November 22, 2026

ಸರ್ಕಾರಿ ಪದವಿ ಕಾಲೇಜು ಅತಿಥಿ ಉಪನ್ಯಾಸಕರ ಸೇವಾ ಭದ್ರತೆಗೆ ‘ಬೆಳಗಾವಿ ಚಲೋ’ ನಿರ್ಣಯ: ಡಾ. ಹನುಮಂತಗೌಡ ಕಲ್ಮನಿ

₹50 ಲಕ್ಷ ಇಡಿಗಂಟು, ಟಿಡಿಎಸ್ ಕಡಿತ ರದ್ದುಪಡಿಸಲು ಆಗ್ರಹ; ರಾಯಚೂರು ಜಿಲ್ಲಾ ಪ್ರವಾಸ ಯಶಸ್ವಿ

ಸಿಂಧನೂರು (ರಾಯಚೂರು ಜಿಲ್ಲೆ): ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸೇವಾ ಭದ್ರತೆ ಸೇರಿದಂತೆ ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಮುಂಬರುವ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ವೇಳೆ ‘ಬೆಳಗಾವಿ ಚಲೋ’ ಬೃಹತ್ ಹೋರಾಟ ನಡೆಸಲು ನಿರ್ಧರಿಸಲಾಗಿದೆ ಎಂದು ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಡಾ. ಹನುಮಂತಗೌಡ ಕಲ್ಮನಿ ತಿಳಿಸಿದ್ದಾರೆ.

ಶನಿವಾರ ರಾಯಚೂರು ಜಿಲ್ಲೆಯ ಎಲ್ಲಾ ತಾಲೂಕುಗಳ ಪ್ರವಾಸ ಕೈಗೊಂಡ ಬಳಿಕ ಸಿಂಧನೂರಿನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿ ಹಾಗೂ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. “ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರು ಹಾಗೂ ಶೈಕ್ಷಣಿಕ ಸಂಯೋಜಕರಿಗೆ ಸೇವಾ ಭದ್ರತೆ ಒದಗಿಸುವ ಜೊತೆಗೆ ₹50 ಲಕ್ಷ ಇಡಿಗಂಟು ನೀಡಬೇಕು” ಎಂದು ಒತ್ತಾಯಿಸಿದರು.

ಟಿಡಿಎಸ್ ಕಡಿತಕ್ಕೆ ಆಕ್ರೋಶ: “ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ಗೌರವಧನದಲ್ಲಿ ಉನ್ನತ ಶಿಕ್ಷಣ ಇಲಾಖೆಯು ಟಿಡಿಎಸ್ (TDS) ಕಡಿತಗೊಳಿಸುತ್ತಿರುವುದು ಅತ್ಯಂತ ದುರದೃಷ್ಟಕರ. ಇನ್ನುಮುಂದೆ ಯಾವುದೇ ಕಾರಣಕ್ಕೂ ಟಿಡಿಎಸ್ ಕಡಿತ ಮಾಡದಂತೆ ಸರ್ಕಾರ ತಕ್ಷಣವೇ ಸೂಕ್ತ ನಿರ್ದೇಶನ ನೀಡಬೇಕು. ಈ ಕುರಿತು ರಾಜ್ಯ ಸರ್ಕಾರ ಹಾಗೂ ಉನ್ನತ ಶಿಕ್ಷಣ ಸಚಿವರು ಶೀಘ್ರದಲ್ಲೇ ಸಕಾರಾತ್ಮಕ ಪರಿಹಾರ ಒದಗಿಸುವ ಭರವಸೆಯಿದೆ” ಎಂದರು.

ಪ್ರಮುಖ ಬೇಡಿಕೆಗಳು ಮತ್ತು ಹೋರಾಟದ ರೂಪುರೇಷೆ:

ಅತಿಥಿ ಉಪನ್ಯಾಸಕರು ಹಾಗೂ ಶೈಕ್ಷಣಿಕ ಸಂಯೋಜಕರಿಗೆ ಸೇವಾ ಭದ್ರತೆ ಮತ್ತು ₹50 ಲಕ್ಷ ಇಡಿಗಂಟು ಘೋಷಿಸಬೇಕು.

ಗೌರವಧನದಲ್ಲಿ ಮಾಡುತ್ತಿರುವ ಟಿಡಿಎಸ್ ಕಡಿತವನ್ನು ತಕ್ಷಣವೇ ನಿಲ್ಲಿಸಬೇಕು.

2009ರ ಪೂರ್ವದ ಎಂ.ಫಿಲ್ (M.Phil) ಪದವಿಯನ್ನು ಪರಿಗಣಿಸಿ ಸೇವಾ ಸೌಲಭ್ಯ ಕಲ್ಪಿಸಬೇಕು.

    ಪೂರ್ವಭಾವಿ ಸಭೆಯಲ್ಲಿ ರಾಯಚೂರು, ಸಿಂಧನೂರು, ಮಸ್ಕಿ, ಲಿಂಗಸುಗೂರು, ಮುದಗಲ್, ತುರುವಿಹಾಳ, ಕವಿತಾಳ, ಮಾನ್ವಿ ಹಾಗೂ ಸಿರವಾರ ತಾಲೂಕು ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಅತಿಥಿ ಉಪನ್ಯಾಸಕರು ಪಾಲ್ಗೊಂಡು ‘ಬೆಳಗಾವಿ ಚಲೋ’ ಹೋರಾಟದ ರೂಪುರೇಷೆಗಳ ಕುರಿತು ಚರ್ಚಿಸಿದರು.

    About The Author

    error: Content is protected !!