October 28, 2026

ನಟಿ ಭಾರತಿ ಬಿಜಾಪುರ ಅವರಿಗೆ ಗೋವಾದಲ್ಲಿ ‘ಇಂಟರ್‌ನ್ಯಾಷನಲ್ ನೋಬೆಲ್ಲರ್ ಅವಾರ್ಡ್’ ಪ್ರದಾನ

೨೦ ವರ್ಷಗಳ ಕಲಾಸೇವೆ, ೪,೦೦೦ಕ್ಕೂ ಅಧಿಕ ನಾಟಕ ಪ್ರಯೋಗಗಳಲ್ಲಿ ನಟಿಸಿದ ಸಾಧಕಿಗೆ ಗೌರವ

ಬೆಂಗಳೂರು/ಗೋವಾ: ಕನ್ನಡ ರಂಗಭೂಮಿ, ಚಲನಚಿತ್ರ ಹಾಗೂ ಕಿರುತೆರೆ ಕ್ಷೇತ್ರದಲ್ಲಿ ಕಳೆದ ಎರಡು ದಶಕಗಳಿಂದ ಸಕ್ರಿಯರಾಗಿರುವ ಖ್ಯಾತ ನಟಿ ಭಾರತಿ ಬಿಜಾಪುರ ಅವರಿಗೆ ಗೋವಾದ ವಾಸ್ಕೋದಲ್ಲಿ ‘ಇಂಟರ್‌ನ್ಯಾಷನಲ್ ನೋಬೆಲ್ಲರ್ ಅವಾರ್ಡ್’ ಪ್ರದಾನ ಮಾಡಿ ಗೌರವಿಸಲಾಯಿತು.

ಸಾಧಕರಿಗೆ ಡಾ. ಶಿವಣ್ಣ, ‘ಸಂಪದ ಸಾಲು’ ಪತ್ರಿಕೆಯ ಸಂಪಾದಕ ಹಾಗೂ ಹಿರಿಯ ಪತ್ರಕರ್ತ ವೆಂಕಟೇಶ ಎಸ್. ಸಂಪ, ಹೋರಾಟಗಾರ ಬೃಂಗಿಮಠ ಮತ್ತಿತರ ಗಣ್ಯರು ಪ್ರಶಸ್ತಿ ನೀಡಿ ಅಭಿನಂದಿಸಿದರು.

ರಂಗಭೂಮಿಯಿಂದ ಬೆಳ್ಳಿಪರದೆವರೆಗೆ ಕಲಾಯಾನ: ಮೂಲತಃ ವಿಜಯಪುರ ಜಿಲ್ಲೆಯ ತಾಳಿಕೋಟೆಯವರಾದ ಭಾರತಿ ಬಿಜಾಪುರ ಅವರು ಬೆಳೆದದ್ದು ವಿಜಯಪುರದಲ್ಲಿ. ತದನಂತರ ರಾಜಧಾನಿ ಬೆಂಗಳೂರಿಗೆ ಆಗಮಿಸಿ ಅಭಿನಯ ಕ್ಷೇತ್ರದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು.

ಅವರ ಕಲಾಪಯಣದಲ್ಲಿ ರಂಗಭೂಮಿಗೆ ಸಿಂಹಪಾಲು ಸಲ್ಲುತ್ತದೆ. ‘ಮರಾಠಿ ಹೆಂಡ್ತಿ’, ‘ಪೈಲ್ವಾನ್ ಪಾಂಡು’, ‘ರಕ್ತಸಂಬಂಧ’, ‘ತಂಗಿಯ ಕೂಗು’, ‘ಧರ್ಮ ತುಂಬಿದ ಮನೆ’ ಸೇರಿದಂತೆ ಬರೋಬ್ಬರಿ ೪,೦೦೦ಕ್ಕೂ ಅಧಿಕ ನಾಟಕ ಪ್ರಯೋಗಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.

ಕಿರುತೆರೆ ಹಾಗೂ ಚಲನಚಿತ್ರಗಳಲ್ಲಿ ಛಾಪು: ರಂಗಭೂಮಿಯಷ್ಟೇ ಅಲ್ಲದೆ, ಬೆಳ್ಳಿಪರದೆ ಹಾಗೂ ಕಿರುತೆರೆಯಲ್ಲೂ ತಮ್ಮದೇ ಆದ ಪ್ರೇಕ್ಷಕ ವರ್ಗವನ್ನು ಹೊಂದಿದ್ದಾರೆ. ‘ಪ್ರೀತಿಯಾಕೆ ಭೂಮಿಮೇಲಿದೆ’, ‘ಗಾಂಧಿ’, ‘ಪಯಣ’, ‘ಜ್ಞಾನಜ್ಯೋತಿ ಶ್ರೀ ಸಿದ್ದಗಂಗಾ’, ‘ಮೂರನೇ ಕೃಷ್ಣಪ್ಪ’ ಸೇರಿದಂತೆ ಹಲವು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಇದರೊಂದಿಗೆ, ‘ಅನಾಹುತ ಅತ್ತಿ’, ‘ಸಾಲಗಾರ ಸಿದ್ಯಾ’ ಮುಂತಾದ ಜನಪ್ರಿಯ ಕಿರುಚಿತ್ರಗಳಲ್ಲೂ ಹಾಗೂ ‘ಬ್ರಹ್ಮಗಂಟು’, ‘ಕರಿಮಣಿ’, ‘ಭಾಗ್ಯಲಕ್ಷ್ಮಿ’, ‘ರಾಮಾಚಾರಿ’, ‘ಉಧೋ ಉಧೋ ರೇಣುಕಾ ಎಲ್ಲಮ್ಮ’ ಸೇರಿದಂತೆ ಹಲವು ಪ್ರಸಿದ್ಧ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಪ್ರಸ್ತುತವೂ ಕಿರುತೆರೆಯಲ್ಲಿ ನಟನೆಯನ್ನು ಮುಂದುವರಿಸಿದ್ದಾರೆ.

ಎರಡು ದಶಕಗಳ ಕಾಲ ನಿರಂತರವಾಗಿ ಅಭಿನಯ ಮಾಧ್ಯಮದಲ್ಲಿ ಸಲ್ಲಿಸಿದ ಅನನ್ಯ ಸೇವೆಗೆ ಗೋವಾದಲ್ಲಿ ‘ಇಂಟರ್‌ನ್ಯಾಷನಲ್ ನೋಬೆಲ್ಲರ್ ಅವಾರ್ಡ್’ ಪ್ರದಾನ ಮಾಡಿರುವುದು ಅವರ ಸುದೀರ್ಘ ಕಲಾಯಾನಕ್ಕ ಸಿಕ್ಕ ಅರ್ಹ ಮನ್ನಣೆಯಾಗಿದೆ.

About The Author

error: Content is protected !!