

ಭಟ್ಕಳ: ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮಗಳ ಬಗ್ಗೆ ವ್ಯಾಪಕ ಅರಿವು ಮೂಡಿಸುವ ಉದ್ದೇಶದಿಂದ ಉತ್ತರ ಕನ್ನಡ ಜಿಲ್ಲಾ ಪೊಲೀಸ್, ಭಟ್ಕಳ ಶಹರ ಪೊಲೀಸ್ ಠಾಣೆ ಹಾಗೂ ಶ್ರೀ ಜ್ಞಾನೇಶ್ವರಿ ಬಿ.ಇಡಿ. ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಗುರುವಾರ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಂಗವಾಗಿ ಶ್ರೀ ಜ್ಞಾನೇಶ್ವರಿ ಬಿ.ಇಡಿ. ಕಾಲೇಜಿನ ಆವರಣದಿಂದ ಶಂಶುದ್ದೀನ್ ಸರ್ಕಲ್ (ಎಸ್. ಸರ್ಕಲ್) ವರೆಗೆ ಬೃಹತ್ ಜಾಗೃತಿ ಜಾಥಾ ನಡೆಯಿತು. ಜಾಥಾದುದ್ದಕ್ಕೂ ವಿದ್ಯಾರ್ಥಿಗಳು ಮಾದಕ ವ್ಯಸನದ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗುತ್ತಾ, ಸಾರ್ವಜನಿಕರ ಗಮನ ಸೆಳೆದರು.

ಭವಿಷ್ಯ ಹಾಳುಮಾಡುವ ದುಶ್ಚಟ:
ಬಳಿಕ ನಡೆದ ಜಾಗೃತಿ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಭಟ್ಕಳ ಶಹರ ಪೊಲೀಸ್ ಠಾಣೆಯ ಸಿಪಿಐ ದಿವಾಕರ ಪಿ.ಎಂ. ಅವರು, “ಮಾದಕ ವ್ಯಸನವು ಯುವ ಪೀಳಿಗೆಯ ಮತ್ತು ವಿದ್ಯಾರ್ಥಿಗಳ ಶಿಕ್ಷಣ, ಆರೋಗ್ಯ ಹಾಗೂ ಉಜ್ವಲ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಭೀಕರ ದುಶ್ಚಟವಾಗಿದೆ. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಇಂತಹ ಮಾರಕ ವ್ಯಸನಗಳಿಗೆ ಬಲಿಯಾಗಬಾರದು, ಸದಾ ಇವುಗಳಿಂದ ದೂರವಿರಬೇಕು” ಎಂದು ಕರೆ ನೀಡಿದರು.

ಮಾಹಿತಿ ನೀಡಲು ಪೊಲೀಸರ ಕರೆ:
ಮಾದಕ ವಸ್ತುಗಳ ಅಕ್ರಮ ಸಾಗಣೆ, ಮಾರಾಟ ಅಥವಾ ಸೇವನೆ ಕುರಿತು ಯಾವುದೇ ಮಾಹಿತಿ ದೊರೆತಲ್ಲಿ ಸಾರ್ವಜನಿಕರು ತಕ್ಷಣವೇ ಪೊಲೀಸ್ ಇಲಾಖೆಗೆ ದೂರು ನೀಡಬೇಕು. ಸಮಾಜದಿಂದ ಮಾದಕ ವ್ಯಸನವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ವಿದ್ಯಾರ್ಥಿಗಳು ಜಾಗೃತಿ ರಾಯಭಾರಿಗಳಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪೊಲೀಸ್ ಉಪನಿರೀಕ್ಷಕರಾದ (ಪಿಎಸೈ) ಸೋಮನಾಥ ರಾಠೊಡ್, ತಿಮ್ಮಪ್ಪ ಎಸ್., ರವಿ ಗಾಂಜೇಕರ್, ಪ್ರೊಬೇಷನರಿ ಪಿಎಸೈ ಸಿದ್ದು ಕರ್ನಾಲ್, ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ ಭಟ್, ಉಪಪ್ರಾಂಶುಪಾಲ ನಾಗರಾಜ ಮಡಿವಾಳ, ಉಪನ್ಯಾಸಕ ಗಜಾನನ ಶಾಸ್ತ್ರಿ ಸೇರಿದಂತೆ ಠಾಣೆಯ ಪೊಲೀಸ್ ಸಿಬ್ಬಂದಿಗಳು ಹಾಗೂ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

About The Author




More Stories
ತೆರೆದ ಚರಂಡಿ ಹೊಂಡ: ಅಪಾಯದ ನಡುವೆ ಭಟ್ಕಳದ ವಾಹನ ಸವಾರರ ಸಂಚಾರ.
ವಿಧಾನಸಭೆಯ ಉಪಸಭಾಧ್ಯಕ್ಷರಾಗಿ ಮಂಕಾಳ್ ಎಸ್. ವೈದ್ಯ ಆಯ್ಕೆ: ಮಾಜಿ ಸಚಿವರಿಗೆ ಭಟ್ಕಳದಲ್ಲಿ ಅದ್ಧೂರಿ ಸ್ವಾಗತ.
ಆಗಸ್ಟ್ 18ರಂದು ಭಟ್ಕಳದಲ್ಲಿ ಬೃಹತ್ ರಕ್ತದಾನ ಶಿಬಿರ: ಡಾ. ಸುರೇಶ ನಾಯಕ್ ಸ್ಮರಣಾರ್ಥ ಆಯೋಜನೆ