ಭಟ್ಕಳ: ಅರಣ್ಯ, ಬೆಟ್ಟ, ಸರ್ಕಾರಿ ಭೂಮಿ ಹಾಗೂ ಗ್ರಾಮಠಾಣಾ ಪ್ರದೇಶಗಳಲ್ಲಿ ದೀರ್ಘಕಾಲದಿಂದ ವಾಸಿಸುತ್ತಿರುವ ಜನರ ಆಸ್ತಿ ತೆರಿಗೆ ರದ್ದತಿಗೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹೊರಡಿಸಿರುವ ಆದೇಶವನ್ನು ಹಿಂಪಡೆಯುವಂತೆ ಆಗ್ರಹಿಸಿ ಭಟ್ಕಳ ಬಿಜೆಪಿ ಮಂಡಳದ ವತಿಯಿಂದ ಮುಟ್ಟಳ್ಳಿ ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.
‘ನಮ್ಮ ಮನೆ, ನಮ್ಮ ಹಕ್ಕು’ ಆಂದೋಲನದ ಭಾಗವಾಗಿ ನಡೆದ ಈ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಸುನೀಲ ನಾಯ್ಕ ಸೇರಿದಂತೆ ಹಲವು ಪ್ರಮುಖ ನಾಯಕರು ಭಾಗವಹಿಸಿದ್ದರು.
ಸರ್ಕಾರದ ಈ ಹೊಸ ಆದೇಶದಿಂದಾಗಿ ಹಲವು ತಲೆಮಾರುಗಳಿಂದ ಸರ್ಕಾರಿ ಹಾಗೂ ಅರಣ್ಯ ಜಾಗಗಳಲ್ಲಿ ವಾಸಿಸುತ್ತಿರುವ ಸಾವಿರಾರು ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕುವ ಆತಂಕ ಎದುರಾಗಿದೆ.
ಭಟ್ಕಳ ವ್ಯಾಪ್ತಿಯಲ್ಲಿ ಅನೇಕ ಕುಟುಂಬಗಳು ಮೂರು ತಲೆಮಾರುಗಳಿಂದ ನಿರಂತರವಾಗಿ ವಾಸವಾಗಿದ್ದು, ಈ ಆದೇಶ ಜಾರಿಯಾದರೆ ಅವರ ವಾಸಸ್ಥಳದ ಹಕ್ಕು ಹಾಗೂ ಆಸ್ತಿ ದಾಖಲೆಗಳಿಗೆ ಸಂಬಂಧಿಸಿದಂತೆ ಕಾನೂನು ತೊಡಕುಗಳು ಉಂಟಾಗಲಿವೆ.

ಜನವಿರೋಧಿಯಾಗಿರುವ ಈ ಆದೇಶವನ್ನು ಸರ್ಕಾರ ತಕ್ಷಣವೇ ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ಮುಂಬರುವ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯ ನಂತರ ಬಿಜೆಪಿ ಮಂಡಳ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ ಅವರು ಮನವಿ ಪತ್ರವನ್ನು ಓದಿ ತಿಳಿಸಿದರು. ಬಳಿಕ ಪಂಚಾಯತ್ ಕಾರ್ಯದರ್ಶಿ ಮಂಜುನಾಥ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ವಿಭಾಗದ ಉಪಾಧ್ಯಕ್ಷ ಈಶ್ವರ ನಾಯ್ಕ, ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶಿವಾನಿ ಶಾಂತಾರಾಮ, ಪಂಚಾಯತ್ ಮಾಜಿ ಸದಸ್ಯ ದೇವಯ್ಯ ನಾಯ್ಕ, ಕಾರ್ಯದರ್ಶಿ ಶ್ರೀನಿವಾಸ ನಾಯ್ಕ, ಪಂಚಾಯತ್ ಮಾಜಿ ಅಧ್ಯಕ್ಷ ಶೇಷಗಿರಿ ನಾಯ್ಕ, ಚಂದ್ರಹಾಸ ನಾಯ್ಕ, ಜಯಶ್ರೀ ನಾಯ್ಕ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
About The Author


More Stories
ಮುಂಡಳ್ಳಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮನಸೂರೆಗೊಂಡ ಭಕ್ತಿಸಂಗೀತ
ಭಟ್ಕಳ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಾರ್ಷಿಕೋತ್ಸವ ಹಾಗೂ ದೀಪದಾನ ಕಾರ್ಯಕ್ರಮ
ಭಟ್ಕಳದ ದೈಹಿಕ ಶಿಕ್ಷಣ ಶಿಕ್ಷಕ ಧರ್ಮ ನಾಯ್ಕ ಅವರಿಗೆ ‘ಕಾಯಕ ರತ್ನ’ ರಾಜ್ಯ ಪ್ರಶಸ್ತಿ ಗೌರವ