ಭಟ್ಕಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್, ಜನಜಾಗೃತಿ ಪ್ರಾದೇಶಿಕ ವಿಭಾಗದ ವತಿಯಿಂದ ವಿಪತ್ತು ನಿರ್ವಹಣಾ ‘ಶೌರ್ಯ’ ತಂಡದ ಸದಸ್ಯರಿಗೆ ಎನ್.ಡಿ.ಆರ್.ಎಫ್. (NDRF) ವತಿಯಿಂದ ಒಂದು ದಿನದ ವಿಶೇಷ ತರಬೇತಿ ಕಾರ್ಯಕ್ರಮ ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಗ್ರಾಮೀಣ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಮಲ್ಲಿಕಾರ್ಜುನ ಕೊರಾಣಿ, “ಪೊಲೀಸ್ ಇಲಾಖೆಯಲ್ಲಿ ಪ್ರತ್ಯೇಕ ವಿಪತ್ತು ನಿರ್ವಹಣಾ ತರಬೇತಿ ಇರುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಅಗ್ನಿಶಾಮಕ ದಳ ಅಥವಾ NDRF ತಂಡಕ್ಕೆ ತುರ್ತು ಕರೆ ಮಾಡುತ್ತೇವೆ. ಆದರೆ ಶೌರ್ಯ ತಂಡವು ಪ್ರಕೃತಿ ವಿಕೋಪ ಹಾಗೂ ತುರ್ತು ಸಂದರ್ಭಗಳಲ್ಲಿ ತಕ್ಷಣ ಸ್ಥಳಕ್ಕೆ ಧಾವಿಸಿ ಸ್ಪಂದಿಸುತ್ತಿರುವುದು ಶ್ಲಾಘನೀಯ. ಭಟ್ಕಳ ಮಾರಿ ಜಾತ್ರೆಯ ಮೂರ್ತಿ ವಿಸರ್ಜನೆ ವೇಳೆಯೂ ಈ ತಂಡದ ಸೇವೆ ಅಪಾರ. ಇಂತಹ ತರಬೇತಿಗಳು ಇತರರ ರಕ್ಷಣೆಯ ಜೊತೆಗೆ ಸ್ವಯಂ ರಕ್ಷಣೆಗೂ ಸಹಕಾರಿ” ಎಂದರು.
ದೇವರ ಸಹಾಯ ಸದಾ ಇರುತ್ತದೆ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉತ್ತರ ಕನ್ನಡ ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯ ಹಾಗೂ ಪತ್ರಕರ್ತ ರಾಧಾಕೃಷ್ಣ ಭಟ್ ಮಾತನಾಡಿ, “ಅಪಾಯದಲ್ಲಿರುವವರ ರಕ್ಷಣೆಗೆ ಹೋದವರೇ ಆಪತ್ತಿಗೆ ಸಿಲುಕುವ ಸಾಧ್ಯತೆ ಇರುವುದರಿಂದ ಇಂತಹ ವೈಜ್ಞಾನಿಕ ತರಬೇತಿ ಅಗತ್ಯ. ತಮ್ಮ ಜೀವದ ಹಂಗು ತೊರೆದು ಆಸ್ತಿ-ಪಾಸ್ತಿ ಹಾಗೂ ಜೀವ ರಕ್ಷಣೆಗೆ ನಿಲ್ಲುವ ಶೌರ್ಯ ಪಡೆಯ ಕಾರ್ಯದ ಹಿಂದೆ ದೇವರ ಆಶೀರ್ವಾದ ಸದಾ ಇರುತ್ತದೆ” ಎಂದರು.
24 ಗಂಟೆಯೂ ಸೇವೆಗೆ ಸಿದ್ಧ: ತಾಲೂಕಾ ಯೋಜನಾಧಿಕಾರಿ ಲತಾ ಬಂಗೇರ ಮಾತನಾಡಿ, “ದಿನದ 24 ಗಂಟೆಯೂ ಸೇವೆಗೆ ಲಭ್ಯವಿರುವ ಕೆಲವೇ ಕೆಲವು ಪಡೆಯ ಸಾಲಿನಲ್ಲಿ ಶೌರ್ಯ ತಂಡವಿದೆ. ಕರೆ ಬಂದ ತಕ್ಷಣ ಸಂಕಷ್ಟದಲ್ಲಿರುವವರ ನೆರವಿಗೆ ಧಾವಿಸುವ ಸದಸ್ಯರು ಸ್ವತಃ ಅಪಾಯಕ್ಕೆ ಸಿಲುಕಬಾರದು ಎಂಬ ಉದ್ದೇಶದಿಂದ ಈ ತರಬೇತಿ ನೀಡಲಾಗುತ್ತಿದೆ” ಎಂದರು.

10,000ಕ್ಕೂ ಹೆಚ್ಚು ಸ್ವಯಂಸೇವಕರು: ಕೇಂದ್ರ ಕಚೇರಿಯ ವಿಪತ್ತು ನಿರ್ವಹಣಾ ಯೋಜನಾಧಿಕಾರಿ ಜಯಂತ ಪಟಗಾರ ಪ್ರಾಸ್ತಾವಿಕವಾಗಿ ಮಾತನಾಡಿ, 2019ರ ಭೀಕರ ಪ್ರಕೃತಿ ವಿಕೋಪದ ಸನ್ನಿವೇಶವೇ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ‘ಶೌರ್ಯ’ ಪಡೆ ರಚಿಸಲು ಪ್ರೇರಣೆಯಾಯಿತು ಎಂದರು. ಪ್ರಸ್ತುತ 91 ತಾಲೂಕುಗಳಲ್ಲಿ 10,470 ಶೌರ್ಯ ಸ್ವಯಂಸೇವಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಎನ್.ಡಿ.ಆರ್.ಎಫ್. ಟೀಮ್ ಕಮಾಂಡರ್ ಹಾಗೂ ಮುಖ್ಯ ತರಬೇತುದಾರ ವಿಜಯ್ ಮತ್ತು ದೇವರಾಜ್ ಸೇರಿದಂತೆ ಐವರು ಪರಿಣಿತ ಸಿಬ್ಬಂದಿ ಶೌರ್ಯ ಕಾರ್ಯಕರ್ತರಿಗೆ ಪ್ರಾತ್ಯಕ್ಷಿಕೆ ಹಾಗೂ ತರಬೇತಿ ನೀಡಿದರು.
ಕಾರ್ಯಕ್ರಮದಲ್ಲಿ ಯೋಜನೆಯ ಮೇಲ್ವಿಚಾರಕ ರಮೇಶ್ ನಾಯ್ಕ ಸ್ವಾಗತಿಸಿದರು. ಸರ್ಪನಕಟ್ಟೆ ವಿಭಾಗದ ಮೇಲ್ವಿಚಾರಕ ಹರೀಶ್ ಕಾರ್ಯಕ್ರಮ ನಿರೂಪಿಸಿದರು. ಕೃಷಿ ಅಧಿಕಾರಿ ಮಹೇಶ ಹೆಗಡೆ ವಂದಿಸಿದರು.
About The Author


More Stories
ರೈತರ ಕೃಷಿ ರಸ್ತೆಗೆ ಅಡ್ಡಿ ಆರೋಪ: ತಹಶೀಲ್ದಾರ್ ಕಚೇರಿಗೆ ಮನವಿ
ಅಧಿಕಾರ ಸ್ವೀಕರಿಸಿದ 24 ಗಂಟೆಯಲ್ಲೇ ಅಕ್ರಮ ಮರಳು ಸಾಗಾಟಕ್ಕೆ ಬಿಸಿ ಮುಟ್ಟಿಸಿದ ಎಎಸ್ಪಿ ರಾನು ಗುಪ್ತ: 6 ಟಿಪ್ಪರ್ಗಳು, 6 ಮಂದಿ ವಶಕ್ಕೆ
ವಿಧಾನಸಭೆ ಉಪಸಭಾಧ್ಯಕ್ಷ ಮಂಕಾಳ ವೈದ್ಯರಿಗೆ ಕೆಡಿಸಿಸಿ ಬ್ಯಾಂಕ್ ನೌಕರರಿಂದ ಸನ್ಮಾನ