July 17, 2026

ಭಟ್ಕಳದಲ್ಲಿ ಅಡಗಿದ್ದ ಕುಂದಾಪುರದ ಕುಖ್ಯಾತ ವಾರಂಟ್ ಆರೋಪಿ ‘ರಬಡ’ ಕೊನೆಗೂ ಅರೆಸ್ಟ್!

ಭಟ್ಕಳ: ಕೊಲೆಯತ್ನ, ಕಳ್ಳತನ ಸೇರಿದಂತೆ ಒಟ್ಟು 7 ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ಕಳೆದ ಆರು ತಿಂಗಳಿಂದ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ ಕುಖ್ಯಾತ ವಾರಂಟ್ ಆರೋಪಿಯನ್ನು ಕುಂದಾಪುರ ಗ್ರಾಮಾಂತರ ಪೊಲೀಸರು ಭಟ್ಕಳದಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಉಡುಪಿ ಜಿಲ್ಲೆಯ ಹಟ್ಟಿಯಂಗಡಿ ಗ್ರಾಮದ ಕರ್ಕಿಗುಡ್ಡೆ ನಿವಾಸಿ ಪ್ರಸಾದ್ ಅಲಿಯಾಸ್ ರಬಡ (22) ಬಂಧಿತ ಆರೋಪಿ.

ಏಳು ಗಂಭೀರ ಪ್ರಕರಣಗಳ ಕಿಂಗ್‌ಪಿನ್:

ಬಂಧಿತ ಆರೋಪಿ ಪ್ರಸಾದ್ ಸಣ್ಣ ವಯಸ್ಸಿನಲ್ಲೇ ಹಲವು ಗಂಭೀರ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದನು. ಈತನ ವಿರುದ್ಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 4, ಕುಂದಾಪುರ ನಗರ ಪೊಲೀಸ್ ಠಾಣೆಯಲ್ಲಿ 2 ಹಾಗೂ ಮಣಿಪಾಲ ಪೊಲೀಸ್ ಠಾಣೆಯಲ್ಲಿ 1 ಸೇರಿದಂತೆ ಒಟ್ಟು 7 ಅಪರಾಧ ಪ್ರಕರಣಗಳು ದಾಖಲಾಗಿವೆ.
2026ರ ಫೆಬ್ರವರಿಯಲ್ಲಿ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಅಡಿ ಗಂಭೀರ ಪ್ರಕರಣ ದಾಖಲಾದ ಬಳಿಕ, ಈತ ತಲೆಮರೆಸಿಕೊಂಡಿದ್ದನು. ಕೋರ್ಟ್ ಸಮನ್ಸ್‌ಗಳಿಗೂ ಹಾಜರಾಗದ ಹಿನ್ನೆಲೆಯಲ್ಲಿ, ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಈತನ ವಿರುದ್ಧ ಜಾಮೀನು ರಹಿತ ವಾರಂಟ್ (NBW) ಹೊರಡಿಸಿತ್ತು.

ಭಟ್ಕಳದಲ್ಲಿ ಅಡಗಿದ್ದಾಗ ಖೆಡ್ಡಾಕ್ಕೆ ಕೆಡವಿದ ಪೊಲೀಸರು:

ಕಳೆದ ಆರು ತಿಂಗಳಿಂದ ಪೊಲೀಸರ ಕಣ್ಣು ತಪ್ಪಿಸಿ ಓಡಾಡುತ್ತಿದ್ದ ಆರೋಪಿ ಪ್ರಸಾದ್, ಸದ್ಯ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಅಡಗಿಕೊಂಡಿದ್ದಾನೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಕುಂದಾಪುರ ಪೊಲೀಸರು ಭಟ್ಕಳಕ್ಕೆ ಧಾವಿಸಿ, ಯಶಸ್ವಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಹಗ್ಗಜಗ್ಗಾಟವಿಲ್ಲದೆ ವಶಕ್ಕೆ ಪಡೆದಿದ್ದಾರೆ.

ಕಾರ್ಯಾಚರಣೆ ತಂಡ:

ಕುಂದಾಪುರ ವೃತ್ತ ನಿರೀಕ್ಷಕ ಸಂತೋಷ್ ಎ. ಕಾಯ್ಕಿಣಿ ಅವರ ಮಾರ್ಗದರ್ಶನದಲ್ಲಿ, ಗ್ರಾಮಾಂತರ ಠಾಣೆಯ ಪೊಲೀಸ್ ಉಪನಿರೀಕ್ಷಕ (ಕಾ.ಸು) ನಿರಂಜನ್ ಗೌಡ ಹಾಗೂ ತನಿಖಾ ಪಿಎಸ್‌ಐ ಚಂದ್ರಕಲಾ ಎಂ. ಪತ್ತಾರ ಅವರ ನೇತೃತ್ವದಲ್ಲಿ, ಸಿಬ್ಬಂದಿಗಳಾದ ಶ್ರೀಧರ್ ಪಾಟೀಲ್ ಮತ್ತು ಕಿರಣ್ ಬಿ. ಪಾಟೀಲ್ ಅವರನ್ನೊಳಗೊಂಡ ವಿಶೇಷ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ.
ಬಂಧಿತ ಆರೋಪಿಯನ್ನು ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

About The Author

error: Content is protected !!