October 22, 2026

ದೇವಸ್ಥಾನದ ಬೀಗ ಮುರಿದು ಕಳವು: 24 ಗಂಟೆಯೊಳಗೆ ಆರೋಪಿಯ ಬಂಧಿಸಿದ ಭಟ್ಕಳ ಗ್ರಾಮೀಣ ಪೊಲೀಸರು

ಭಟ್ಕಳ: ತಾಲೂಕಿನ ಬೆಳಕೆ ಗರಡಿಹಿತ್ಲು ಗ್ರಾಮದ ಶ್ರೀ ಭಂಟಗೊಂಡ ದೇವಸ್ಥಾನದಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ದೂರು ದಾಖಲಾದ 24 ಗಂಟೆಯೊಳಗೆ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೆಬಳೆಯ ತಲಹಾ ಕಾಲೋನಿ ನಿವಾಸಿ ಸೈಯದ್ ಯೂನುಸ್ (26) ಬಂಧಿತ ಆರೋಪಿಯಾಗಿದ್ದು, ಆತನಿಂದ ಕಳುವಾದ ಆಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ಸೇರಿ ₹1,07,300 ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸೆಪ್ಟೆಂಬರ್ 28ರ ರಾತ್ರಿ ದೇವಸ್ಥಾನದ ಬಾಗಿಲಿನ ಬೀಗ ಹಾಗೂ ಕಟ್ಟಿಗೆಯ ಬಾಗಿಲು ಮುರಿದು ಒಳನುಗ್ಗಿದ್ದ ಕಳ್ಳರು, ದೇವರ ವಿಗ್ರಹದಲ್ಲಿದ್ದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ದೋಚಿ ಪರಾರಿಯಾಗಿದ್ದರು.

ಈ ಕುರಿತು ಗ್ರಾಮದ ನಿವಾಸಿ ಮಂಜಪ್ಪ ಬಡಿಯಾ ನಾಯ್ಕ (67) ನೀಡಿದ ದೂರಿನಂತೆ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕಾರ್ಯಾಚರಣೆ ಹಾಗೂ ವಸ್ತುಗಳ ವಶ:

ತನಿಖೆ ಚುರುಕುಗೊಳಿಸಿದ ಪೊಲೀಸರು ಸೆಪ್ಟೆಂಬರ್ 30ರಂದು ಆರೋಪಿಯನ್ನು ಬಂಧಿಸಿ, ಆತನಿಂದ 5.340 ಗ್ರಾಂ ತೂಕದ ಬಂಗಾರದ ಸರ, 20 ಗ್ರಾಂ ತೂಕದ ಬೆಳ್ಳಿಯ ಕರಿಮಣಿ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ ಬಜಾಜ್ ಪಲ್ಸರ್ ಮೋಟಾರ್‌ಸೈಕಲ್ ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಪೊಲೀಸ್ ತಂಡಕ್ಕೆ ಶ್ಲಾಘನೆ:

ಎಸ್‌ಪಿ ದೀಪನ್ ಎಂ.ಎನ್., ಹೆಚ್ಚುವರಿ ಎಸ್‌ಪಿ ಕೃಷ್ಣಮೂರ್ತಿ ಹಾಗೂ ಎಎಸ್‌ಪಿ ರಾಣು ಗುಪ್ತಾ ಅವರ ಮಾರ್ಗದರ್ಶನದಲ್ಲಿ ಭಟ್ಕಳ ಗ್ರಾಮೀಣ ಠಾಣೆಯ ಪ್ರಭಾರ ಇನ್ಸ್‌ಪೆಕ್ಟರ್ ದಿವಾಕರ ಪಿ.ಎಂ., ತನಿಖಾಧಿಕಾರಿ ಪಿಎಸ್‌ಐ ಭರಮಪ್ಪ ಬೆಳಗಲಿ, ಪಿಎಸ್‌ಐ ಮಲ್ಲಿಕಾರ್ಜುನಯ್ಯ ಕೂರಾಣಿ ಹಾಗೂ ಸಿಬ್ಬಂದಿಗಳು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

ಪ್ರಕರಣವನ್ನು ಕ್ಷಿಪ್ರವಾಗಿ ಭೇದಿಸಿದ ಪೊಲೀಸ್ ತಂಡಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

About The Author

error: Content is protected !!