ದಲಿತ ಸಮುದಾಯ ಸಂಘಟನೆಗಳ ನೇತೃತ್ವದಲ್ಲಿ ಮೂಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್ ಅವರಿಗೆ ಡಿ.28ರಂದು ಮಂಡ್ಯದ ಕಲಾ ಮಂದಿರದಲ್ಲಿ ಅಭಿನಂದನಾ ಸಮಾರಂಭ.. ದಲಿತ ಸಮುದಾಯ ಸಂಘಟನೆಗಳ ಅಭಿನಂದನಾ ಸಮಿತಿ ವತಿಯಿಂದ ಮಂಡ್ಯದ ಕಲಾಮಂದಿರದಲ್ಲಿ ಬರುವ ಡಿಸೆಂಬರ್ 28ನೇ ತಾರೀಕು ಭಾನುವಾರ ಬೆಳಿಗ್ಗೆ 11 ಗಂಟೆಗೆ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ನೇಮಕ ಗೊಂಡಿರುವ ಹಿರಿಯ ಪತ್ರಕರ್ತ ಬಿ.ಪಿ.ಪ್ರಕಾಶ್ ಅವರಿಗೆ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರೆಗೋಡು ಹೇಳಿದರು. ಅವರು ಕೃಷ್ಣರಾಜಪೇಟೆ ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಅಭಿನಂದನಾ ಸಮಾರಂಭವನ್ನು ಕುರಿತು ಮಾತನಾಡಿದರು.
ಕರ್ನಾಟಕ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ಅಸ್ತಿತ್ವಕ್ಕೆ ಬಂದ ನಂತರ ಮಂಡ್ಯ ಜಿಲ್ಲೆಯ ನಾಲ್ವರು ಪ್ರಮುಖ ದಲಿತ ಮುಖಂಡರುಗಳಿಗೆ ಅತ್ಯುನ್ನತವಾದ ರಾಜಕೀಯ ಸ್ಥಾನಮಾನ ಹಾಗೂ ಅಧಿಕಾರವನ್ನು ನೀಡಿ ಗೌರವಿಸಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿ ಮಳವಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ನಿಯೋಜನೆಗೊಂಡರೆ ಕರ್ನಾಟಕ ಅನುಸೂಚಿತ ಜಾತಿ ಹಾಗೂ ಪಂಗಡಗಳ ಆಯೋಗದ ನೂತನ ಅಧ್ಯಕ್ಷರಾಗಿ ಡಾ. ಎಲ್.ಮೂರ್ತಿ ನೇಮಕಗೊಂಡಿದ್ದಾರೆ.
ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ರಾಜ್ಯ ಉಪಾಧ್ಯಕ್ಷರಾಗಿ ವಿಜಯಲಕ್ಷ್ಮಿ ರಘುನಂದನ್ ನಿಯೋಜನೆ ಗೊಂಡರೆ, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ 50 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹಿರಿಯ ಪತ್ರಕರ್ತರು ಹಾಗೂ ದಲಿತ ಮುಖಂಡರಾದ ಬಿ.ಪಿ.ಪ್ರಕಾಶ್ ಅವರನ್ನು ಮೂಡಾ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಈ ನಾಲ್ವರು ಮುಖಂಡರನ್ನು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್. ಚೆಲುವರಾಯಸ್ವಾಮಿ ಅವರ ನೇತೃತ್ವದಲ್ಲಿ, ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಪಿ.ರವಿಕುಮಾರ್ ಗಣಿಗ ಅವರ ಅಧ್ಯಕ್ಷತೆಯಲ್ಲಿ ಸನ್ಮಾನಿಸಿ ಗೌರವಿಸಲಾಗುತ್ತಿದೆ. ಆದ್ದರಿಂದ ಮಂಡ್ಯ ಜಿಲ್ಲೆಯಾದ್ಯಂತ ಎಲ್ಲಾ ಏಳು ತಾಲೂಕುಗಳಿಂದ ದಲಿತ ಬಂಧುಗಳು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಮಂಡ್ಯ ನಗರದಲ್ಲಿ ದಲಿತ ಸಮುದಾಯ ಸಂಘಟನೆಗಳ ನೇತೃತ್ವದಲ್ಲಿ ನಡೆಯುತ್ತಿರುವ ಅಭಿನಂದನಾ ಸಮಾರಂಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕು ಎಂದು ಗುರುಪ್ರಸಾದ್ ಕೆರೆಗೋಡು ಮನವಿ ಮಾಡಿದರು.
ಕೃಷ್ಣರಾಜಪೇಟೆ ಪುರಸಭೆಯ ಹಿರಿಯ ಸದಸ್ಯ ಹಾಗೂ ದಲಿತ ಮುಖಂಡರಾದ ಡಿ.ಪ್ರೇಮ ಕುಮಾರ್ ಮಾತನಾಡಿ ಮಂಡ್ಯ ಜಿಲ್ಲೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಾಲ್ವರು ದಲಿತ ಮುಖಂಡರುಗಳಿಗೆ ಕಾಂಗ್ರೆಸ್ ಸರ್ಕಾರವು ಅತ್ಯುನ್ನತವಾದ ಗೌರವ ಅಧಿಕಾರವನ್ನು ನೀಡಿ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದಿದೆ ಅತ್ಯುನ್ನತ ಸ್ಥಾನವನ್ನು ಅಲಂಕರಿಸಿರುವ ನಾಲ್ವರು ದಲಿತ ಮುಖಂಡರನ್ನು ಮಂಡ್ಯದ ಕಲಾಮಂದಿರದಲ್ಲಿ ಅಭಿನಂದಿಸಿ ಗೌರವಿಸುತ್ತಿರುವುದು ಇಡೀ ನಾಗರಿಕ ಸಮಾಜವೇ ಮೆಚ್ಚುವ ವಿಚಾರವಾಗಿರುವುದರಿಂದ ಕೃಷ್ಣರಾಜಪೇಟೆ ತಾಲೂಕಿನಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ದಲಿತ ಬಂಧುಗಳು ಮಂಡ್ಯದ ಕಲಾಮಂದಿರದಲ್ಲಿ ನಡೆಯುತ್ತಿರುವ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸುವ ಮೂಲಕ ಅಭಿನಂದನಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಲು ಎಲ್ಲರೂ ಕೈಜೋಡಿಸಿ ಕೆಲಸ ಮಾಡಬೇಕು ಎಂದು ಪ್ರೇಮ್ ಕುಮಾರ್ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಂಡ್ಯ ನಗರ ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ನಿಯೋಜನೆಗೊಂಡಿರುವ ಬಿ.ಪಿ. ಪ್ರಕಾಶ್, ಹಿರಿಯ ಪತ್ರಕರ್ತರಾದ ಸೋಮಶೇಖರ ಕೆರಗೋಡು, ಕರ್ನಾಟಕ ರಾಜ್ಯ ಅಂಬೇಡ್ಕರ್ ವಾರಿಯರ್ ಸಂಘಟನೆಯ ರಾಜ್ಯ ಅಧ್ಯಕ್ಷ ಗಂಗಾಧರ್, ಚಂದಗಾಲು ವಿಜಯಕುಮಾರ್, ಭೀಮ್ ಆರ್ಮಿ ಪ್ರಸನ್ನ, ಟಿ.ಡಿ. ನಾಗರಾಜು, ನರಸಿಂಹಮೂರ್ತಿ, ಕೊಮ್ಮೇರಹಳ್ಳಿ ಮೋಹನ್, ಶಿವಪ್ರಕಾಶ್, ಛಲವಾದಿ ಮಹಾ ಸಭಾ ಜಿಲ್ಲಾಧ್ಯಕ್ಷ ಮಾಂಬಳ್ಳಿ ಜಯರಾಮ್, ತಾಲೂಕು ಅಧ್ಯಕ್ಷ ಊಚನಹಳ್ಳಿ ನಟರಾಜ್, ದೇವರಾಜು, ಮುದುಗೆರೆ ಮಹೇಂದ್ರ, ಡಿ.ಎಸ್.ಎಸ್ ಸಂಚಾಲಕ ಸಂತೋಷ್ ಕುಮಾರ್, ನಾಗರಾಜು, ಪ್ರದೀಪ್, ಗಂಜಿಗೆರೆ ಗಂಗಾಧರ್ ಸೇರಿದಂತೆ ನೂರಾರು ದಲಿತ ಮುಖಂಡರು ಭಾಗವಹಿಸಿದ್ದರು.
ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.

More Stories
ಸೊಳ್ಳೇಪುರ ಹಾಲು ಉತ್ಪಾದಕ ಸಹಕಾರ ಸಂಘ ಕಾಂಗ್ರೆಸ್ ವಷಕ್ಕೆ
ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ ಪ್ರಗತಿ ಉತ್ಸವ-2026
ಉಕ್ಕಡಗಾತ್ರಿಯ ಕರಿಬಸವ ಅಜ್ಜಯ್ಯನ ನೂತನ ದೇವಸ್ಥಾನ ಲೋಕಾರ್ಪಣೆ