October 23, 2026

ವೆಂಕಟಾಪುರದಲ್ಲಿ ಹಾಡಿ ಜಾಗ ಉಳಿಸಲು ಆಗ್ರಹ: ಹೊಸ ರಸ್ತೆ ನಿರ್ಮಾಣಕ್ಕೆ ಆಕ್ಷೇಪಿಸಿ ಎಸಿಗೆ ಮನವಿ

ಭಟ್ಕಳ: ತಾಲೂಕಿನ ವೆಂಕಟಾಪುರ ಗ್ರಾಮೀಣ ಭಾಗದ ಸರ್ವೇ ನಂ. 270ರಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸಿ, ಹಾಡಿ ಜಾಗ ಹಾಗೂ ನೈಸರ್ಗಿಕ ಪರಿಸರವನ್ನು ಸಂರಕ್ಷಿಸುವಂತೆ ಆಗ್ರಹಿಸಿ ಶ್ರೀ ಮಾಸ್ತಪ್ಪ ನಾಯ್ಕ್ ಬಲಸೆ ಅವರ ಅಭಿಮಾನಿಗಳು ಸಹಾಯಕ ಕಮೀಷನರ್ (AC) ಜಿ. ಮಹೇಶ್ ಅವರಿಗೆ ಮನವಿ ಸಲ್ಲಿಸಿದರು.

ವೆಂಕಟಾಪುರ ಭಾಗದಲ್ಲಿ ಈಗಾಗಲೇ ಸಂಚಾರಕ್ಕೆ ಉತ್ತಮ ರಸ್ತೆ ಸಂಪರ್ಕವಿದ್ದು, ಮತ್ತೆ ಕಾಡು ಹಾಗೂ ಹಾಡಿ ಪ್ರದೇಶವನ್ನು ತೆರವುಗೊಳಿಸಿ ಹೊಸ ರಸ್ತೆ ನಿರ್ಮಿಸುವ ಅಗತ್ಯವೇನಿದೆ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ.

ಮನವಿಯ ಪ್ರಮುಖ ಆಗ್ರಹಗಳು:

ಮೂಲಸೌಕರ್ಯಕ್ಕೆ ಆದ್ಯತೆ ನೀಡಿ: ಹಾಡಿ ಜಾಗವನ್ನು ಅವಲಂಬಿಸಿರುವ ಬಡ ಕುಟುಂಬಗಳಿಗೆ ಅಭಿವೃದ್ಧಿಯ ಹೆಸರಿನಲ್ಲಿ ತೊಂದರೆ ನೀಡದೆ ಕುಡಿಯುವ ನೀರು, ವಿದ್ಯುತ್, ಚರಂಡಿ ಹಾಗೂ ಆರೋಗ್ಯದಂತಹ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಬೇಕು.

ದಾಖಲೆಗಳ ಪರಿಶೀಲನೆ: ಸರ್ವೇ ನಂ. 270ರ ಜಾಗದ ಸ್ವರೂಪ, ರಸ್ತೆ ನಿರ್ಮಾಣಕ್ಕೆ ಪಡೆದಿರುವ ಅನುಮತಿ ಹಾಗೂ ಸಂಬಂಧಪಟ್ಟ ಇಲಾಖೆಗಳ ಪರವಾನಗಿಗಳನ್ನು ಪರಿಶೀಲಿಸಬೇಕು. ನಿಯಮಬಾಹಿರ ಕಾಮಗಾರಿ ಕಂಡುಬಂದಲ್ಲಿ ತಕ್ಷಣವೇ ಕಾನೂನು ಕ್ರಮ ಕೈಗೊಳ್ಳಬೇಕು.

ಸಂದೇಹ ಪರಿಹಾರ: ಪ್ರಭಾವಿಗಳ ಒತ್ತಡಕ್ಕೆ ಮಣಿದು ಅರಣ್ಯ ಅಥವಾ ಹಾಡಿ ಜಾಗದಲ್ಲಿ ಕಾಮಗಾರಿಗೆ ಅವಕಾಶ ನೀಡಲಾಗುತ್ತಿದೆ ಎಂಬ ಸಾರ್ವಜನಿಕರ ಅನುಮಾನವನ್ನು ಅಧಿಕಾರಿಗಳು ನಿವಾರಿಸಬೇಕು.

    ಅಭಿವೃದ್ಧಿಯ ಹೆಸರಿನಲ್ಲಿ ನೈಸರ್ಗಿಕ ಸಂಪತ್ತು ಮತ್ತು ಕಾಡನ್ನು ನಾಶಪಡಿಸುವ ಬದಲು ಈಗಿರುವ ರಸ್ತೆಯನ್ನೇ ಸುಧಾರಿಸಿ ಪರಿಸರ ಹಾಗೂ ಬಡ ಕುಟುಂಬಗಳ ಜೀವನೋಪಾಯವನ್ನು ರಕ್ಷಿಸಬೇಕೆಂದು ಒತ್ತಾಯಿಸಲಾಯಿತು.

    ಈ ಸಂದರ್ಭದಲ್ಲಿ ಅಶೋಕ ನಾಯ್ಕ, ಕೃಷ್ಣ ನಾಯ್ಕ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

    About The Author

    error: Content is protected !!