March 4, 2026

ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಬೇಸಾಯ ಮಾಡಿದರೆ,ಹೆಚ್ಚಿನ ಲಾಭ ಬಳ್ಳೇಕೆರೆ ಮಂಜುನಾಥ್

  ಕೃಷ್ಣರಾಜಪೇಟೆ :ಸ್ವಾರ್ಥವೇ ತುಂಬಿರುವ ಇಂದಿನ ಸಮಾಜದಲ್ಲಿ ದೇಸಿ ತಳಿಯ ರಾಸುಗಳನ್ನು ಸಂರಕ್ಷಣೆ ಮಾಡಿ, ಸಮಾಜಮುಖಿ ಚಟುವಟಿಕೆಗಳ ಮೂಲಕ ಆರೋಗ್ಯವಂತ ಸಮಾಜದ ನಿರ್ಮಾಣಕ್ಕಾಗಿ ದುಡಿಯುತ್ತಿರುವ ಸ್ವರೂಪರಾಣಿ ಮಧುಸೂದನ್ ರಾವ್ ದಂಪತಿಗಳ ಸಮಾಜಮುಖಿ ಕಾಳಜಿ ಹಾಗೂ ಬದ್ಧತೆಯು ನಾಗರೀಕ ಸಮಾಜಕ್ಕೆ ಮಾದರಿಯಾಗಿದೆ ಎಂದು ಹಿರಿಯ ಪತ್ರಕರ್ತ ಬಳ್ಳೇಕೆರೆ ಮಂಜುನಾಥ್ ಹೇಳಿದರು.

ಅವರು ಕೃಷ್ಣರಾಜಪೇಟೆ ತಾಲೂಕಿನ ಗಡಿ ಗ್ರಾಮವಾದ ಹಂಪಾಪುರದಲ್ಲಿ ಸುಭಾಷ್ ಎಂ.ರಾವ್ ಮೆಮೊರಬಲ್ ಟ್ರಸ್ಟ್ ಆಯೋಜಿಸಿದ್ದ ಸುಭಾಷ್ ಎಂ. ರಾವ್ ಅವರ 20ನೇ ವರ್ಷದ ಸಂಸ್ಮರಣೆ ಹಾಗೂ ಅಜಾತಶತ್ರು ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಿ ಮಾತನಾಡಿದರು. ರೈತನ ಜೀವನಾಧಾರವಾದ ಬೇಸಾಯ ಚಟುವಟಿಕೆಗಳಿಗೆ ಅಗತ್ಯವಾಗಿ ಬೇಕಾಗಿರುವ ದೇಸಿ ತಳಿಯ ರಾಸುಗಳನ್ನು ಸಂರಕ್ಷಣೆ ಮಾಡಿ, ಭೂಮಿಯ ಫಲವತ್ತತೆಯನ್ನು ಸಂರಕ್ಷಣೆ ಮಾಡುವ ಜೊತೆಗೆ ಗೋಮೂತ್ರ ಹಾಗೂ ಸಗಣೆಯನ್ನು ಬಳಕೆ ಮಾಡಿಕೊಂಡು ಉಪ ಉತ್ಪನ್ನಗಳ ಜೊತೆಗೆ ಔಷದಗಳನ್ನು ತಯಾರಿಸಿ ಆರೋಗ್ಯವಂತ ಸಮಾಜದ ನಿರ್ಮಾಣಕ್ಕಾಗಿ ತಮ್ಮನ್ನು ಸಮರ್ಪಣೆ ಮಾಡಿಕೊಂಡು ದುಡಿಯುತ್ತಿರುವ ಸ್ವರೂಪರಾಣಿ ಮಧುಸೂದನ್ ಅವರಂತಹ ಸಮಾಜಮುಖಿ ಕಾಳಜಿ ಹಾಗೂ ಬದ್ಧತೆಯನ್ನು ಹೊಂದಿರುವ ಜನರು ಇಂದಿನ ಸಮಾಜಕ್ಕೆ ಅಗತ್ಯವಾಗಿ ಬೇಕಾಗಿದ್ದಾರೆ.

ಪ್ರತಿವರ್ಷವೂ ಇಂತಹ ಅಪರೂಪದ ಕಾರ್ಯಕ್ರಮಗಳನ್ನು ಆಯೋಜಿಸಿ ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ದುಡಿಯುತ್ತಿರುವ ಶ್ರೇಷ್ಠ ಶಿಕ್ಷಕರನ್ನು ಗುರುತಿಸಿ ಸನ್ಮಾನಿಸಿ ಗೌರವಿಸುವ ಕಾರ್ಯವನ್ನು ಕಳೆದ 20 ವರ್ಷಗಳಿಂದ ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ. ದೇಶದ ಬೆನ್ನೆಲುಬಾಗಿರುವ ರೈತನ ಬೇಸಾಯ ಚಟುವಟಿಕೆಗಳಿಗೆ ಮಾರ್ಗದರ್ಶನವನ್ನು ಮಾಡುತ್ತಾ ರಾಸಾಯನಿಕ ಗೊಬ್ಬರಗಳು ಹಾಗೂ ಕ್ರಿಮಿನಾಶಕಗಳನ್ನು ಬಳಸದೆ ದೇಸಿ ತಳಿಯ ಗಂಜಲ ಮತ್ತು ಸಗಣಿಯನ್ನು ಬಳಸಿ ಜೀವಾಮೃತವನ್ನು ತಯಾರಿಸುವಲ್ಲೂ ಮಾರ್ಗದರ್ಶನ ಮಾಡಿ ಶೂನ್ಯ ಬಂಡವಾಳದ ಮೂಲಕ ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿ ಮಾಡಿಕೊಳ್ಳಲು ಸೂಕ್ತ ಸಲಹೆ ಸೂಚನೆ ನೀಡುತ್ತಿರುವ ಈ ದಂಪತಿಗಳು ಕೃಷಿಯನ್ನು ರೈತರು ಲಾಭದಾಯಕ ಉದ್ಯಮವನ್ನಾಗಿ ಮಾಡಿಕೊಳ್ಳಲು ಪ್ರೇರಕ ಶಕ್ತಿಯಾಗಿದ್ದಾರೆ ಎಂದು ಮಂಜುನಾಥ್ ಅಭಿಮಾನದಿಂದ ಹೇಳಿದರು.

ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ದೈಹಿಕ ಶಿಕ್ಷಣ ನಿರ್ದೇಶಕರಾದ ಲೋಕೇಶ್ ಮಾತನಾಡಿ ತಮ್ಮ ಇದ್ಧೊಬ್ಬ ಮಗನನ್ನು ಹೃದಯ ಸಂಬಂಧಿ ಖಾಯಿಲೆಯಿಂದ ಕಳೆದುಕೊಂಡು ಜೀವನವೇ ಬೇಡವೆಂಬ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾಗ ಸ್ವರೂಪರಾಣಿ ಮಧುಸೂದನ್ ದಂಪತಿಗಳು ತಮ್ಮಲ್ಲಿನ ಅಪಾರವಾದ ನೋವನ್ನು ನುಂಗಿಕೊಂಡು ಕಳೆದುಹೋದ ಮಗನ ಹೆಸರಿನಲ್ಲಿ ಟ್ರಸ್ಟ್ ಅನ್ನು ಸ್ಥಾಪಿಸಿ ನೂರಾರು ದೇಸಿ ತಳಿಯ ರಾಸುಗಳನ್ನು ಸಂರಕ್ಷಣೆ ಮಾಡುವ ಜೊತೆಗೆ ರೈತರಿಗೆ ನೈಸರ್ಗಿಕ ಕೃಷಿಯ ಬಗ್ಗೆ ಮಾರ್ಗದರ್ಶನ ಮಾಡಿ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಬೇಕಾಗುವ ಔಷಧಗಳನ್ನು ತಯಾರಿಸಿ ಪಾರಂಪರಿಕ ವೈದ್ಯ ಪದ್ಧತಿಯ ಚಿಕಿತ್ಸೆಯನ್ನು ನೀಡಿ, ಈ ಭಾಗದಲ್ಲಿ ಎಲ್ಲರಿಗೂ ಬೇಕಾಗಿರುವ ವ್ಯಕ್ತಿಗಳಾಗಿ ಹೊರಹೊಮ್ಮಿರುವ ದಂಪತಿಗಳು ಪ್ರತಿ ವರ್ಷವೂ ಇಬ್ಬರು ಜನ ಮೆಚ್ಚಿದ ಶಿಕ್ಷಕರನ್ನು ಗುರುತಿಸಿ ಗೌರವಿಸುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ಶಿಕ್ಷಣ ಹೆಚ್ಚಾಗುವ ನಿಟ್ಟಿನಲ್ಲಿ ಭರವಸೆಯನ್ನು ಮೂಡಿಸಿ ಪ್ರಾಮಾಣಿಕವಾಗಿ ಸದ್ದಿಲ್ಲದೆ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಇವರ ನಿಸ್ವಾರ್ಥ ಸೇವಾ ಚಟುವಟಿಕೆಗಳು ಕಲುಷಿತಗೊಂಡಿರುವ ಇಂದಿನ ಸಮಾಜಕ್ಕೆ ಅಗತ್ಯವಾಗಿ ಬೇಕಾಗಿವೆ ಎಂದು ಲೋಕೇಶ್ ಸ್ಮರಿಸಿದರು.

ಇದೇ ಸಂದರ್ಭದಲ್ಲಿ ಶ್ರೀರಂಗಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ರೇಖಾ ಗೌಡಗೆರೆಯ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಅರವಿಂದ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರಾಧ್ಯಾಪಕರಾದ ಡಾ.ಚಂದ್ರು, ಹರದನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಶಿವಕುಮಾರ್, ಪುರಸಭೆ ಮಾಜಿ ಸದಸ್ಯ ಕೆ.ಆರ್.ನೀಲಕಂಠ ಮತ್ತಿತರರು ಕಾರ್ಯಕ್ರಮದಲ್ಲಿ ಮಾತನಾಡಿದರು. ಹಿರಿಯ ಪತ್ರಕರ್ತರಾದ ಹೆಚ್.ಬಿ. ಮಂಜುನಾಥ್, ಸೈಯದ್ ಕಲೀಲ್, ಪ್ರಥಮ ದರ್ಜೆ ವಿದ್ಯುತ್ ಗುತ್ತಿಗೆದಾರ ನಾಗೇಶ್, ಕಟ್ಟೆಕ್ಯಾತನಹಳ್ಳಿ ಶಿವಕುಮಾರ್ ಗ್ರಾಮದ ಮುಖಂಡ ಪುಟ್ಟಣ್ಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.

About The Author

error: Content is protected !!