October 23, 2026

ಕತಾರ್‌ನಲ್ಲಿ 71ನೇ ಕರ್ನಾಟಕ ರಾಜ್ಯೋತ್ಸವ ‘ಕರುನಾಡ ವೈಭವ 2026’ ಪೋಸ್ಟರ್ ಅನಾವರಣ: ನಟಿ ಉಮಾಶ್ರೀ ಅವರಿಗೆ ‘ಕತಾರ್ ಕನ್ನಡ ಸಮ್ಮಾನ’

ದೋಹಾ (ಕತಾರ್): ಭಾರತೀಯ ಸಾಂಸ್ಕೃತಿಕ ಕೇಂದ್ರಕ್ಕೆ (ICC) ಸಂಯೋಜಿತವಾಗಿರುವ ಪ್ರಮುಖ ಸಾಂಸ್ಕೃತಿಕ ಸಂಘಟನೆ ‘ಕರ್ನಾಟಕ ಸಂಘ ಕತಾರ್’ (KSQ) ವತಿಯಿಂದ ಆಯೋಜಿಸಲಾಗುತ್ತಿರುವ 71ನೇ ಕರ್ನಾಟಕ ರಾಜ್ಯೋತ್ಸವದ ‘ಕರುನಾಡ ವೈಭವ 2026’ ಕಾರ್ಯಕ್ರಮದ ಅಧಿಕೃತ ಪೋಸ್ಟರ್ ಅನ್ನು ಗಣ್ಯರ ಸಮ್ಮುಖದಲ್ಲಿ ಅನಾವರಣಗೊಳಿಸಲಾಯಿತು.

ಬರುವ ನವೆಂಬರ್ 6ರ ಶುಕ್ರವಾರ ಸಂಜೆ 4 ಗಂಟೆಯಿಂದ ಅಲ್ ವಕ್ರಾದ ‘ಡಿಪಿಎಸ್ ಎಂಐಎಸ್’ ಸಭಾಂಗಣದಲ್ಲಿ ಈ ಅದ್ದೂರಿ ಕಾರ್ಯಕ್ರಮ ನೆರವೇರಲಿದೆ.

ಉಮಾಶ್ರೀ ಅವರಿಗೆ ಗೌರವ: ‘ಕರುನಾಡ ವೈಭವ 2026’ರ ಪ್ರಮುಖ ಆಕರ್ಷಣೆಯಾಗಿ, ಹಿರಿಯ ನಟಿ ಹಾಗೂ ಕರ್ನಾಟಕ ವಿಧಾನ ಪರಿಷತ್ತಿನ ಹಾಲಿ ಉಪಸಭಾಪತಿ, ಮಾಜಿ ಸಚಿವೆ ಶ್ರೀಮತಿ ಉಮಾಶ್ರೀ ಅವರಿಗೆ ಪ್ರಸಕ್ತ ಸಾಲಿನ ಪ್ರತಿಷ್ಠಿತ ‘ಕತಾರ್ ಕನ್ನಡ ಸಮ್ಮಾನ’ ನೀಡಲು ನಿರ್ಧರಿಸಲಾಗಿದೆ.

ಅಧಿಕೃತ ಪೋಸ್ಟರ್ ಬಿಡುಗಡೆ: ಕರ್ನಾಟಕ ಸಂಘ ಕತಾರ್‌ನ ಅಧ್ಯಕ್ಷ ಸುಬ್ರಮಣ್ಯ ಹೆಬ್ಬಾಗಿಲು, ಉಪಾಧ್ಯಕ್ಷ ಅನಿಲ್ ಭಾಸಗಿ, ಸಲಹಾ ಸಮಿತಿ ಅಧ್ಯಕ್ಷ ಡಾ. ರವಿ ಶೆಟ್ಟಿ ಹಾಗೂ ವಿವಿಧ ಸಹೋದರ ಸಂಘಟನೆಗಳ ಅಧ್ಯಕ್ಷರು ಮತ್ತು ಪ್ರತಿನಿಧಿಗಳು ಉಪಸ್ಥಿತರಿದ್ದು ಪೋಸ್ಟರ್ ಬಿಡುಗಡೆ ಮಾಡಿದರು.

ಹಾಸ್ಯ ಮತ್ತು ಸಂಗೀತ ವೈಭವ: ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಘವೇಂದ್ರ (ರಾಗಿಣಿ), ಜಗ್ಗಪ್ಪ ಹಾಗೂ ಸುಷ್ಮಿತಾ ಹಾಸ್ಯದ ರಸದೌತಣ ಉಣಬಡಿಸಲಿದ್ದಾರೆ. ಸಾ ರೇ ಗ ಮ ಪ ಖ್ಯಾತಿಯ ಮೆಹಬೂಬ್ ಸಾಬ್ ಮತ್ತು ರೇವಣಸಿದ್ಧ ಫುಲಾರಿ ಸಂಗೀತ ಸಂಜೆ ನಡೆಸಿಕೊಡಲಿದ್ದು, ಪ್ರಣಿತಾ ಕಾರ್ಯಕ್ರಮ ನಿರೂಪಿಸಲಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮಗಳು: ಕತಾರ್‌ನ ವಿವಿಧ ಕನ್ನಡ ಸಂಘಟನೆಗಳ ಸದಸ್ಯರಿಂದ ಕರ್ನಾಟಕದ ಶ್ರೀಮಂತ ಕಲೆ, ಭಾಷೆ ಹಾಗೂ ಪರಂಪರೆಯನ್ನು ಬಿಂಬಿಸುವ ನೃತ್ಯ ಮತ್ತು ಸಂಗೀತ ರೂಪಕಗಳು ಪ್ರದರ್ಶನಗೊಳ್ಳಲಿವೆ.

    ಕರ್ನಾಟಕ ಸಂಘ ಕತಾರ್‌ನ ಪ್ರಧಾನ ಕಾರ್ಯದರ್ಶಿ ಸುಜಿತ್ ಕುಮಾರ್ ಹೊಸದುರ್ಗ ಸ್ವಾಗತಿಸಿದರೆ, ಉಪಾಧ್ಯಕ್ಷ ಅನಿಲ್ ಭಾಸಗಿ ವಂದಿಸಿದರು. ಕತಾರ್‌ನಲ್ಲಿರುವ ಎಲ್ಲಾ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಾಜ್ಯೋತ್ಸವ ಸಂಭ್ರಮವನ್ನು ಯಶಸ್ವಿಗೊಳಿಸಬೇಕೆಂದು ಅಧ್ಯಕ್ಷ ಸುಬ್ರಮಣ್ಯ ಹೆಬ್ಬಾಗಿಲು ಮನವಿ ಮಾಡಿದ್ದಾರೆ.

    About The Author

    error: Content is protected !!