ಭಟ್ಕಳ: ಕ್ರಿಯಾಶೀಲ ಗೆಳೆಯರ ಬಳಗದ ಆಯೋಜನೆಯಲ್ಲಿ ನಡೆದ ಭಟ್ಕಳ ಉತ್ಸವಕ್ಕೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ ನೀಡಿದ್ದು, ಉತ್ಸವದ ಚೈತನ್ಯ ಮತ್ತು ಗ್ರಾಮೀಣ ಸಂಸ್ಕೃತಿಯ ವೈಭವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಉತ್ಸವದ ವಿವಿಧ ಸ್ಟಾಲ್‌ಗಳನ್ನು ಸುತ್ತಿ ವೀಕ್ಷಿಸಿದ ಸಂಸದರು, ಗ್ರಾಮೀಣ ಪ್ರದೇಶದ ಉತ್ಪಾದಕರಿಗೆ ತಮ್ಮ ಕೈಚಳಕ ಹಾಗೂ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ಅವಕಾಶ ಕಲ್ಪಿಸಿರುವುದನ್ನು ಶ್ಲಾಘಿಸಿದರು. “ಇಂತಹ ಉತ್ಸವಗಳು ಸ್ಥಳೀಯ ಪ್ರತಿಭೆಗಳಿಗೆ ವೇದಿಕೆಯಾಗುತ್ತವೆ. ಕರಕುಶಲ ವಸ್ತುಗಳು ಸೇರಿದಂತೆ ಸ್ವದೇಶಿ ಉತ್ಪನ್ನಗಳಿಗೆ ಮಾರುಕಟ್ಟೆ ಸೃಷ್ಟಿಯಾಗುತ್ತಿರುವುದು ಸಂತೋಷಕರ” ಎಂದು ಹೇಳಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳ ಕುರಿತು ಮಾತನಾಡಿದ ಅವರು, ಯಾವುದೇ ಊರಿನಲ್ಲಿ ನಿರಂತರ ಸಾಂಸ್ಕೃತಿಕ ಚಟುವಟಿಕೆಗಳು ನಡೆಯುವುದು ಆ ಊರಿನ ಚೈತನ್ಯ ಹಾಗೂ ಅಭಿವೃದ್ಧಿಯ ಸೂಚಕವಾಗಿದೆ ಎಂದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಭಟ್ಕಳ ಉತ್ಸವದ ಜೊತೆಗೆ ಶರಾವತಿ ಉತ್ಸವ, ಕುಮಟಾ ಹಬ್ಬ, ಮಾರಿಕಾಂಬಾ ಜಾತ್ರೆ, ಸಂಕಲ್ಪ ಉತ್ಸವ, ಅಂಕೋಲಾ ಹಬ್ಬ, ಅಂಕೋಲಾ ಉತ್ಸವ, ಬನವಾಸಿ ಕದಂಬೋತ್ಸವಗಳಂತಹ ಹಬ್ಬಗಳು ವರ್ಷಪೂರ್ತಿ ನಡೆಯುತ್ತಿರುವುದು ಜಿಲ್ಲೆಯ ಸಮೃದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಕ್ರಿಯಾಶೀಲ ಗೆಳೆಯರ ಬಳಗ ಕೈಗೊಂಡಿರುವ ಈ ಪ್ರಯತ್ನ ಇನ್ನಷ್ಟು ವಿಸ್ತರಿಸಲಿ, ಪ್ರತಿ ವರ್ಷವೂ ಭಟ್ಕಳದಲ್ಲಿ ಇಂತಹ ಸಾಂಸ್ಕೃತಿಕ ಹಬ್ಬಗಳು ಜನರನ್ನು ಒಟ್ಟುಗೂಡಿಸುವ ವೇದಿಕೆಯಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಕ್ರಿಯಾಶೀಲ ಗೆಳೆಯರ ಬಳಗದ ಅಧ್ಯಕ್ಷ ರಮೇಶ ಖಾರ್ವಿ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ಮಾಜಿ ಶಾಸಕ ಶಿವಾನಂದ ಮಂಡಳ ಅಧ್ಯಕ್ಷ ನಾಯ್ಕ, ಲಕ್ಷ್ಮೀನಾರಾಯಣ ನಾಯ್ಕ, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶಿವಾನಿ ಶಾಂತಾರಾಮ, ಜಿಲ್ಲಾ ಕಾರ್ಯದರ್ಶಿ ಹಾಗೂ ಉತ್ಸವ ಸಮಿತಿ ಸಂಚಾಲಕ ಶ್ರೀಕಾಂತ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

More Stories
ಮುರುಡೇಶ್ವರ ಬೈಲೂರು ಕಲ್ಲು ತೂರಾಟ ಪ್ರಕರಣ
ಭಟ್ಕಳದ ‘ಸಂಶುದ್ದೀನ್ ಸರ್ಕಲ್’ ಗೋಪುರ ನೆಲಸಮ:ಇನ್ನೂನೆನಪು ಮಾತ್ರ
ಶ್ರೀವಲಿ ಪದವಿ ಪೂರ್ವ ಕಾಲೇಜುನಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ