November 22, 2026

ಕೂಡ್ಲಿಗಿ: ಬನ್ನಿಗೋಳ ಜಾಕ್‌ವೆಲ್ ಮೋಟಾರ್ ದುರಸ್ತಿ; ಪಟ್ಟಣದಲ್ಲಿ ನೀರು ಪೂರೈಕೆ ವ್ಯತ್ಯಯ

ಟ್ಯಾಂಕರ್‌ ಮೂಲಕ ನೀರು ಸರಬರಾಜು: ಸಹಕರಿಸಲು ಮುಖ್ಯಾಧಿಕಾರಿ ದಾದಾಪೀರ್ ಮನವಿ

೬ ತಿಂಗಳಿಂದ ಸಂಬಳವಿಲ್ಲದೆ ಪರದಾಡುತ್ತಿರುವ ಸಿಬ್ಬಂದಿ: ಜಲಮಂಡಳಿ ಆಡಳಿತದ ವಿರುದ್ಧ ಸಾರ್ವಜನಿಕ ಆಕ್ರೋಶ

ಕೂಡ್ಲಿಗಿ (ವಿಜಯನಗರ): ಪಟ್ಟಣಕ್ಕೆ ನೀರು ಪೂರೈಸುವ ಬನ್ನಿಗೋಳ ಜಾಕ್‌ವೆಲ್‌ನಲ್ಲಿ ಬೃಹತ್ ಮೋಟಾರ್ ಸುಟ್ಟು ಹೋಗಿರುವ ಹಿನ್ನೆಲೆಯಲ್ಲಿ ಕೂಡ್ಲಿಗಿ ಪಟ್ಟಣದಲ್ಲಿ ಕಳೆದ ಕೆಲವು ದಿನಗಳಿಂದ ಕುಡಿಯುವ ನೀರು ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಪಟ್ಟಣ ಪಂಚಾಯಿತಿ ವತಿಯಿಂದ ಟ್ರಾಕ್ಟರ್ ಟ್ಯಾಂಕರ್‌ಗಳ ಮೂಲಕ ಅಗತ್ಯವಿರುವ ವಾರ್ಡ್‌ಗಳಿಗೆ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಪ.ಪಂ. ಮುಖ್ಯಾಧಿಕಾರಿ ದಾದಾಪೀರ್ ತಿಳಿಸಿದ್ದಾರೆ.

ದುರಸ್ತಿ ಕಾರ್ಯ ಪ್ರಗತಿಯಲ್ಲಿದ್ದು, ನವೆಂಬರ್ ೧ ಅಥವಾ ೨ರ ವೇಳೆಗೆ ಎಂದಿನಂತೆ ನಳಗಳ ಮೂಲಕ ನೀರು ಸರಬರಾಜು ಪುನರಾರಂಭಗೊಳ್ಳಲಿದೆ. ಅಲ್ಲಿಯವರೆಗೆ ಸಾರ್ವಜನಿಕರು ಟ್ಯಾಂಕರ್ ನೀರು ಪೂರೈಕೆಯ ಸೌಲಭ್ಯವನ್ನು ಪಡೆದುಕೊಂಡು ಆಡಳಿತದೊಂದಿಗೆ ಸಹಕರಿಸಬೇಕೆಂದು ಮುಖ್ಯಾಧಿಕಾರಿಗಳು ಕೋರಿದ್ದಾರೆ.

ಸಮರ್ಪಕ ನಿರ್ವಹಣೆ ಕೊರತೆ – ಕೋಟಿ ಕೋಟಿ ಹಣ ಬಾಕಿ: ಇನ್ನೊಂದೆಡೆ, ಬನ್ನಿಗೋಳ ಜಾಕ್‌ವೆಲ್ ನಿರ್ವಹಣೆ ಮಾಡುತ್ತಿರುವ ಕರ್ನಾಟಕ ನಗರ ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿ (KUWSDB) ಹಾಗೂ ಸ್ಥಳೀಯ ಆಡಳಿತಗಳ ಬೇಜವಾಬ್ದಾರಿತನದ ವಿರುದ್ಧ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪ್ರತಿ ತಿಂಗಳು ಬಜೆಟ್‌ನಲ್ಲಿ ಹಗರಿಬೊಮ್ಮನಹಳ್ಳಿ ಹಾಗೂ ಕೊಟ್ಟೂರು ಸ್ಥಳೀಯ ಆಡಳಿತಗಳಿಂದ ನಿರ್ವಹಣೆಗಾಗಿ ತಲಾ ₹೧೦-೧೨ ಲಕ್ಷ ಮತ್ತು ಕೂಡ್ಲಿಗಿ ಪ.ಪಂ.ನಿಂದ ₹೮-೧೦ ಲಕ್ಷ ಕಾಯ್ದಿರಿಸಲಾಗುತ್ತಿದ್ದರೂ, ವರ್ಷದಲ್ಲಿ ಹಲವು ಬಾರಿ ವಾರಗಟ್ಟಲೆ ನೀರು ಸರಬರಾಜು ಸ್ಥಗಿತಗೊಳ್ಳುತ್ತಿರುವುದು ಜಲಮಂಡಳಿಯ ಕಳಪೆ ನಿರ್ವಹಣೆಗೆ ಕನ್ನಡಿ ಹಿಡಿದಿದೆ. ಹಗರಿಬೊಮ್ಮನಹಳ್ಳಿ, ಕೊಟ್ಟೂರು ಹಾಗೂ ಕೂಡ್ಲಿಗಿ (₹೭೦ ಲಕ್ಷ ಬಾಕಿ) ಆಡಳಿತಗಳಿಂದ ಕೋಟಿಗಟ್ಟಲೆ ಹಣ ಬಾಕಿ ಉಳಿಸಿಕೊಂಡಿರುವುದೇ ಈ ಸಮಸ್ಯೆಗೆ ಕಾರಣ ಎನ್ನಲಾಗಿದೆ.

೬ ತಿಂಗಳಿಂದ ಸಿಬ್ಬಂದಿಗೆ ಸಿಗದ ವೇತನ; ಬೆದರಿಕೆ ಆರೋಪ: ಜಾಕ್‌ವೆಲ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ೩೨ ಸಿಬ್ಬಂದಿಗೆ ಕಳೆದ ೬ ತಿಂಗಳಿಂದ ವೇತನ ನೀಡದೆ ಆಡಳಿತ ಮಂಡಳಿ ಸತಾಯಿಸುತ್ತಿದೆ. ವೇತನಕ್ಕಾಗಿ ಮನವಿ ಮಾಡಲು ಹೋದ ಕಾರ್ಮಿಕರಿಗೆ ಕೆಲಸದಿಂದ ತೆಗೆದುಹಾಕುವುದಾಗಿ ಇಲಾಖೆಯ ಇಂಜಿನಿಯರ್ ಬೆದರಿಕೆ ಹಾಕುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಅಧಿಕಾರಿಗಳ ಲೋಪದಿಂದಾಗಿ ಸಿಬ್ಬಂದಿ ಸಂಕಷ್ಟಕ್ಕೀಡಾಗಿದ್ದು, ಸಾರ್ವಜನಿಕರು ನೀರಿಗಾಗಿ ಪರಿತಪಿಸುವಂತಾಗಿದೆ.

– ವಂದೇ ಮಾತರಂ ವಿ.ಜಿ. ವೃಷಭೇಂದ್ರ, ಕೂಡ್ಲಿಗಿ (ಭಾವನಾ ಟಿವಿ)

About The Author

error: Content is protected !!