ಭಟ್ಕಳ: ಪತ್ರಿಕಾ ದಿನಾಚರಣೆಯ ವಿಶೇಷ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಭಟ್ಕಳ ತಾಲೂಕು ಘಟಕದ ವತಿಯಿಂದ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಇಲಾಖೆಯ ಸಾಧಕರನ್ನು ಸನ್ಮಾನಿಸಿ ಗೌರವಿಸುವ ಅರ್ಥಪೂರ್ಣ ಕಾರ್ಯಕ್ರಮ ಜರುಗಿತು.

ಇತ್ತೀಚೆಗೆ ಗೌರವಾನ್ವಿತ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿರುವ ನಗರ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ (ಪಿಎಸ್ಐ) ನವೀನ್ ನಾಯ್ಕ್ ಹಾಗೂ ಡಿಜಿ-ಐಜಿಪಿ ಪ್ರಶಸ್ತಿ ಪದಕಕ್ಕೆ ಭಾಜನರಾದ ಹೆಡ್ ಕಾನ್ಸ್ಟೇಬಲ್ ದೀಪಕ್ ನಾಯ್ಕ್ ಅವರನ್ನು ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ಇದೇ ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಸೇರಿದಂತೆ ಮಂಜುನಾಥ್ ಮೊಗೇರ್, ದಯಾನಂದ ನಾಯ್ಕ್, ಗಣೇಶ್ ನಾಯ್ಕ್ ಹಾಗೂ ಯಶಶ್ರೀ ಆರ್. ಭಟ್ ಅವರನ್ನೂ ಸಹ ಗೌರವಿಸಲಾಯಿತು.
ಪೊಲೀಸ್-ಪತ್ರಕರ್ತರ ಬಾಂಧವ್ಯ ಸಮಾಜಕ್ಕೆ ಅಗತ್ಯ: ಡಿವೈಎಸ್ಪಿ ಗಿರೀಶ್
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಭಟ್ಕಳ ಡಿವೈಎಸ್ಪಿ ಬಿ. ಗಿರೀಶ್ ಅವರು, “ಸಮಾಜದ ಸ್ವಾಸ್ಥ್ಯ ಮತ್ತು ಹಿತದೃಷ್ಟಿಯಿಂದ ಪೊಲೀಸ್ ಇಲಾಖೆ ಹಾಗೂ ಪತ್ರಕರ್ತರ ನಡುವೆ ಉತ್ತಮ ಬಾಂಧವ್ಯ ಇರುವುದು ಅತ್ಯಗತ್ಯ. ಆಡಳಿತದ ಲೋಪದೋಷಗಳನ್ನು ತಿದ್ದಿ, ಸಾರ್ವಜನಿಕರ ಗಮನಕ್ಕೆ ತರುವಲ್ಲಿ ಮಾಧ್ಯಮಗಳು ಮಹತ್ವದ ಪಾತ್ರ ವಹಿಸುತ್ತವೆ. ನಿರಂತರ ಒತ್ತಡದಲ್ಲಿ ಕೆಲಸ ಮಾಡುವ ಪೊಲೀಸ್ ಸಿಬ್ಬಂದಿಯ ಸೇವೆಯನ್ನು ಗುರುತಿಸಿ ಗೌರವಿಸುವ ಇಂತಹ ಕಾರ್ಯಕ್ರಮಗಳು ಇಲಾಖೆ ಮತ್ತು ಮಾಧ್ಯಮಗಳ ನಡುವಿನ ಪರಸ್ಪರ ವಿಶ್ವಾಸವನ್ನು ಇನ್ನಷ್ಟು ಬಲಪಡಿಸುತ್ತವೆ” ಎಂದು ಶ್ಲಾಘಿಸಿದರು.
ಬಳಿಕ ಮಾತನಾಡಿದ ಸಿಪಿಐ ದಿವಾಕರ್ ಅವರು, “ಸಮಾಜದ ಪ್ರಗತಿ ಹಾಗೂ ಒಳಿತಿಗಾಗಿ ಪೊಲೀಸ್ ಇಲಾಖೆ ಮತ್ತು ಮಾಧ್ಯಮ ರಂಗ ಜವಾಬ್ದಾರಿಯುತವಾಗಿ ಒಟ್ಟಾಗಿ ಕೈಜೋಡಿಸಿ ಕಾರ್ಯನಿರ್ವಹಿಸಬೇಕು” ಎಂದು ಕರೆ ನೀಡಿದರು.
ಸನ್ಮಾನ ಸ್ವೀಕರಿಸಿದ ಪಿಎಸ್ಐ ನವೀನ್ ನಾಯ್ಕ್ ಹಾಗೂ ಹೆಡ್ ಕಾನ್ಸ್ಟೇಬಲ್ ದೀಪಕ್ ನಾಯ್ಕ್ ಅವರು ತಮ್ಮ ಸೇವೆಯನ್ನು ಗುರುತಿಸಿದ ಪತ್ರಕರ್ತರ ಸಂಘಕ್ಕೆ ಕೃತಜ್ಞತೆ ಸಲ್ಲಿಸಿದರು.

ಗಣ್ಯರ ಉಪಸ್ಥಿತಿ:
ಕಾರ್ಯಕ್ರಮದಲ್ಲಿ ಸಂಘದ ಖಜಾಂಚಿ ಅರ್ಜುನ್ ಮಲ್ಯ ಸ್ವಾಗತಿಸಿದರು. ಕರಾವಳಿ ಕರ್ನಾಟಕ ವಲಯದ ಅಧ್ಯಕ್ಷ ಕುಮಾರ್ ನಾಯ್ಕ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ತಾಲೂಕು ಘಟಕದ ಅಧ್ಯಕ್ಷ ನಸಿ ಮುಲ್ಲಾ ಘನಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಶಾನಭಾಗ, ಸದಸ್ಯರಾದ ಮೊಹಮ್ಮದ್ ಅಶ್ರಫ್ ಎಂ., ಗುರುಪ್ರಸಾದ್, ವಿವಿಧ ಪತ್ರಿಕಾ ಪದಾಧಿಕಾರಿಗಳು, ಪತ್ರಕರ್ತರು ಹಾಗೂ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

More Stories
ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯಕ್ಕೆ ಶೇ. 100 ಕ್ಕೆ 100 ಫಲಿತಾಂಶ; ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ
ವಿದೇಶಿ ಉದ್ಯೋಗದ ಆಮಿಷ ಒಡ್ಡಿ ಯುವಕನಿಗೆ ₹2.49 ಲಕ್ಷ ವಂಚನೆ: ಮೂವರ ವಿರುದ್ಧ ಪ್ರಕರಣ ದಾಖಲು!
ಅಪಘಾತ ಸ್ಥಳಕ್ಕೆ ಎಸ್ಪಿ ಭೇಟಿ; ತುರ್ತು ಸುರಕ್ಷತಾ ಕ್ರಮಕ್ಕೆ ಖಡಕ್ ಸೂಚನೆ