November 22, 2026

ಬೇಡ್ತಿ-ವರದಾ ನದಿ ತಿರುವು ವಿರೋಧಿಸಿ ಯಲ್ಲಾಪುರದಲ್ಲಿ ಮಂಗಳವಾರ ಹೆದ್ದಾರಿ ತಡೆ: ಅನಂತಮೂರ್ತಿ ಹೆಗಡೆ

ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಲು ಸ್ವರ್ಣವಲ್ಲೀ ಶ್ರೀಗಳ ಮಾರ್ಗದರ್ಶನದಲ್ಲಿ ಬೃಹತ್ ಹೋರಾಟ

ಜನರು ಮನೆ-ಮನೆಯಿಂದ ಹೊರಬಂದು ಹೋರಾಟದಲ್ಲಿ ಭಾಗಿಗಳಾಗಲು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕರೆ

ಶಿರಸಿ: ಜಿಲ್ಲೆಗೆ ಮಾರಕವಾಗಿರುವ ಬೇಡ್ತಿ-ವರದಾ ನದಿ ತಿರುವು ಯೋಜನೆಯನ್ನು ಸಂಪೂರ್ಣವಾಗಿ ಖಂಡಿಸಿ, ಮಂಗಳವಾರ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳ‌ ಮಾರ್ಗದರ್ಶನದಲ್ಲಿ ಯಲ್ಲಾಪುರದಲ್ಲಿ ಹಮ್ಮಿಕೊಂಡಿರುವ ಬೃಹತ್ ರಾಷ್ಟ್ರೀಯ ಹೆದ್ದಾರಿ ತಡೆ ಪ್ರತಿಭಟನೆಗೆ ಮನೆ ಮನೆಯಿಂದ ಜನರು ಆಗಮಿಸುವ ಮೂಲಕ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಬೇಕು ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಕರೆ ನೀಡಿದ್ದಾರೆ.

“ನಮ್ಮ ನದಿ ನಮ್ಮ ಹಕ್ಕು. ನಮ್ಮ ಮನೆ, ಪರಿಸರ, ಜಲ ಸಂಪನ್ಮೂಲ ಹಾಗೂ ಸಂಸ್ಕೃತಿ ಉಳಿಯಬೇಕೆಂದರೆ ನಾವೆಲ್ಲರೂ ಈ ಹೋರಾಟದಲ್ಲಿ ಒಗ್ಗಟ್ಟಿನಿಂದ ಭಾಗವಹಿಸಲೇಬೇಕು. ಯಾರೋ ಹೋರಾಟ ಮಾಡುತ್ತಾರೆ ಎಂದು ಇಂದು ನಾವು ಸುಮ್ಮನಿದ್ದರೆ, ನಾಳೆ ಸರ್ಕಾರ ನೀಡುವ ಭಿಕ್ಷೆಯನ್ನು ಸ್ವೀಕರಿಸಿ ಬದುಕಬೇಕಾದ ದುಸ್ಥಿತಿ ಬರಬಹುದು. ಈ ಕುರಿತು ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಬೇಕಾಗಿದೆ” ಎಂದು ಅವರು ಪ್ರತಿಪಾದಿಸಿದ್ದಾರೆ.

ಡಿಪಿಆರ್ ಸಿದ್ಧಪಡಿಸದಂತೆ ಒಕ್ಕೊರಲ ಆಗ್ರಹ: “ನಮ್ಮ ನಾಡಿನ ನದಿಗಳ ಒಡಲಿಗೆ ಕೈ ಹಾಕಿದರೆ ಹುಷಾರ್ ಎನ್ನುವ ಸ್ಪಷ್ಟ ಸಂದೇಶವನ್ನು ಸರ್ಕಾರಕ್ಕೆ ತಲುಪಿಸಬೇಕಿದೆ. ಆದ್ದರಿಂದ ಜಿಲ್ಲೆಯ ರೈತರು, ಸಾರ್ವಜನಿಕರು ಸಹಸ್ರಾರು ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಬೇಕು. ಸರ್ಕಾರ ತಕ್ಷಣವೇ ಈ ನದಿ ತಿರುವು ಯೋಜನೆಯನ್ನು ಕೈಬಿಡಬೇಕು ಹಾಗೂ ಡಿಪಿಆರ್ (ವಿವರವಾದ ಯೋಜನಾ ವರದಿ) ಸಿದ್ಧಪಡಿಸುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು ಎಂದು ಒಕ್ಕೊರಲಿನಿಂದ ಹೋರಾಟ ಮಾಡೋಣ” ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

About The Author

error: Content is protected !!