March 2, 2026

ಸೆಂಟ್ ಮಿಲಾಗ್ರಿಸ್ ಜಾರ್ಜ್ ಅವರಿಗೆ “ಆದರ್ಶ ಸಹಕಾರಿ” ಪಿ.ಎಸ್. ಭಟ್ ಪ್ರಶಸ್ತಿ


ಹೊನ್ನಾವರ ಡಿ. ೨೬: ಸೇಂಟ್ ಮಿಲಾಗ್ರಿಸ್ ಸೌಹಾರ್ದ ಸಹಕಾರಿ ಬ್ಯಾಂಕ್ ಸ್ಥಾಪಿಸಿ ಠೇವಣಿದಾರರ ಆರ್ಥಿಕ ಭದ್ರತೆ, ಹೂಡಿಕೆದಾರರ ಔದ್ಯಮಿಕ ಅಭಿವೃದ್ಧಿ ಮತ್ತು ಸಾಮಾಜಿಕ ಸೇವೆಗೆ ಮಹತ್ವ ನೀಡಿದ ಜಾರ್ಜ್ ಫರ್ನಾಂಡಿಸ್ ಇವರಿಗೆ ಹಿರಿಯ ಸಹಕಾರಿಗಳಾಗಿದ್ದ ಪಿ.ಎಸ್. ಭಟ್ ಉಪ್ಪೋಣಿ ಇವರ ನೆನಪಿನ ಆದರ್ಶ ಸಹಕಾರಿ ಪ್ರಥಮ ಪ್ರಶಸ್ತಿ ವಿಶೇಷ ಗೌರವದೊಂದಿಗೆ ನಾಳೆ ಸಂಜೆ ೫ ಗಂಟೆಗೆ ಮೂಡಗಣಪತಿ ಸಭಾಭವನದಲ್ಲಿ ಪ್ರದಾನ ಮಾಡಲಾಗುವುದು ಎಂದು ಎಸ್.ಆರ್.ಎಲ್. ಸಾರಿಗೆ ಸಮೂಹ ಸಂಸ್ಥೆಯ ಅಧ್ಯಕ್ಷ, ಶರಾವತಿ ಉತ್ಸವ ಸಮಿತಿಯ ಅಧ್ಯಕ್ಷ ವೆಂಕಟ್ರಮಣ ಹೆಗಡೆ ಪತ್ರಿಕೆಗೆ ತಿಳಿಸಿದ್ದಾರೆ.


ಹಿರಿಯ ರಾಜಕಾರಣಿ ರಾಮಕೃಷ್ಣ ಹೆಗಡೆಯವರು ಆಪ್ತ ವಲಯದಲ್ಲಿ ಗುರುತಿಸಲ್ಪಟ್ಟಿದ್ದ ಪಿ.ಎಸ್. ಭಟ್ ಉಪ್ಪೋಣಿ ಜಿಲ್ಲಾಮಧ್ಯವರ್ತಿ ಬ್ಯಾಂಕ್, ತಾಲೂಕಾ ಭೂ ಬ್ಯಾಂಕ್, ಮಾರ್ಕೆಟಿಂಗ್ ಸೊಸೈಟಿ, ಜಿಲ್ಲಾ ಪಂಚಾಯತ್ ಮೊದಲಾದ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸಿ ಪ್ರಸಿದ್ಧರಾಗಿದ್ದರು. ಶರಾವತಿ ಉತ್ಸವ ಮತ್ತು ಧನ್ವಂತರಿ ಉತ್ಸವ ಸಮಿತಿಗಳ ಗೌರವಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದರು. ಅವರ ನೆನಪಿನಲ್ಲಿ ಪ್ರಶಸ್ತಿ ಪ್ರದಾನವಾಗಲಿದೆ. ಜಾರ್ಜ್ ಫರ್ನಾಂಡಿಸ್ ಸೌಹಾರ್ದ ಸಹಕಾರಿ ಸ್ಥಾಪಿಸಿ ೯ ಜಿಲ್ಲೆಗಳಲ್ಲಿ ೧೧೧ ಶಾಖೆಗಳನ್ನು ತೆರೆದಿದ್ದಾರೆ. ೧೩೮೬ ಕೋಟಿ ರೂ. ಠೇವಣಿ ಸಂಗ್ರಹಣೆ ಮಾಡಿ ೧೩೪೮ ಕೋಟಿ ರೂ. ಸಾಲ ನೀಡಿ ೮.೦೫ ಕೋಟಿ ನಿವ್ವಳ ಲಾಭ ಗಳಿಸುತ್ತಿದ್ದಾರೆ. ಇದರಿಂದ ಸಮಾಜಕ್ಕೆ ಉಪಯೋಗವಾಗಿದೆ. ಜೊತೆಯಲ್ಲಿ ರೈಲ್ವೆ ಹೋರಾಟ, ಸಾಹಿತ್ಯ ಪರಿಷತ್ತು, ಸ್ವಚ್ಚತಾ ಅಭಿಯಾನ, ಆರೋಗ್ಯ ಶಿಬಿರ, ಅಸಹಾಯಕರಿಗೆ ನೆರವು ಮೊದಲಾದ ಚಟುವಟಿಕೆಗಳಿಗೆ ಸಹಾಯ ನೀಡಿ ಆದರ್ಶ ಸಹಕಾರಿ ಅನಿಸಿಕೊಂಡಿದ್ದಾರೆ. ಆದ್ದರಿಂದ ಅರ್ಥಪೂರ್ಣ ಈ ಸಮಾರಂಭಕ್ಕೆ ಸಾರ್ವಜನಿಕರು ಆಗಮಿಸಬೇಕೆಂದು ಶರಾವತಿ ಉತ್ಸವ ಕೋರಿದೆ.

ವರದಿ : ವಿಶ್ವನಾಥ ಸಾಲ್ಕೋಡ ಹೊನ್ನಾವರ

About The Author

error: Content is protected !!