ಅಳ್ವೆಕೋಡಿಯಲ್ಲಿ ದುರ್ಗಾದೇವಿ ಚಾರಿಟೇಬಲ್ ಟ್ರಸ್ಟ್‌ನಿಂದ ೩೨೫ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಭಟ್ಕಳ: ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವುದು ಕೇವಲ ಪರೀಕ್ಷೆಯ ಅಂಕಗಳಲ್ಲ. ಜ್ಞಾನದ ಜತೆಗೆ ವಿನಯ, ಉತ್ತಮ ನಡತೆ ಮತ್ತು ಸಮಾಜದ ಬಗ್ಗೆ ಕಾಳಜಿ ಬೆಳೆಸಿಕೊಂಡಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ ಎಂದು ಶ್ರೀಪಾದ ವಿದ್ಯಾಧೀಶ ತೀರ್ಥ ಶ್ರೀಪಾದ ಒಡೆಯರ ಸ್ವಾಮೀಜಿ ಹೇಳಿದರು.

ತಾಲೂಕಿನ ಅಳ್ವೆಕೋಡಿ ಸಣಬಾವಿಯಲ್ಲಿ ದುರ್ಗಾದೇವಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆದ ೧೪ನೇ ವರ್ಷದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಆಶೀರ್ವಚನ ನೀಡಿ, ಒಟ್ಟು ೩೨೫ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಿ ಅವರು ಮಾತನಾಡಿದರು.
ಕಲಿತ ವಿದ್ಯೆ ಬದುಕಿಗೆ ದಾರಿದೀಪ: “ನಮ್ಮ ಜ್ಞಾನ ಮತ್ತು ವಿದ್ವತ್ತಿಗೆ ಜಗತ್ತಿನಾದ್ಯಂತ ಮನ್ನಣೆ ದೊರೆಯುತ್ತದೆ. ತಾವು ಪೂರ್ವಾಶ್ರಮದಲ್ಲಿ ವ್ಯಾಸಂಗ ಮಾಡಿದ್ದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಜ್ಞಾನವು ಸನ್ಯಾಸ ಸ್ವೀಕರಿಸಿದ ಬಳಿಕ ಮಠದ ಜೀರ್ಣೋದ್ಧಾರಕ್ಕೆ ನೆರವಾಯಿತು. ವಿದ್ಯಾರ್ಥಿಗಳು ಕಲಿತ ಜ್ಞಾನವನ್ನು ಎಂದಿಗೂ ವ್ಯರ್ಥವೆಂದು ಭಾವಿಸಬಾರದು; ಅದು ಜೀವನದ ಯಾವುದೋ ಹಂತದಲ್ಲಿ ಖಂಡಿತ ನೆರವಿಗೆ ಬರುತ್ತದೆ” ಎಂದರು.

ದುರ್ಗಾದೇವಿ ಟ್ರಸ್ಟ್ ಕಳೆದ ೧೪ ವರ್ಷಗಳಿಂದ ಜಾತಿ-ಧರ್ಮದ ಭೇದವಿಲ್ಲದೆ ಪ್ರತಿಭಾವಂತರನ್ನು ಪ್ರೋತ್ಸಾಹಿಸುತ್ತಿರುವುದು ಮಾದರಿಯಾಗಿದೆ ಎಂದ ಶ್ರೀಗಳು, ಮೋಡವು ನೀರನ್ನು ಸಂಗ್ರಹಿಸಿ ಮಳೆಯಾಗಿ ಭೂಮಿಗೆ ನೀಡುವಂತೆ, ಉನ್ನತ ಸ್ಥಾನಕ್ಕೇರಿದ ಪ್ರತಿಯೊಬ್ಬರೂ ತಮಗಿರುವ ಸಂಪತ್ತು ಹಾಗೂ ಜ್ಞಾನದಿಂದ ಸಮಾಜದ ಒಳಿತಿಗೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ತಿಮ್ಮಪ್ಪ ಹೊನ್ನಿಮನೆ, ಮಾಜಿ ಶಾಸಕ ಸುನೀಲ ನಾಯ್ಕ, ಮಾರಿಜಾತ್ರಾ ಸಮಿತಿ ಅಧ್ಯಕ್ಷ ರಾಮಾ ಮೊಗೇರ, ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಪಿ. ಭಟ್, ಭಾಸ್ಕರ ಮೊಗೇರ, ಅಶೋಕ ಪೈ, ದೇವಪ್ಪ ಮೊಗೇರ, ಅರವಿಂದ ಪೈ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಕೇಶವ ಮೊಗೇರ ಹಾಗೂ ರಾಜೀವಿ ಮೊಗೇರ ಕಾರ್ಯಕ್ರಮ ನಿರೂಪಿಸಿದರು.
About The Author


More Stories
ಭಗವದ್ಗೀತೆಯನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಎಲ್ಲ ಸಮಸ್ಯೆಗಳನ್ನೂ ಎದುರಿಸಬಹುದು: ರಾಜೇಶ ನಾಯಕ
ಭಟ್ಕಳದಲ್ಲಿ ನಾಲ್ಕನೇ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಶಿಲಾನ್ಯಾಸ
‘ಸಂಭವಾಮಿ ಯುಗೇ ಯುಗೇ – ಕಮಲಿ ಕಲ್ಯಾಣ’ ನಾಟಕದ ಪೋಸ್ಟರ್ ಬಿಡುಗಡೆ