ಭಟ್ಕಳ: ನಗರದ ಪ್ರತಿಷ್ಠಿತ ಭಟ್ಕಳ ಎಜ್ಯುಕೇಶನ್ ಟ್ರಸ್ಟ್‌ನ ಶ್ರೀ ಗುರುಸುಧೀಂದ್ರ ಪದವಿ ಕಾಲೇಜಿನಲ್ಲಿ ನೂತನವಾಗಿ ಆರಂಭಿಸಲಾದ ‘ಬಿ.ಎಸ್ಸಿ. ಕ್ರಿಮಿನಾಲಜಿ ಮತ್ತು ಫೋರೆನ್ಸಿಕ್ ಸೈನ್ಸ್’ ತರಗತಿಗಳನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ದೀಪನ್ ಎಂ.ಎನ್. ಅವರು ಉದ್ಘಾಟಿಸಿದರು.
ಸಾಕ್ಷ್ಯಾಧಾರ ಸಂಗ್ರಹವೇ ತನಿಖೆಯ ಮೂಲಸೌಧ: ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಎಸ್‌ಪಿ ದೀಪನ್ ಎಂ.ಎನ್., “ಹಿಂದಿನ ಅಪರಾಧಗಳ ಸ್ವರೂಪಕ್ಕೂ ಇಂದಿನ ಅಪರಾಧಗಳಿಗೂ ಭಾರಿ ವ್ಯತ್ಯಾಸವಿದೆ. ಇಂದು ಫಿಂಗರ್ ಪ್ರಿಂಟ್ ಹಾಗೂ ಅಪರಾಧಿಗಳು ಬಿಟ್ಟುಹೋದ ಕುರುಹುಗಳನ್ನು ಪತ್ತೆಹಚ್ಚುವುದು ಸವಾಲಿನ ಕೆಲಸವಾಗಿದೆ. ಸೈಬರ್ ಅಪರಾಧಗಳು ಹೆಚ್ಚುತ್ತಿದ್ದು, ಶಿಕ್ಷಿತರೇ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಪ್ರಕರಣದ ತನಿಖೆ ಮಾಡುವುದಷ್ಟೇ ಅಲ್ಲದೆ, ವೈಜ್ಞಾನಿಕ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ನ್ಯಾಯಾಲಯದಲ್ಲಿ ಅಪರಾಧಿಗೆ ಶಿಕ್ಷೆಯಾಗುವಂತೆ ಮಾಡುವುದು ಮುಖ್ಯ. ಯಾವುದೇ ಕಂಪ್ಯೂಟರ್ ಅಥವಾ ಎಐ (AI) ತಂತ್ರಜ್ಞಾನಕ್ಕೆ ಮಾನವನ ಮೆದುಳು ಸಾಟಿಯಿಲ್ಲ. ಕಂಪ್ಯೂಟರ್‌ಗಿಂತ ಮಾನವನ ಮೆದುಳು ಹಲವು ಪಟ್ಟು ಚುರುಕಾಗಿ ಕಾರ್ಯನಿರ್ವಹಿಸುತ್ತದೆ,” ಎಂದರು.

ವಿಶ್ವವಿದ್ಯಾಲಯಗಳ ಅಸಹಕಾರ – ಮಾಹೆ ಸಾಥ್: ಟ್ರಸ್ಟ್‌ನ ಉಪಾಧ್ಯಕ್ಷ ರವೀಂದ್ರ ಕೊಲ್ಲೆ ಪ್ರಾಸ್ತಾವಿಕವಾಗಿ ಮಾತನಾಡಿ, “ಕ್ರಿಮಿನಾಲಜಿ ಕೋರ್ಸ್ ಆರಂಭಿಸಿರುವ ರಾಜ್ಯದ 30ನೇ ಕಾಲೇಜು ನಮ್ಮದಾಗಿದೆ. ಹೊಸ ಕೋರ್ಸ್‌ಗಳನ್ನು ಆರಂಭಿಸಲು ನಮಗೆ ವಿಶ್ವವಿದ್ಯಾಲಯಗಳಿಂದ ಸೂಕ್ತ ಸಹಕಾರ ಸಿಗುತ್ತಿಲ್ಲ. ಆದರೆ ಮಣಿಪಾಲದ ಮಾಹೆ ಸಂಸ್ಥೆಯು ನಮ್ಮೊಂದಿಗೆ ಕೈಜೋಡಿಸಿದ್ದು, ಇದರಿಂದ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ಅವಕಾಶಗಳು ದೊರೆಯಲಿವೆ,” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಟ್ಕಳ ಎಜ್ಯುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಸುರೇಂದ್ರ ಶ್ಯಾನಭಾಗ ವಹಿಸಿದ್ದರು.

ವೇದಿಕೆಯಲ್ಲಿ ಮಾಹೆ ಯುನಿವರ್ಸಿಟಿಯ ಪ್ರೊಫೆಸರ್ ಡಾ. ಶ್ರೀಕಾಂತ ಪ್ರಭು, ಎಂ.ಐ.ಟಿ. ಮಣಿಪಾಲದ ಸೈಬರ್ ಸೆಕ್ಯುರಿಟಿ ರಿಸೋರ್ಸ್ ಪರ್ಸನ್ ಡಾ. ನಾಗರಾಜ ಕಾಮತ್, ಭಟ್ಕಳ ಡಿವೈಎಸ್ಪಿ ಗಿರೀಶ್ ಬಿ., ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ರಾಜೇಶ ನಾಯಕ್, ಟ್ರಸ್ಟಿ ಮ್ಯಾನೇಜರ್ ನಾಗೇಶ ಭಟ್, ಟ್ರಸ್ಟಿಗಳಾದ ರಮೇಶ ಖಾರ್ವಿ, ಶ್ರೀಧರ ಶ್ಯಾನಭಾಗ, ಗುರುದತ್ತ ಶೇಟ್ ಹಾಗೂ ಕಾಲೇಜಿನ ಪ್ರಾಂಶುಪಾಲ ಶ್ರೀನಾಥ ಪೈ ಉಪಸ್ಥಿತರಿದ್ದರು.
ಎಸ್‌ಜಿಎಸ್ ಸಪ್ತಸ್ವರ ತಂಡದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ರಾಜೇಶ ನಾಯಕ್ ಸ್ವಾಗತಿಸಿದರು. ಸಿರಿಯಾ ಪಿಂಟೋ ಹಾಗೂ ದೇವೇಂದ್ರ ಕಿಣಿ ಕಾರ್ಯಕ್ರಮ ನಿರೂಪಿಸಿದರು. ಪ್ರಾಂಶುಪಾಲ ಶ್ರೀನಾಥ ಪೈ ಧನ್ಯವಾದ ಸಮರ್ಪಿಸಿದರು.
About The Author


More Stories
ರೈತರ ಕೃಷಿ ರಸ್ತೆಗೆ ಅಡ್ಡಿ ಆರೋಪ: ತಹಶೀಲ್ದಾರ್ ಕಚೇರಿಗೆ ಮನವಿ
ಅಧಿಕಾರ ಸ್ವೀಕರಿಸಿದ 24 ಗಂಟೆಯಲ್ಲೇ ಅಕ್ರಮ ಮರಳು ಸಾಗಾಟಕ್ಕೆ ಬಿಸಿ ಮುಟ್ಟಿಸಿದ ಎಎಸ್ಪಿ ರಾನು ಗುಪ್ತ: 6 ಟಿಪ್ಪರ್ಗಳು, 6 ಮಂದಿ ವಶಕ್ಕೆ
ವಿಧಾನಸಭೆ ಉಪಸಭಾಧ್ಯಕ್ಷ ಮಂಕಾಳ ವೈದ್ಯರಿಗೆ ಕೆಡಿಸಿಸಿ ಬ್ಯಾಂಕ್ ನೌಕರರಿಂದ ಸನ್ಮಾನ