July 17, 2026

ಭಟ್ಕಳದಲ್ಲಿ ಡ್ರಗ್ಸ್ ಹಾವಳಿಗೆ ಬ್ರೇಕ್: ಐವರು ಮಾದಕ ವ್ಯಸನಿಗಳು ಪೊಲೀಸರ ವಶಕ್ಕೆ

ಭಟ್ಕಳ: ಕರಾವಳಿ ಭಾಗದಲ್ಲಿ ಮಾದಕ ದ್ರವ್ಯಗಳ ಜಾಲವನ್ನು ಬೇರುಸಹಿತ ಕಿತ್ತೆಸೆಯಲು ಭಟ್ಕಳ ಪೊಲೀಸರು ತಮ್ಮ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಎನ್‌ಡಿಪಿಎಸ್ (NDPS) ಕಾಯ್ದೆಯಡಿ ಪ್ರತ್ಯೇಕ ಕಡೆ ದಾಳಿ ನಡೆಸಿರುವ ಪೊಲೀಸರು, ಮಾದಕ ದ್ರವ್ಯ ಸೇವನೆ ಮಾಡುತ್ತಿದ್ದ ಒಟ್ಟು ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರಲ್ಲಿ ನಾಲ್ವರನ್ನು ಭಟ್ಕಳ ಶಹರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದರೆ, ಮತ್ತೊಬ್ಬನನ್ನು ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಕೋಳಿ ಫಾರ್ಮ್ ಬಳಿ ಸಿಕ್ಕಿಬಿದ್ದ ಸಲೀಂ

ಭಟ್ಕಳ ಗ್ರಾಮೀಣ ಠಾಣೆ ವ್ಯಾಪ್ತಿಯ ಫಿರ್ದೋಸ್‌ನಗರದ ಕೋಳಿ ಫಾರ್ಮ್ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಯುವಕನೊಬ್ಬ ಅಮಲಿನ ಸ್ಥಿತಿಯಲ್ಲಿ ತೂರಾಡುತ್ತಾ, ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ. ಈ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಗ್ರಾಮೀಣ ಠಾಣೆಯ ಪಿಎಸ್‌ಐ ಮಲ್ಲಿಕಾರ್ಜುನಯ್ಯ ಕೊರಾಣಿ ನೇತೃತ್ವದ ತಂಡ ಜುಲೈ 16ರಂದು ಸ್ಥಳಕ್ಕೆ ದಾಳಿ ನಡೆಸಿ ತಗ್ಗರಗೋಡ ನಿವಾಸಿ ಮೊಹಮ್ಮದ್ ಸಲೀಂ (25) ಎಂಬಾತನನ್ನು ವಶಕ್ಕೆ ಪಡೆದಿದೆ. ಬಳಿಕ ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದ್ದು, ಪೊಲೀಸರು ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಶಹರ ಪೊಲೀಸರ ಪ್ರತ್ಯೇಕ ದಾಳಿ: ನಾಲ್ವರ ಬಂಧನ

ಇತ್ತ ಭಟ್ಕಳ ಶಹರ ಠಾಣೆಯ ಪಿಎಸ್‌ಐ ನವೀನ್ ಎಸ್. ನಾಯ್ಕ ನೇತೃತ್ವದ ತಂಡ ನಗರದ ವಿವಿಧೆಡೆ ಮಿಂಚಿನ ಕಾರ್ಯಾಚರಣೆ ನಡೆಸಿದೆ.

ಸಂತೆ ಮಾರ್ಕೆಟ್ ಸಮೀಪ ಮಾದಕ ದ್ರವ್ಯ ಸೇವಿಸಿದ್ದ ತಕಿಯಾ ಸ್ಟ್ರೀಟ್ ನಿವಾಸಿ ಮೊಹಮ್ಮದ್ ಅನಾಸ್ (18) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ.

ಮುಗ್ಗುಂ ಕಾಲೋನಿ ಪಳ್ಳಿ ಸಮೀಪ ಖಾಜಿಯಾ ಸ್ಟ್ರೀಟ್‌ನ ಮುಸ್ತಾ ಹೌಸ್ ನಿವಾಸಿ ಅಬ್ದುಲ್ ಆಲಿಂ (42) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಇವರಿಬ್ಬರ ವೈದ್ಯಕೀಯ ವರದಿಯಲ್ಲಿ ಮಾದಕದ್ರವ್ಯ ಸೇವನೆ ದೃಢಪಟ್ಟಿದೆ. ಇದೇ ಕಾರ್ಯಾಚರಣೆಯ ಮುಂದುವರಿದ ಭಾಗವಾಗಿ ಶಹರ ಪೊಲೀಸರು ಇನ್ನುಳಿದ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಇವರ ವೈದ್ಯಕೀಯ ಪರೀಕ್ಷೆಯಲ್ಲೂ ಡ್ರಗ್ಸ್ ಸೇವನೆ ಸಾಬೀತಾಗಿದ್ದು, ಕಾನೂನು ಕ್ರಮ ಜರುಗಿಸಲಾಗಿದೆ.

    ಪೊಲೀಸರ ಎಚ್ಚರಿಕೆ: ಯುವ ಪೀಳಿಗೆಯನ್ನು ಬಲಿ ತೆಗೆದುಕೊಳ್ಳುತ್ತಿರುವ ಮಾದಕ ದ್ರವ್ಯ ಜಾಲ ಹಾಗೂ ವ್ಯಸನಿಗಳ ವಿರುದ್ಧ ಇನ್ನು ಮುಂದೆಯೂ ಕಠಿಣ ಕಾರ್ಯಾಚರಣೆ ಮುಂದುವರಿಯಲಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಕೃತ್ಯಗಳು ಕಂಡುಬಂದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಭಟ್ಕಳ ಪೊಲೀಸರು ತಿಳಿಸಿದ್ದಾರೆ.

    About The Author

    error: Content is protected !!