November 22, 2026

ಭಟ್ಕಳದಲ್ಲಿ ಆರ್‌ಎಸ್‌ಎಸ್ ಶತಾಬ್ದಿ ಸಂಭ್ರಮ: ಶಿಸ್ತುಬದ್ಧ ಪಥಸಂಚಲನ

ದೇಶಭಕ್ತಿ, ಶಿಸ್ತು ಮತ್ತು ಸಾಮಾಜಿಕ ಸಾಮರಸ್ಯವೇ ಸಂಘದ ಧ್ಯೇಯ: ಜಯರಾಮ ಬಳ್ಳಾಜೆ

ಭಟ್ಕಳ: ವಿಜಯದಶಮಿಯ ಅಂಗವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ವತಿಯಿಂದ ನಗರದಲ್ಲಿ ಶಿಸ್ತುಬದ್ಧ ಪಥಸಂಚಲನ ಹಾಗೂ ಶತಾಬ್ದಿ ಆಚರಣೆಯ ಸಭಾ ಕಾರ್ಯಕ್ರಮ ನಡೆಯಿತು.

ನಗರದ ಚೆನ್ನಪಟ್ಟಣ ಶ್ರೀ ಹನುಮಂತ ದೇವಸ್ಥಾನದಿಂದ ಆರಂಭಗೊಂಡ ಪಥಸಂಚಲನವು ಮುಖ್ಯ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿಯ ಮೂಲಕ ಸಾಗಿ, ಅಯೋಧ್ಯಾ ನಗರದ ಶ್ರೀ ಗುರು ಸುಧೀಂದ್ರ ಕಾಲೇಜು ಮೈದಾನ ತಲುಪಿತು.

ಶತಮಾನದ ಪಯಣ – ೪೦ಕ್ಕೂ ಹೆಚ್ಚು ದೇಶಗಳಲ್ಲಿ ವಿಸ್ತರಣೆ: ಬಳಿಕ ನಡೆದ ಸಭೆಯಲ್ಲಿ ಮುಖ್ಯ ವಕ್ತಾರ ಜಯರಾಮ ಬಳ್ಳಾಜೆ ಮಾತನಾಡಿ, “೧೯೨೫ರಲ್ಲಿ ನಾಗಪುರದಲ್ಲಿ ಆರಂಭಗೊಂಡ ಸಂಘಟನೆಯು ಇಂದು ಶತಮಾನ ಪೂರೈಸಿ ೪೦ಕ್ಕೂ ಹೆಚ್ಚು ದೇಶಗಳಲ್ಲಿ ವಿಸ್ತರಿಸಿರುವುದು ಹೆಮ್ಮೆಯ ಸಂಗತಿ. ಅನೇಕ ಸವಾಲುಗಳ ನಡುವೆಯೂ ಸಂಘವು ತನ್ನ ಸಿದ್ಧಾಂತ ಹಾಗೂ ಶಿಸ್ತಿನಿಂದ ಮುನ್ನಡೆದಿದೆ. ದಂಡವು ಶಕ್ತಿಯ ಸಂಕೇತವೇ ಹೊರತು ಸಂಘರ್ಷದ ಸಾಧನವಲ್ಲ. ದೇಶಭಕ್ತಿ, ಶಿಸ್ತು ಹಾಗೂ ‘ವಸುಧೈವ ಕುಟುಂಬಕಂ’ ತತ್ವದಡಿ ಪ್ರತಿಯೊಬ್ಬರನ್ನೂ ಸಂಘಟಿಸುವುದು ನಮ್ಮ ಉದ್ದೇಶ” ಎಂದರು.

ಹಿಂದುತ್ವ ಎಂದರೆ ಮತಾಂಧತೆಯಲ್ಲ, ದೇಶದ ಪ್ರತಿಯೊಂದು ಕಣವನ್ನೂ ಪೂಜಿಸುವ ಮನೋಭಾವ. ಸಂಘವು ಪ್ರಸ್ತುತ ‘ಕುಟುಂಬ ಪ್ರಬೋಧನ’, ‘ಸ್ವದೇಶಿ ಬಳಕೆಯ ಅರಿವು’, ‘ಸಾಮಾಜಿಕ ಸಾಮರಸ್ಯ’, ‘ನಾಗರಿಕ ಶಿಷ್ಟಾಚಾರ’ ಹಾಗೂ ‘ಪರಿಸರ ಸಂರಕ್ಷಣೆ’ ಎಂಬ ಐದು ಪ್ರಮುಖ ವಿಚಾರಗಳಿಗೆ ಆದ್ಯತೆ ನೀಡುತ್ತಿದೆ ಎಂದು ಅವರು ವಿವರಿಸಿದರು.

ನೆಹರೂ ಕಾಲದ ಪ್ರಸಂಗ ಸ್ಮರಿಸಿದ ತಿಲಕ್ ರಾವ್: ಮುಖ್ಯ ಅತಿಥಿಯಾಗಿದ್ದ ಮುರ್ಡೇಶ್ವರದ ಉದ್ಯಮಿ ತಿಲಕ್ ರಾವ್ ಮಾತನಾಡಿ, ಡಾ. ಕೇಶವ ಬಲಿರಾಮ ಹೆಡ್ಗೇವಾರ್ ಅವರಿಂದ ಆರಂಭಗೊಂಡ ಸಂಘವು ೧೦೦ ವರ್ಷಗಳನ್ನು ಪೂರೈಸಿದೆ. ಸಂಘದ ದೇಶಸೇವೆಯನ್ನು ಗುರುತಿಸಿ ೧೯೬೩ರ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಭಾಗವಹಿಸಲು ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಸ್ವಯಂಸೇವಕರಿಗೆ ಅವಕಾಶ ನೀಡಿದ್ದನ್ನು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಶಿರಸಿ ವಿಭಾಗ ಕಾರ್ಯವಾಹ ರಾಮಚಂದ್ರ ಕಾಮತ್ ಉಪಸ್ಥಿತರಿದ್ದರು. ತಾಲೂಕು ಕಾರ್ಯವಾಹ ವಸಂತ ನಾಯ್ಕ ಸ್ವಾಗತಿಸಿದರು.

About The Author

error: Content is protected !!