಿ ನೀಡಿ ಹೋಗಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸೋನಿಯಾ ಗಾಂಧಿ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಇಲ್ಲಿಗೆ ಬರುವಂತೆ ವಿನಂತಿಸಿದ್ದೆ, ಅವರು ಬರುವುದಾಗಿ ಹೇಳಿದ್ದರೂ ಕೆಲವು ಕಾರಣಗಳಿಂದ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಇತ್ತೀಚೆಗೆ ರಾಹುಲ್ ಗಾಂಧಿ ಅವರ ಜನ್ಮದಿನದಂದು ಅವರನ್ನು ಭೇಟಿ ಮಾಡಿ ಈ ಮೂರ್ತಿಯ ಬಗ್ಗೆ ಮಾಹಿತಿ ನೀಡಿ ಬಂದಿದ್ದೇನೆ, ಅವರು ಕೂಡ ಶೀಘ್ರದಲ್ಲೇ ಇಲ್ಲಿಗೆ ಬರುವುದಾಗಿ ಭರವಸೆ ನೀಡಿದ್ದಾರೆ” ಎಂದು ತಮ್ಮ ಪ್ರಯತ್ನಗಳನ್ನು ಹಂಚಿಕೊಂಡರು.

ಅಥಣಿಗೆ ಹೆಮ್ಮೆ ತಂದ ಕಾರ್ಯ: ಪ್ರವೀಣ ನಾಯಿಕ

ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ಮುಖ್ಯಸ್ಥರಾದ ಪ್ರವೀಣ ನಾಯಿಕ ಮಾತನಾಡಿ, “ಕಾಶಿಯಲ್ಲಿರುವ ರಾಮೇಶ್ವರ ಅಥಣಿಯಲ್ಲೂ ಇದೆ ಎನ್ನುವುದು ನಮಗೆ ಹೆಮ್ಮೆಪಡುವ ವಿಚಾರ. ದೇಶದ ಹೆಮ್ಮೆಯ ಮಾಜಿ ಮಹಿಳಾ ಪ್ರಧಾನಿಯವರ ಮೂರ್ತಿಯನ್ನು ಸ್ಥಾಪನೆ ಮಾಡಿರುವುದು ಇಡೀ ಅಥಣಿ ತಾಲೂಕಿಗೆ ಹೆಮ್ಮೆ ತರುವ ಸಂಗತಿಯಾಗಿದೆ. ಹಿಂದೆ ಹಲವು ರಾಜಕಾರಣಿಗಳು ಇಲ್ಲಿಗೆ ಬಂದು ಹೋಗಿದ್ದಾರೆ. ಆದರೆ ಪ್ರಸ್ತುತ ದಿನಗಳಲ್ಲಿ ಹಾಲಿ ರಾಜಕಾರಣಿಗಳು ಯಾರೂ ಇಲ್ಲಿಗೆ ಭೇಟಿ ನೀಡಿಲ್ಲದಿರುವುದು ಬೇಸರದ ಸಂಗತಿ. ಮೂರ್ತಿ ಸ್ಥಾಪಿಸಿ ಇಂದಿರಾಗಾಂಧಿ ಅವರ ನೆನಪನ್ನು ಜೀವಂತವಾಗಿಟ್ಟಿರುವ ಅಶೋಕ ತಳವಾರ ಅವರ ಬೆನ್ನೆಲುಬಾಗಿ ನಮ್ಮ ಸಂಸ್ಥೆ ಸದಾಕಾಲ ನಿಲ್ಲುತ್ತದೆ” ಎಂದು ಹೇಳಿದರು.

ಈ ಮಹತ್ವದ ಸಂದರ್ಭದಲ್ಲಿ ಪ್ರಮುಖ ಮುಖಂಡರಾದ ಶರಣಪ್ಪ ಸಿಂಧೆ, ಅನಿಲ ಭಾಮನೆ, ಎಂ. ಶರ್ಮಾ, ಕಿರಣ ಪಾಟೋಳೆ, ಅಶೋಕ ಬಡಿಗೇರ, ಶಿವಾನಂದ ನಾವಿ, ಪ್ರಶಾಂತ ಶಿಂದೆ, ಮಾದೇವ ನಾಯಿಕ, ಅಮೂಲ ಚವಾಣ ಹಾಗೂ ಸಂಸ್ಥೆಯ ಮಹಿಳಾ ಘಟಕದ ಮುಖ್ಯಸ್ಥರಾದ ಕವಿತಾ ಬೋಸ್ಲೆ, ಸರಸ್ವತಿ ನ್ಯಾಮಗೌಡ, ಶಾಂತ ಸಿಂಧಿ, ರೇಷ್ಮಾ ತೇಲಿ, ಸಾವಿತ್ರಿ ಬಡಿಗೇರ ಸೇರಿದಂತೆ ಇನ್ನೂ ಅನೇಕ ಮುಖಂಡರು ಹಾಗೂ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಮಹೇಶ್ ಶರ್ಮಾ

About The Author

error: Content is protected !!