October 22, 2026

ಬೈಂದೂರು ಸಮೀಪ ಭೀಕರ ಬೈಕ್ ಅಪಘಾತ: ಭಟ್ಕಳದ ಮೀನುಗಾರ ಸಾವು, ಪತ್ನಿಗೆ ಗಾಯ

ಭಟ್ಕಳ: ರಾಷ್ಟ್ರೀಯ ಹೆದ್ದಾರಿ 66ರ ಬೈಂದೂರು ಸಮೀಪದ ವತ್ತಿನೆಣೆ ಬಳಿ ಶನಿವಾರ ಮಧ್ಯಾಹ್ನ ಸಂಭವಿಸಿದ ಭೀಕರ ಬೈಕ್ ಅಪಘಾತದಲ್ಲಿ ಭಟ್ಕಳದ ಮೀನುಗಾರರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಅವರ ಪತ್ನಿ ಗಾಯಗೊಂಡಿದ್ದಾರೆ.

ಮೃತರನ್ನು ಭಟ್ಕಳ ತಾಲೂಕಿನ ಬೆಳ್ಳಿ ನಿವಾಸಿ ಉಮೇಶ ಮಂಜುನಾಥ ಮೊಗೇರ್ (43) ಎಂದು ಗುರುತಿಸಲಾಗಿದೆ. ಇವರು ವೃತ್ತಿಯಲ್ಲಿ ಮೀನುಗಾರರಾಗಿದ್ದರು.

ಉಮೇಶ ಅವರು ರಾತ್ರಿ ಮೀನುಗಾರಿಕೆಗೆ ತೆರಳಿ ಬೆಳಗ್ಗೆ ಬೈಕ್‌ನಲ್ಲಿ ಕುಂದಾಪುರ ಆಸ್ಪತ್ರೆಗೆ ಹೋಗಿದ್ದರು. ಅಲ್ಲಿಂದ ತಮ್ಮ ಪತ್ನಿ ಪದ್ಮಾ ಮೊಗೇರ್ ಅವರೊಂದಿಗೆ ಬೈಕ್‌ನಲ್ಲಿ ಭಟ್ಕಳದ ಮನೆಗೆ ಹಿಂತಿರುಗುತ್ತಿದ್ದ ವೇಳೆ ವತ್ತಿನೆಣೆ ಸಮೀಪ ಈ ದುರ್ಘಟನೆ ಸಂಭವಿಸಿದೆ.

ಅಪಘಾತದ ತೀವ್ರತೆಗೆ ಉಮೇಶ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಬೈಕ್‌ನಲ್ಲಿದ್ದ ಅವರ ಪತ್ನಿ ಪದ್ಮಾ ಅವರಿಗೂ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಕುಂದಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮನೆಗೆ ಮರಳುವ ವೇಳೆ ಸಂಭವಿಸಿದ ಈ ಅನಿರೀಕ್ಷಿತ ದುರ್ಘಟನೆಯಿಂದ ಕುಟುಂಬದಲ್ಲಿ ತೀವ್ರ ಶೋಕ ಮಡುಗಟ್ಟಿದೆ. ಈ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

About The Author

error: Content is protected !!