ಭಟ್ಕಳ: ಅಪ್ರಾಪ್ತ ಮಕ್ಕಳ ಕೈಗೆ ವಾಹನ ನೀಡಿ ರಸ್ತೆಗೆ ಕಳುಹಿಸುವ ಪೋಷಕರು ಹಾಗೂ ವಾಹನ ಮಾಲೀಕರಿಗೆ ಉತ್ತರ ಕನ್ನಡ ಜಿಲ್ಲಾ ಪೊಲೀಸರು ಸೂಕ್ತ ತಕ್ಕ ಪಾಠ ಕಲಿಸುತ್ತಿದ್ದಾರೆ. ಅಪ್ರಾಪ್ತರು ವಾಹನ ಚಲಾಯಿಸಿದ ಪ್ರಕರಣಗಳಲ್ಲಿ ವಾಹನ ನೀಡಿದವರ ವಿರುದ್ಧವೇ ಕಾನೂನು ಕ್ರಮ ಜರುಗಿಸಲಾಗುತ್ತಿದ್ದು, 2026ರ ಜನವರಿಯಿಂದ ಸೆಪ್ಟೆಂಬರ್‌ವರೆಗೆ ಜಿಲ್ಲೆಯಾದ್ಯಂತ ಒಟ್ಟು 131 ಪ್ರಕರಣಗಳು ದಾಖಲಾಗಿವೆ.
ಮೋಟಾರು ವಾಹನ ಕಾಯಿದೆ, 1988ರ ಕಲಂ 199(ಎ) ಅಡಿಯಲ್ಲಿ ದಾಖಲಾದ ಈ ಪ್ರಕರಣಗಳ ವಿಚಾರಣೆ ನಡೆಸಿದ ನ್ಯಾಯಾಲಯಗಳು, ಸಂಬಂಧಪಟ್ಟ ಅಪ್ರಾಪ್ತರ ಪೋಷಕರು ಹಾಗೂ ವಾಹನ ಮಾಲೀಕರಿಗೆ ಒಟ್ಟು ₹13.09 ಲಕ್ಷ ದಂಡ ವಿಧಿಸಿವೆ.
ಭಟ್ಕಳದಲ್ಲೇ ಹೆಚ್ಚು ಪ್ರಕರಣ:
ಜಿಲ್ಲೆಯಲ್ಲಿ ದಾಖಲಾದ ಪ್ರಕರಣಗಳಲ್ಲಿ ಭಟ್ಕಳ ಶಹರ ಮತ್ತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲೇ ಬರೋಬ್ಬರಿ 45 ಪ್ರಕರಣಗಳು ದಾಖಲಾಗಿವೆ.

ಈ 45 ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯವು ಒಟ್ಟು ₹5,38,500 ದಂಡ ವಿಧಿಸಿದೆ.
ಪೊಲೀಸ್ ಇಲಾಖೆಯ ಎಚ್ಚರಿಕೆ: ಅಪ್ರಾಪ್ತ ವಯಸ್ಸಿನ ಮಕ್ಕಳು ವಾಹನ ಚಲಾಯಿಸುವುದರಿಂದ ಅಪಘಾತಗಳ ಅಪಾಯ ಹೆಚ್ಚಾಗುತ್ತದೆ. ಇದರಿಂದ ಮಕ್ಕಳ ಜೀವದ ಜೊತೆಗೆ ರಸ್ತೆಯಲ್ಲಿ ಸಂಚರಿಸುವ ಇತರ ಸಾರ್ವಜನಿಕರ ಸುರಕ್ಷತೆಯೂ ಅಪಾಯಕ್ಕೆ ಸಿಲುಕುತ್ತದೆ. ಹೀಗಾಗಿ “ಮಕ್ಕಳು ವಾಹನ ಕಲಿಯಲಿ” ಎಂದೋ ಅಥವಾ ಸಣ್ಣಪುಟ್ಟ ಕೆಲಸಗಳಿಗಾಗಿಯೋ ಅಪ್ರಾಪ್ತರಿಗೆ ವಾಹನ ನೀಡಬಾರದು ಎಂದು ಪೋಷಕರಿಗೆ ಪೊಲೀಸರು ಸೂಚಿಸಿದ್ದಾರೆ.
ಅಪ್ರಾಪ್ತರ ವಾಹನ ಚಾಲನೆ ವಿರುದ್ಧದ ತಪಾಸಣೆ ಮತ್ತು ಕಾರ್ಯಾಚರಣೆ ಮುಂದೆಯೂ ಮುಂದುವರಿಯಲಿದ್ದು, ಪೋಷಕರು ಹಾಗೂ ವಾಹನ ಮಾಲೀಕರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. “ಮಕ್ಕಳ ಕೈಗೆ ವಾಹನದ ಕೀಲಿ ನೀಡುವ ಬದಲು, ಸುರಕ್ಷಿತ ಭವಿಷ್ಯದ ಕೀಲಿ ನೀಡಿ” ಎಂದು ಜಿಲ್ಲಾ ಪೊಲೀಸ್ ಇಲಾಖೆ ಮನವಿ ಮಾಡಿದೆ.
About The Author


More Stories
ಮುಂಡಳ್ಳಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮನಸೂರೆಗೊಂಡ ಭಕ್ತಿಸಂಗೀತ
ಭಟ್ಕಳ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಾರ್ಷಿಕೋತ್ಸವ ಹಾಗೂ ದೀಪದಾನ ಕಾರ್ಯಕ್ರಮ
ಭಟ್ಕಳದ ದೈಹಿಕ ಶಿಕ್ಷಣ ಶಿಕ್ಷಕ ಧರ್ಮ ನಾಯ್ಕ ಅವರಿಗೆ ‘ಕಾಯಕ ರತ್ನ’ ರಾಜ್ಯ ಪ್ರಶಸ್ತಿ ಗೌರವ