ವಿಧವಾ ವೇತನ, ಭೂಮಿಯ ವಾರಸಾ ದಾಖಲೆಗೂ ಪರದಾಟ; ಎರಡು ತಿಂಗಳಲ್ಲಿ ದಾಖಲೆ ನೀಡದಿದ್ದರೆ ಧರಣಿ ಸತ್ಯಾಗ್ರಹ – ಅನಂತ ನಾಯ್ಕ ಹೆಗ್ಗಾರ ಎಚ್ಚರಿಕೆ
ಹೊನ್ನಾವರ (ಉತ್ತರ ಕನ್ನಡ): 2009ರ ನವೆಂಬರ್ 11ರಂದು ಅರಬ್ಬಿ ಸಮುದ್ರದಲ್ಲಿ ಬೀಸಿದ ‘ಫಿಯಾನ್’ ಚಂಡಮಾರುತಕ್ಕೆ ಸಿಲುಕಿ ಮೃತಪಟ್ಟ ಉತ್ತರ ಕನ್ನಡ ಜಿಲ್ಲೆಯ 30 ಮೀನುಗಾರಿಕಾ ಬೋಟ್ ಕಾರ್ಮಿಕರ ಕುಟುಂಬಗಳಿಗೆ ದುರಂತ ಸಂಭವಿಸಿ 17 ವರ್ಷಗಳೇ ಕಳೆದರೂ ಸರ್ಕಾರದಿಂದ ಈವರೆಗೆ ಸಾಮೂಹಿಕವಾಗಿ ಮರಣ ದಾಖಲೆ (Death Certificate) ಪೂರೈಸದೇ ಇರುವುದು ಅತ್ಯಂತ ವಿಷಾದಕರ ಎಂದು ದಿ. ಡಿ. ದೇವರಾಜ ಅರಸು ವಿಚಾರ ವೇದಿಕೆಯ ಅಧ್ಯಕ್ಷ ಅನಂತ ನಾಯ್ಕ ಹೆಗ್ಗಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಂದಾಯ ಸಚಿವರು, ಕಂದಾಯ ಇಲಾಖೆ ಕಾರ್ಯದರ್ಶಿಗಳು, ಪ್ರಜಾಸೇವಾ ಇಲಾಖೆ ಹಾಗೂ ಉತ್ತರ ಕನ್ನಡ ಜಿಲ್ಲಾಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.

30 ಮೀನುಗಾರರ ದುರ್ಮರಣ: 2009ರ ನವೆಂಬರ್ 11ರಂದು ಪಶ್ಚಿಮ ಕರಾವಳಿಯ ಗೋವಾ ಹಾಗೂ ರತ್ನಗಿರಿ ಭಾಗದಲ್ಲಿ ಮೀನುಗಾರಿಕಾ ಬೋಟ್ ಕಾರ್ಮಿಕರಾಗಿ ದುಡಿಯುತ್ತಿದ್ದ ಉತ್ತರ ಕನ್ನಡ ಜಿಲ್ಲೆಯ 30 ಮಂದಿ ಚಂಡಮಾರುತಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದರು. ಇದರಲ್ಲಿ ಹೊನ್ನಾವರ ತಾಲೂಕಿನ 19, ಕುಮಟಾ ತಾಲೂಕಿನ 9 ಹಾಗೂ ಅಂಕೋಲಾ ತಾಲೂಕಿನ ಇಬ್ಬರು ಮೀನುಗಾರರು ಸೇರಿದ್ದರು. ಅಂದು ವೇದಿಕೆಯ ವತಿಯಿಂದ ಧರಣಿ ಸತ್ಯಾಗ್ರಹ ನಡೆಸಿ ಒತ್ತಾಯಿಸಿದ ಪರಿಣಾಮ, ಅಂದಿನ ಮೀನುಗಾರಿಕಾ ಸಚಿವ ಆನಂದ ಅಸ್ನೋಟಿಕರ ಅವರ ನೇತೃತ್ವದಲ್ಲಿ ಕರ್ನಾಟಕ ಹಾಗೂ ಗೋವಾ ಸರ್ಕಾರಗಳಿಂದ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ವಿತರಿಸಲಾಗಿತ್ತು.
ಸರ್ಕಾರಿ ಸೌಲಭ್ಯಗಳಿಂದ ವಂಚಿತರಾದ ಕುಟುಂಬಗಳು: “ಪರಿಹಾರವೇನೋ ಸಿಕ್ಕಿತು; ಆದರೆ ಮೃತಪಟ್ಟವರ ಮರಣ ದಾಖಲೆ ಪತ್ರವನ್ನು ನೀಡುವಂತೆ 2014 ಮತ್ತು 2019ರಲ್ಲಿ ಸಂತ್ರಸ್ತ ಕುಟುಂಬಗಳೊಂದಿಗೆ ಸೇರಿ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಮರಣ ದಾಖಲೆ ಇಲ್ಲದ ಕಾರಣ ಪತಿಯನ್ನು ಕಳೆದುಕೊಂಡ ಅನೇಕ ಮಹಿಳೆಯರಿಗೆ ವಿಧವಾ ವೇತನಕ್ಕೆ ಅರ್ಜಿ ಸಲ್ಲಿಸಲೂ ಸಾಧ್ಯವಾಗಿಲ್ಲ. ಇವರಲ್ಲಿ ಕೆಲವರು ವೇತನವನ್ನೇ ಕಾಣದೆ ಮೃತಪಟ್ಟಿದ್ದಾರೆ. ಅಲ್ಲದೆ, ಈ ಬಡ ಕುಟುಂಬಗಳು ಹೊಂದಿರುವ ತುಂಡು ಭೂಮಿಯ ವಾರಸಾ (ಉತ್ತರಾಧಿಕಾರ) ದಾಖಲೆ ಮಾಡಿಕೊಳ್ಳಲಾಗದೇ ಪರಿತಪಿಸುತ್ತಿವೆ” ಎಂದು ಅನಂತ ನಾಯ್ಕ ಹೆಗ್ಗಾರ ನೋವು ತೋಡಿಕೊಂಡಿದ್ದಾರೆ.
ಹೋರಾಟದ ಎಚ್ಚರಿಕೆ: ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳು ತಕ್ಷಣ ಎಚ್ಚೆತ್ತುಕೊಂಡು ಮಾನವೀಯತೆಯ ನೆಲೆಯಲ್ಲಿ ಸಂತ್ರಸ್ತ ಕುಟುಂಬಗಳಿಗೆ ಸಾಮೂಹಿಕವಾಗಿ ಮರಣ ದಾಖಲೆ ಪತ್ರಗಳನ್ನು ವಿತರಿಸಬೇಕು. ಇನ್ನೆರಡು ತಿಂಗಳೊಳಗೆ ದಾಖಲೆ ಪೂರೈಸಲು ಕ್ರಮ ಕೈಗೊಳ್ಳದಿದ್ದಲ್ಲಿ, ಸಂತ್ರಸ್ತ ಕುಟುಂಬಗಳೊಂದಿಗೆ ಸೇರಿ ತಾಲೂಕು ಆಡಳಿತ ಸೌಧದ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ದಿ. ಡಿ. ದೇವರಾಜ ಅರಸು ವಿಚಾರ ವೇದಿಕೆ ಎಚ್ಚರಿಸಿದೆ.
ನಾರಾಯಣ ಮುಕ್ರಿ ಕಡತೋಕಾ, ಹರಿಯಪ್ಪ ನಾಯ್ಕ್ ಹುಡಗೋಡು, ಕೇಶವ ನಾಯ್ಕ್ ಮಾಗೋಡು, ನಾಗೇಶ್ ನಾಯ್ಕ್ ಕಡೆ ಹಳ್ಳ ಉಪಸ್ತಿತರಿದ್ದರು.

More Stories
ಅಗಲಿದ ಮಾಜಿ ಸೈನಿಕ ವಾಮನ ನಾಯ್ಕ ಅವರಿಗೆ ಸೇನಾ ಗೌರವದೊಂದಿಗೆ ಅಂತಿಮ ನಮನ
ಮಾಜಿ ಸೈನಿಕ, ನಾಮಧಾರಿ ಸಮಾಜದ ಹಿರಿಯ ಮುಖಂಡ ವಾಮನ ನಾಯ್ಕ ಮಂಕಿ ನಿಧನ
ಹೊನ್ನಾವರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ಗೆ ಜಿಲ್ಲೆಯ ‘ಉತ್ತಮ ಅರ್ಬನ್ ಬ್ಯಾಂಕ್’ ಪ್ರಶಸ್ತಿ